ಲಖನೌ: ಉತ್ತರಪ್ರದೇಶದ ಮೈನ್ಪುರಿಯ ಕರ್ಹಾಲ್ ವಿಧಾನಸಭೆಗೆ ನಡೆದ ಉಪಚುನಾವಣೆಗೆ ಇಂದು (ನವೆಂಬರ್ 20) ಮತದಾನ ನಡೆದಿದ್ದು, ಪೊಲೀಸರು ಮತದಾನದ ವೇಳೆ ರಸ್ತೆ ಬದಿ ಗೋಣಿಚೀಲದಲ್ಲಿ ದಲಿತ (Dalit) ಯುವತಿಯೊಬ್ಬಳ ಮೃತದೇಹ ಮತ್ತೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಸಿದ್ದು, ಬಿಜೆಪಿ ಹಾಗೂ ಸಮಾಜವಾದಿ ಪಕ್ಷದ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಮೃತರನ್ನು ದುರ್ಗಾ(23) ಎಂದು ಗುರುತಿಸಲಾಗಿದ್ದು, ವರದಿಗಳ ಪ್ರಕಾರ ಇವರು ಮಂಗಳವಾರದಿಂದ ನಾಪತ್ತೆಯಾಗಿದ್ದರು. ಕೊನೆಯದಾಗಿ ಕೆಲವು ಸ್ಥಳೀಯ ನಿವಾಸಿಗಳೊಂದಿಗೆ ಕಾಣಿಸಿಕೊಂಡಿದ್ದರು ಎಂದು ಹೇಳಲಾಗಿದೆ. ವಿಚಾರ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಗೋಣಿಚೀಲದಿಂದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ಧಾರೆ.
ಸುದ್ದಿ ಮೂಲಗಳ ಪ್ರಕಾರ ಯುವತಿ ದುರ್ಗಾ ಉಪಚುನಾವಣೆಯಲ್ಲಿ ತನ್ನ ಮತವನ್ನು ಬಿಜೆಪಿಗೆ ಹಾಕುವುದಾಗಿ ಹೇಳಿದ್ದಳು. ಈ ವಿಚಾರ ಸ್ಥಳೀಯ ಸಮಾಜವಾದಿ ಪಕ್ಷದ ಮುಖಂಡ ಪ್ರಶಾಂತ್ ಎಂಬಾತನನ್ನು ಕೆರಳಿಸಿತ್ತು. ನವೆಂಬರ್ 19ರಂದು ಆಕೆಗೆ ಕರೆ ಮಾಡಿ ಬೆದರಿಕೆಗಳನ್ನು ಹಾಕಲಾಗಿತ್ತು. ಆ ಬಳಿಕ ಗುಂಪೊಂದು ಆಕೆಯನ್ನು ಬೈಕಿನಲ್ಲಿ ಅಪಹರಿಸಿದ್ದಾಗಿ ಸ್ಥಳೀಯರು ಆರೋಪಿಸಿದ್ದು, ನವೆಂಬರ್ 20ರಂದು ಆಕೆಯ ದೇಹವು ಗೋಣಿಚೀಲದಲ್ಲಿ ಪತ್ತೆಯಾಗಿದೆ.
ಇತ್ತ ಮೃತ ದುರ್ಗಾಳ ಕುಟುಂಬಸ್ಥರು ತಮ್ಮ ಮಗಳು ಎಸ್ಪಿ ಅಭ್ಯರ್ಥಿಗೆ ಮತ ಹಾಕದಿರುವುದಕ್ಕೆ ಆಕೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದರಿಂದ ತೆರವಾದ ಸ್ಥಾನವು ಮೈನ್‌ಪುರಿ ಜಿಲ್ಲೆಗೆ ಸೇರಿರುವ ಕರ್ಹಾಲ್‌ನಲ್ಲಿ ಬುಧವಾರ ಮತದಾನ ನಡೆಯಿತು. 1993 ರಿಂದ ಸಮಾಜವಾದಿ ಪಕ್ಷದ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದು, ಪಕ್ಷವು ಅಖಿಲೇಶ್ ಯಾದವ್ ಅವರ ಸೋದರಳಿಯ ತೇಜ್ ಪ್ರತಾಪ್ ಯಾದವ್ ಅವರನ್ನು ಕ್ಷೇತ್ರದಿಂದ ಕಣಕ್ಕಿಳಿಸಿದೆ. ಏತನ್ಮಧ್ಯೆ, ಎರಡು ಪಕ್ಷಗಳಿಗೆ ಪ್ರತಿಷ್ಠೆಯ ಕದನವಾಗಿ ಪರಿಣಮಿಸಿರುವ ಕ್ಷೇತ್ರದಿಂದ ತೇಜ್ ಪ್ರತಾಪ್ ಯಾದವ್ ಅವರ ಮಾವ ಅನುಜೇಶ್ ಯಾದವ್ ಅವರನ್ನು ಬಿಜೆಪಿ ನಾಮನಿರ್ದೇಶನ ಮಾಡಿದೆ. ಕ್ಷೇತ್ರದಲ್ಲಿ, ಯಾದವರು ಸುಮಾರು 1.4 ಲಕ್ಷವನ್ನು ಹೊಂದಿದ್ದರೆ, ದಲಿತರು ಮತ್ತು ಮುಸ್ಲಿಮರು ಕ್ರಮವಾಗಿ 40,000 ಮತ್ತು 15,000 ಮತದಾರರಿದ್ದಾರೆ.