ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ಮದುವೆಯ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ. ಸೋನಾಕ್ಷಿ ಜೂನ್ 23ರಂದು ಮುಂಬೈನಲ್ಲಿ ಜಹೀರ್ ಜತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಆದರೆ ಈವರೆಗೂ ಸೋನಾಕ್ಷಿ ಮತ್ತು ಇಕ್ಬಾಲ್ ಈ ಸುದ್ದಿಯನ್ನು ಖಚಿತಪಡಿಸಿಲ್ಲ. ಇದೇ ವೇಳೆ ಅವರ ತಂದೆ, ನಟ ಹಾಗೂ ರಾಜಕಾರಣಿ ಶತ್ರುಘ್ನ ಸಿನ್ಹಾ ಹೇಳಿಕೆ ಹೊರಬಿದ್ದಿದೆ.
ಮಗಳ ಮದುವೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸೋನಾಕ್ಷಿಯ ಮದುವೆಯ ಬಗ್ಗೆ ನನಗೆ ಗೊತ್ತಿರುವುದು ಮಾಧ್ಯಮಗಳಿಂದ ಕೇಳಿದಷ್ಟು ಮಾತ್ರ. ನಾನು ಇದೀಗ ದೆಹಲಿಯಲ್ಲಿದ್ದೇನೆ. ಚುನಾವಣಾ ಫಲಿತಾಂಶದ ನಂತರ ನಾನು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದ್ದಾರೆ.
ತಮ್ಮ ಮಗಳ ಮದುವೆ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ ಶತ್ರುಘ್ನ ಸಿನ್ಹಾ ಅವರು, ಮಾಧ್ಯಮಗಳಿಗೆ ಎಲ್ಲವೂ ತಿಳಿದಿದೆ, ನಿಮಗೆ ಗೊತ್ತಿಲ್ಲದಿದ್ದರೆ ಹೇಗೆ ಎಂದು ಅನೇಕ ಆಪ್ತರು ನನ್ನನ್ನು ಕೇಳುತ್ತಿದ್ದಾರೆ. ಹಾಗಾಗಿ ಈ ಬಗ್ಗೆ ನಾನು ಏನು ಹೇಳಬಲ್ಲೆ ಎಂದರೆ, ಇಂದಿನ ಮಕ್ಕಳು ಹೆತ್ತವರನ್ನು ಕೇಳುವುದಿಲ್ಲ. ಅವರು ಕೇವಲ ಪಾಲಕರಿಗೆ ತಿಳಿಸುತ್ತಾರೆ. ನಾವೂ ಸಹ ಮಾಹಿತಿಗಾಗಿ ಕಾಯುತ್ತಿದ್ದೇವೆ ಎಂದಿದ್ದಾರೆ.
ಮಗಳ ನಿರ್ಧಾರದ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ ಎಂದಿರುವ ಅವರು ಸೋನಾಕ್ಷಿ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಅವಳು ಎಂದಿಗೂ ಕಾನೂನುಬಾಹಿರ ಅಥವಾ ತಪ್ಪು ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ತನ್ನದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳುವ ಎಲ್ಲ ಹಕ್ಕನ್ನು ಅವಳು ಹೊಂದಿದ್ದಾಳೆ ಎಂದು ಸಂತಸ ವ್ಯಕ್ತಪಡಿಸಿದರು. (ಏಜೆನ್ಸೀಸ್)