ನ್ಯೂಸ್

ಮಾರ್ಗಮಧ್ಯೆ ಹೆರಿಗೆಯಾಗಿ ಹಸುಗೂಸನ್ನು ಹೊತ್ತುಕೊಂಡೇ 160 ಕಿ.ಮೀ. ನಡೆದಳು ಆ ಮಹಾತಾಯಿ...!

ಭರ್ವಾನಿ: ಇಂದು ವಿಶ್ವ ತಾಯಂದಿರ ದಿನ. ಮಗುವಿಗೆ ಜನ್ಮ ನೀಡುವ ಹೊತ್ತಿಗೆ ತಾಯಿ ಅದೆಷ್ಟು ಸಂಕಷ್ಟಗಳನ್ನು ಅನುಭವಿಸಿರುತ್ತಾಳೆ ಎಂಬುದು ಊಹೆಗೂ ಮೀರಿದ್ದು. ಅಂಥದ್ದರಲ್ಲಿ ಶಿಶುವಿಗೆ ಜನ್ಮನೀಡಿದ ತಾಯಿ, ಮಗುವಿನೊಂದಿಗೆ ನೂರಕ್ಕೂ ಅಧಿಕ ಕಿ.ಮೀ. ಕಾಲ್ನಡಿಗೆಯಲ್ಲಿ ಸಾಗಿದ್ದಾಳೆ.

ಲಾಕ್​ಡೌನ್​​ನಿಂದಾಗಿ ವಲಸೆ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಿಂದ ತಮ್ಮೂರುಗಳಿಗೆ ಕಾಲ್ನಡಿಗೆಯಿಂದಲೇ ಧಾವಿಸುತ್ತಿದ್ದಾರೆ. ಇದರಿಂದ ತೀವ್ರ ಸಂಕಷ್ಟಕ್ಕೀಡಾಗುತ್ತಿದ್ದು, ಅದರಲ್ಲೂ ಗರ್ಭಿಣಿಯರಂತೂ ಪಡಬಾರದ ಕಷ್ಟ ಅನುಭವಿಸುತ್ತಿದ್ದಾರೆ.

ಮಹಾರಾಷ್ಟ್ರದ ನಾಸಿಕ್​​ದಿಂದ ಮಧ್ಯಪ್ರದೇಶದ ಸತ್ನಾಗೆ ಕಾಲ್ನಡಿಗೆಯಲ್ಲೇ ಹೊರಟ ಗರ್ಭಿಣಿ ಮಾರ್ಗಮಧ್ಯದಲ್ಲೇ ಮಗುವಿನ ಜನ್ಮ ನೀಡಿದ್ದಾಳೆ.

ಆಕೆಯ ಹೆಸರು ಶಕುಂತಲಾ. ಒಂಭತ್ತು ತಿಂಗಳ ತುಂಬು ಗರ್ಭಿಣಿ. ವಲಸೆ ಕಾರ್ಮಿಕನ ಪತ್ನಿ. ಕಾಲ್ನಡಿಗೆಯಿಂದಲೇ ಪ್ರಯಾಣ ಬೆಳೆಸಿದಾಗ ಮಾರ್ಗಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ. ಬಿಜಸಾನ್ ಪಟ್ಟಣದ ಬಳಿ ಹೊರಟಿದ್ದ ವಲಸೆ ಕಾರ್ಮಿಕರ ತಂಡವನ್ನು ಪೊಲೀಸರು ತಡೆದಾಗ ಶಕುಂತಲಾ ಕೈಯಲ್ಲಿರುವ ಹಸುಗೂಸನ್ನು ಕಂಡು ದಿಗ್ಭ್ರಾಂತರಾಗಿದ್ದಾರೆ.

ಈ ಕುರಿತು ವಿಚಾರಿಸಿದಾಗ ಅಂದಾಜು ಸಾವಿರ ಕಿಮೀ ದೂರ ನಡೆದುಕೊಂಡೇ ಊರು ತಲುಪಲು ಶಕುಂತಲಾ ಹಾಗೂ ಪತಿ ರಾಕೇಶ್ ಕೌಲ್ ನಿರ್ಧರಿಸಿದ್ದರು. ಅವರೊಂದಿಗೆ 14 ಜನ ಸೇರಿ ಒಟ್ಟು 16 ಜನ ಪ್ರಯಾಣ ಆರಂಭಿಸಿದ್ದರು.

ಆದರೆ, ಶಕುಂತಲಾಗೆ ಮಾರ್ಗ ಮಧ್ಯೆಯೇ ಹೆರಿಗೆ ನೋವು ಕಾಣಿಸಿಕೊಂಡಿದ್ದು, ತಂಡದ ಮಹಿಳೆಯರು ಹೆರಿಗೆ ಮಾಡಿಸಿದ್ದಾರೆ. ಆದರೆ, ಮನೆ ತಲುಪುವ ಆತುರದಲ್ಲಿ ಶಕುಂತಲಾ ಹೆರಿಗೆಯಾದ ಕೆಲವೇ ಸಮಯದ ನಂತರ ಮತ್ತೆ ಕಾಲ್ನಡಿಗೆ ಆರಂಭಿಸಿದ್ದಾಳೆ.

ಮಾರ್ಗಮಧ್ಯೆ ಈ ಬಾಣಂತಿಯನ್ನು ಸಿಖ್ ಕುಟುಂಬವೊಂದು ಉಪಚರಿಸಿ ಹಸುಗೂಸಿಗೆ ಹೊಸ ಬಟ್ಟೆ ನೀಡಿದೆ.

ಹೆರಿಗೆಯಾದ ಬಳಿಕ ಶಕುಂತಲಾ 160 ಕಿ.ಮೀ. ನಡೆದಿರುವುದನ್ನು ಕೇಳಿ ಪೊಲೀಸರು ಮರುಗಿದರು. ನಂತರ ಎಲ್ಲ ಕಾರ್ಮಿಕರಿಗೂ ಆಹಾರ ಅಗತ್ಯ ವಸ್ತುಗಳನ್ನು ನೀಡಿ ಎಲ್ಲರಿಗೂ ಮನೆ ತಲುಪಲು ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.