Sheena Bora murder case : ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ಇಂದ್ರಾಣಿ ಮುಖರ್ಜಿ ಅವರ ಪುತ್ರಿ ವಿಧಿ ಮುಖರ್ಜಿ ಅವರು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಸಿಬಿಐ ಚಾರ್ಜ್‌ಶೀಟ್‌ನಲ್ಲಿ ತಮ್ಮ ಹೆಸರಿನಲ್ಲಿರುವ ಹೇಳಿಕೆಗಳು ತಮ್ಮದಲ್ಲ ಮತ್ತು ಅವು ನಕಲಿ ಎಂದು ಹೇಳಿದ್ದಾರೆ. ಈ ಒಂದು ಹೇಳಿಕೆ ಪ್ರಾಸಿಕ್ಯೂಷನ್‌ಗೆ ಹೊಡೆತ ನೀಡಿದೆ ಎಂದು ತೋರುತ್ತದೆ.
ಅಂದಹಾಗೆ, ವಿಧಿ ಮುಖರ್ಜಿ ಅವರು ಈ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಮತ್ತು ಅವರ ಮಾಜಿ ಪತಿ ಸಂಜೀವ್ ಖನ್ನಾ ಅವರ ಪುತ್ರಿ. ಮಂಗಳವಾರ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ನ್ಯಾಯಾಧೀಶ ಜೆ.ಪಿ. ದಾರೇಕರ್ ಅವರ ಮುಂದೆ ತಮ್ಮ ಸಾಕ್ಷ್ಯವನ್ನು ದಾಖಲಿಸುವಾಗ ಈ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ. ಯಾವುದೇ ತನಿಖಾ ಸಂಸ್ಥೆ ನನ್ನ ಹೇಳಿಕೆಯನ್ನು ದಾಖಲಿಸಿಲ್ಲ ಮತ್ತು ನನ್ನ ಹೆಸರಿನಲ್ಲಿ ದಾಖಲಿಸಲಾದ ಹೇಳಿಕೆಗಳು ನಕಲಿ ಎಂದು ವಿಧಿ ಮುಖರ್ಜಿ ಹೇಳಿದ್ದಾರೆ.
ಇಂದ್ರಾಣಿ ಬಂಧನದ ನಂತರ, ಪೀಟರ್ ಮುಖರ್ಜಿ ಮತ್ತು ಅವರ ಕುಟುಂಬ ಸದಸ್ಯರು ಆಸ್ತಿಗಾಗಿ ಜಗಳವಾಡಿದ್ದಾರೆ ಎಂದು ವಿಧಿ ಅವರು ಇದೇ ಸಂದರ್ಭದಲ್ಲಿ ಹೇಳಿದರು. ಪೀಟರ್ ಅವರ ಪುತ್ರರಾದ ರಾಹುಲ್ ಮತ್ತು ರಾಬಿನ್, ಇಂದ್ರಾಣಿ ಅವರ ಕೋಟ್ಯಂತರ ಮೌಲ್ಯದ ಆಭರಣಗಳು ಮತ್ತು 7 ಕೋಟಿ ರೂ. ನಗದನ್ನು ಲೂಟಿ ಮಾಡಿದ್ದಾರೆ. ಇಂದ್ರಾಣಿ ಬಳಸುತ್ತಿದ್ದ ಸುಗಂಧ ದ್ರವ್ಯಗಳು, ಬ್ಯಾಗ್‌ಗಳು ಮತ್ತು ಸೀರೆಗಳಿಗಾಗಿ ಕುಟುಂಬ ಸದಸ್ಯರು ಜಗಳವಾಡಿದ್ದಾರೆ ಎಂದು ಹೇಳಿದರು. ಅಲ್ಲದೆ, ತನ್ನ ತಾಯಿಗೆ ಆಸ್ತಿಗಳನ್ನು ಹಸ್ತಾಂತರಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ತನ್ನ ತಾಯಿ ಇಂದ್ರಾಣಿ ಮುಖರ್ಜಿ ಅವರನ್ನು ಉದ್ದೇಶಪೂರ್ವಕವಾಗಿ ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹೀಗಾಗಿ ಅವರು ತಮ್ಮ ಆಸ್ತಿಗಳನ್ನು ಹಸ್ತಾಂತರಿಸಬೇಕಾಗುತ್ತದೆ ಎಂದು ಹೇಳಿದರು.
ನನ್ನ ತಾಯಿಯ ಬಂಧನದ ಸಮಯದಲ್ಲಿ ನಾನು ಅಪ್ರಾಪ್ತ ವಯಸ್ಕಳಾಗಿದ್ದೆ ಮತ್ತು ಆ ಸಮಯದಲ್ಲಿ ನಾನು ತೀವ್ರವಾಗಿ ನೊಂದಿದ್ದೆ ಎಂದು ವಿಧಿ ಅವರು ವಿಶೇಷ ನ್ಯಾಯಾಧೀಶರಿಗೆ ತಿಳಿಸಿದರು. ಪ್ರಕರಣದ ತನಿಖೆಯ ಸಮಯದಲ್ಲಿ ಮುಂಬೈ ಪೊಲೀಸರು ಮೊದಲು ನನ್ನನ್ನು ಸಂಪರ್ಕಿಸಿದರು. ಇದಾದ ನಂತರ ಸಿಬಿಐ ನನ್ನನ್ನು ಪ್ರಶ್ನಿಸಲು ಬಯಸಿತು. ಅವರು ಕೇಳಿದ ಪ್ರಶ್ನೆಗಳಿಗೆ ನಾನು ಉತ್ತರಿಸಿದ್ದೇನೆ. ಆದಾಗ್ಯೂ, ಪೊಲೀಸರು ಅಥವಾ ಸಿಬಿಐ ಎಲ್ಲಿಯೂ ನನ್ನ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿಲ್ಲ ಎಂದರು.
ಸಿಬಿಐ ಕಚೇರಿಯಲ್ಲಿ ಖಾಲಿ ದಾಖಲೆಗಳು ಮತ್ತು ಕೆಲವು ಇಮೇಲ್ ಪ್ರತಿಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಯಿತು ಮತ್ತು ಆರೋಪಪಟ್ಟಿಯಲ್ಲಿರುವ ಹೇಳಿಕೆಗಳನ್ನು ನನ್ನದು ಎಂಬಂತೆ ಪ್ರಸ್ತುತಪಡಿಸುವಲ್ಲಿ ದುರುದ್ದೇಶವಿದೆ. ಈ ಪ್ರಕರಣದಲ್ಲಿ ನನ್ನ ಪಾಲಕರನ್ನು ಸಿಲುಕಿಸುವ ಉದ್ದೇಶಪೂರ್ವಕ ಪ್ರಯತ್ನ ನಡೆಯುತ್ತಿದೆ ಎಂದು ವಿಧಿ ಅವರು ಅನುಮಾನ ವ್ಯಕ್ತಪಡಿಸಿದರು.
ಶೀನಾ ಬೋರಾಳನ್ನು ನನ್ನ ತಾಯಿ ಇಂದ್ರಾಣಿ ಮುಖರ್ಜಿ, ತನ್ನ ಸಹೋದರಿ ಎಂದು ಜಗತ್ತಿಗೆ ಪರಿಚಯಿಸಿದರು. ಒಂದು ಕಾಲದಲ್ಲಿ, ಇಬ್ಬರೂ ತುಂಬಾ ಆಪ್ತರಾಗಿದ್ದರು. ಪೀಟರ್ ಮುಖರ್ಜಿಯ ಹಿರಿಯ ಮಗ ರಾಹುಲ್ ಮಧ್ಯ ಪ್ರವೇಶ ಮಾಡಿದಾಗ ಪರಿಸ್ಥಿತಿ ಬದಲಾಯಿತು. ಅವರು ಮಧ್ಯ ಮುಂಬೈನ ವರ್ಲಿಯಲ್ಲಿರುವ ಬೋರಾಳ ಪ್ಲಾಟ್‌ಗೆ ಆಗಾಗ್ಗೆ ಭೇಟಿ ನೀಡಲು ಪ್ರಾರಂಭಿಸಿದರು. ಅಂದಿನಿಂದ, ಬಿರುಕುಗಳು ಪ್ರಾರಂಭವಾದವು. ರಾಹುಲ್, ಶೀನಾ ಬೋರಾಳೊಂದಿಗೆ ಆಪ್ತನಾಗಿದ್ದಲ್ಲದೆ, ಅವನು ಡ್ರಗ್ಸ್ ತೆಗೆದುಕೊಳ್ಳಲು ಪ್ರಾರಂಭಿಸಿದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ನಾನು ಬೋರಾಳನ್ನು ಕೊನೆಯ ಬಾರಿಗೆ ನೋಡಿದ್ದು 2011 ರಲ್ಲಿ ಗೋವಾದಲ್ಲಿ ನಡೆದ ಮದುವೆಯಲ್ಲಿ ಎಂದು ವಿಧಿ ಹೇಳಿದ್ದಾರೆ. ಆದರೆ, ನ್ಯಾಯಾಲಯಕ್ಕೆ 2013 ರವರೆಗೆ ಇಮೇಲ್ ಮೂಲಕ ಸಂಪರ್ಕದಲ್ಲಿದ್ದೆ ಎಂದಿದ್ದಾರೆ.
2015, ಆಗಸ್ಟ್ ತಿಂಗಳಲ್ಲಿ ಆಕೆಯ ತಾಯಿಯನ್ನು ಬಂಧಿಸುವವರೆಗೂ ಎಲ್ಲವೂ ಚೆನ್ನಾಗಿತ್ತು. ಆ ಸಮಯದಲ್ಲಿ, ಪೀಟರ್ ಅವರ ಮಗ ರಾಹುಲ್ ನಿರುದ್ಯೋಗಿಯಾಗಿದ್ದ. ರಾಹುಲ್ ಅವರ ಆರ್ಥಿಕ ಪರಿಸ್ಥಿತಿಯೂ ತುಂಬಾ ಕಳಪೆಯಾಗಿತ್ತು. ಅದಕ್ಕಾಗಿಯೇ ಅವರಿಬ್ಬರೂ ಹಣಕ್ಕಾಗಿ ಇಂದ್ರಾಣಿಯ ಆಭರಣಗಳನ್ನು ಕದ್ದರು. ಅದನ್ನು ಅವರು ಹೊಸ ಬ್ಯಾಂಕ್ ಲಾಕರ್‌ನಲ್ಲಿ ಬಚ್ಚಿಟ್ಟರು ಎಂದು ವಿಧಿ ಹೇಳಿದರು. ಇದರಿಂದಾಗಿಯೇ ಅವರು ನನ್ನ ತಾಯಿ ಇಂದ್ರಾಣಿಯ ಮೇಲೆ ಸುಳ್ಳು ಆರೋಪ ಹೊರಿಸಿದ್ದರು ಎಂಬುದು ಸ್ಪಷ್ಟವಾಗುತ್ತದೆ. ನಿಮಗೆ ನಿಮ್ಮ ತಾಯಿ ಬೇಕೇ? ಅಥವಾ ನಿಮಗೆ ಮುಖರ್ಜಿಯ ಉತ್ತರಾಧಿಕಾರ ಬೇಕೇ? ಎಂದು ಪೀಟರ್ ಮಗ ರಾಬಿನ್ ತನಗೆ ಬೆದರಿಕೆ ಹಾಕಿದನು. ಅಲ್ಲದೆ, ತಾಯಿಯ ಪರವಾಗಿ ನಿಂತರೆ, ಆಸ್ತಿಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂದರು ಅಂತ ವಿಧಿ ನ್ಯಾಯಾಲಯಕ್ಕೆ ತಿಳಿಸಿದರು.
ಅಂದಹಾಗೆ, ಶೀನಾ ಬೋರಾ, ಇಂದ್ರಾಣಿ ಮುಖರ್ಜಿಯಾ ಮತ್ತು ಅವರ ಮೊದಲ ಪತಿ ಸಿದ್ಧಾರ್ಥ್ ದಾಸ್ ಅವರ ಮಗು. ಶೀನಾ ಬೋರಾ 2012 ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ನಾಪತ್ತೆಯಾಗಿದ್ದರು. ಆದಾಗ್ಯೂ, ಇಂದ್ರಾಣಿ ಶೀನಾ ಬೋರಾ ಅಮೆರಿಕದಲ್ಲಿ ಅಧ್ಯಯನ ಮಾಡಲು ಹೋಗಿದ್ದಾಳೆ ಎಂದು ಎಲ್ಲರಿಗೂ ಹೇಳುತ್ತಲೇ ಇದ್ದರು. ಆದರೆ, 2015ರಲ್ಲಿ, ಇಂದ್ರಾಣಿಯ ಚಾಲಕ ಶ್ಯಾಮ್‌ವರ್ ರಾಯ್ ಅವರನ್ನು ಪೊಲೀಸರು ಒಂದು ಪ್ರಕರಣದಲ್ಲಿ ಬಂಧಿಸಿದರು. ಆತನನ್ನು ವಿಚಾರಣೆ ನಡೆಸಿದಾಗ ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದಿತು.
ಈ ಪ್ರಕರಣದಲ್ಲಿ, ಪೊಲೀಸರು ಇಂದ್ರಾಣಿ, ಆಕೆಯ ಮಾಜಿ ಗಂಡಂದಿರಾದ ಸಂಜೀವ್ ಖನ್ನಾ ಮತ್ತು ಪೀಟರ್ ಮುಖರ್ಜಿಯಾ ಅವರನ್ನು ಬಂಧಿಸಿದ್ದಾರೆ. ಇಂದ್ರಾಣಿ, ಸಂಜೀವ್ ಮತ್ತು ಚಾಲಕ ಶ್ಯಾಮ್‌ವರ್ ಶೀನಾಳನ್ನು ಕಾರಿನಲ್ಲಿ ಉಸಿರುಗಟ್ಟಿಸಿ ಕೊಂದಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿಕೊಂಡಿದೆ. ಕೊಲೆಯ ನಂತರ, ಆಕೆಯ ದೇಹವನ್ನು ಸುಟ್ಟು ರಾಯಗಢ ಕಾಡಿನಲ್ಲಿ ಎಸೆದಿದ್ದಾರೆ ಎನ್ನಲಾಗಿದೆ. ಇದಲ್ಲದೆ, ಶೀನಾಳ ಹೆಸರಿನಲ್ಲಿ ಇಮೇಲ್‌ಗಳನ್ನು ಎಲ್ಲರಿಗೂ ಕಳುಹಿಸಿದ್ದು, ಆಕೆಯ ಮರಣದ ನಂತರವೂ ಜೀವಂತವಾಗಿದ್ದಾಳೆ ಎಂದು ನಂಬುವಂತೆ ಇಂದ್ರಾಣಿ ಮಾಡಿದ್ದಾಳೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಪೀಟರ್ ಮತ್ತು ಸಂಜೀವ್‌ಗೆ ನ್ಯಾಯಾಲಯಗಳು ಜಾಮೀನು ನೀಡಿವೆ. ಆರುವರೆ ವರ್ಷಗಳ ಜೈಲುವಾಸದ ನಂತರ, 2022, ಮೇ 18 ರಂದು ಮುಂಬೈನ ಬೈಕುಲ್ಲಾ ಮಹಿಳಾ ಜೈಲಿನಿಂದ ಇಂದ್ರಾಣಿ ಜಾಮೀನಿನ ಮೇಲೆ ಬಿಡುಗಡೆಯಾದರು.