ನ್ಯೂಸ್

ಬ್ರೇಕಪ್​ಗೆ ಒಪ್ಪದ ಪ್ರಿಯಕರನಿಗೆ ವಿಷವುಣಿಸಿ ಕೊಂದ ಪ್ರಕರಣ: ಗ್ರೀಷ್ಮಾಗೆ ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್​! Sharon raj and Greeshma

sharon raj and Greeshma : ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್​ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದ ಗ್ರೀಷ್ಮಾಳಿಗೆ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್​ಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡವನ್ನು ಕೋರ್ಟ್​ ಸೋಮವಾರ (ಜ.20)​ ವಿಧಿಸಿದೆ.

ತಿರುವನಂತಪುರದ ನೆಯ್ಯಟ್ಟಿಂಕರ ಸೆಷನ್ಸ್ ನ್ಯಾಯಾಲಯ ನೀಡಿದ ತೀರ್ಪನ್ನು ಕೇಳುತ್ತಿದ್ದಂತೆಯೇ ಶರೋನ್ ರಾಜ್​ ಪೋಷಕರು ಕಣ್ಣಲ್ಲಿ ನೀರು ತುಂಬಿಕೊಂಡಿತು. ಹಲವು ದಿನಗಳ ಕಾನೂನು ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿತು ಎಂಬ ಭಾವನೆ ಶರೋನ್​ ಪಾಲಕರಲ್ಲಿ ಮೂಡಿತು. ಆದರೆ, ಆರೋಪಿ ಗ್ರೀಷ್ಮಾ ಮಾತ್ರ ಯಾವುದೇ ಅಭಿವ್ಯಕ್ತಿಯನ್ನು ತೋರಿಸದಿರುವುದು ಅಚ್ಚರಿಗೆ ಕಾರಣವಾಯಿತು. ಇದೊಂದು ಅಪರೂಪದ ಪ್ರಕರಣವೆಂದು ಗಮನಿಸಿರುವ ನ್ಯಾಯಾಲಯ ಗಲ್ಲು ಶಿಕ್ಷೆಯನ್ನು ವಿಧಿಸಿದೆ.

ನ್ಯಾಯಾಧೀಶ ಎ.ಎಂ. ಬಶೀರ್ ಅವರು ಈ ಮಹತ್ವದ ತೀರ್ಪುನ್ನು ಪ್ರಕಟಿಸಿದರು. ಇದೇ ಸಂದರ್ಭದಲ್ಲಿ ತನಿಖಾ ಅಧಿಕಾರಿಗಳನ್ನು ನ್ಯಾಯಾಲಯ ಶ್ಲಾಘಿಸಿತು. ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಪೊಲೀಸರು ತನಿಖಾ ವಿಧಾನಗಳನ್ನು ಬದಲಾಯಿಸಿದ್ದಾರೆ ಎಂದು ನ್ಯಾಯಾಲಯವು ಪ್ರಶಂಸಿಸಿತು.

ಅಂದಹಾಗೆ ಗ್ರೀಷ್ಮಾಗೆ ಶಿಕ್ಷೆಯಾಗುವುದು ಶರೋನ್‌ಗೆ ಇಷ್ಟವಿರಲಿಲ್ಲ. ಮರಣಶಯ್ಯೆಯಲ್ಲಿದ್ದಾಗಲೂ ಶರೋನ್‌, ಗ್ರೀಷ್ಮಾಳನ್ನು ಪ್ರೀತಿಸುತ್ತಿದ್ದನು. ಈ ಪ್ರಕರಣದಲ್ಲಿ ಗ್ರೀಷ್ಮಾಗೆ ವಯಸ್ಸಿನ ಯಾವುದೇ ಸಡಿಲಿಕೆ ನೀಡಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪ್ರೇಮ ಸಂಬಂಧದ ಸಮಯದಲ್ಲಿಯೂ ಶರೋನ್​​ನನ್ನು ಕೊಲ್ಲಲು ಗ್ರೀಷ್ಮಾ ಪ್ರಯತ್ನಿಸಿದಳು. ಗ್ರೀಷ್ಮಾಳ ಕೃತ್ಯ ನಂಬಿಕೆ ದ್ರೋಹವಾಗಿದೆ. ಕೊಲೆ ಯತ್ನವೂ ಸಾಬೀತಾಗಿದೆ ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಲಾಗಿದೆ. ಜ್ಯೂಸ್‌ನಲ್ಲಿ ಏನೋ ತಪ್ಪಿದೆ ಎಂದು ಶರೋನ್ ಭಾವಿಸಿದ್ದ. ಅದಕ್ಕಾಗಿಯೇ ಆತ ವಿಡಿಯೋ ಕೂಡ ರೆಕಾರ್ಡ್​ ಕೂಡ​ ಮಾಡಿದ್ದ. ಆದರೆ, ಗ್ರೀಷ್ಮಾ ಮೇಲೆ ಮಾತ್ರ ಯಾವುದೇ ಆರೋಪ ಮಾಡಿರಲಿಲ್ಲ. ಇನ್ನು ಶರೋನ್, ಗ್ರೀಷ್ಮಾಳ ಮೇಲೆ ಹಲ್ಲೆ ಮಾಡಿದ್ದಾನೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯವು ಹೇಳಿದೆ.

ಗ್ರೀಷ್ಮಾ ತಾನು ಪ್ರೀತಿಸುವ ಯಾರನ್ನೂ ನಂಬಲು ಸಾಧ್ಯವಿಲ್ಲ ಎಂದು ಶರೋನ್​ಗೆ ಮಸೇಜ್​ ಕಳುಹಿಸಿದ್ದಾಳೆ. ಲೈಂಗಿಕ ಕ್ರಿಯೆ ನಡೆಸುವುದಾಗಿ ಭರವಸೆ ನೀಡಿ ಶರೋನ್​ನನ್ನು ಮನೆಗೆ ಕರೆಸಿ ಜ್ಯೂಸ್​ನಲ್ಲಿ ವಿಷ ಬೆರೆಸಿ ಕೊಡಲಾಗಿದೆ. ಶರೋನ್ ಹನ್ನೊಂದು ದಿನಗಳ ಕಾಲ ಒಂದು ಹನಿ ನೀರು ಕುಡಿಯದೆ ಆಸ್ಪತ್ರೆಯಲ್ಲಿ ಒದ್ದಾಡಿದ್ದಾನೆ. ಆದರೂ, ಆತ ಗ್ರೀಷ್ಮಾಳ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.

ತನಿಖೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಗ್ರೀಷ್ಮಾ ಆತ್ಮಹತ್ಯೆಗೆ ಯತ್ನಿಸಿದ್ದಳು. ಗ್ರೀಷ್ಮಾ ವಿರುದ್ಧ 48 ಸಾಂದರ್ಭಿಕ ಸಾಕ್ಷ್ಯಗಳಿವೆ. ಹಂತ ಹಂತವಾಗಿ ಶರೋನ್​ನನ್ನು ಕೊಲ್ಲುವುದು ಆಕೆಯ ಗುರಿಯಾಗಿತ್ತು. ಇದೊಂದು ಯೋಜಿತ ಕೊಲೆ. ಗರಿಷ್ಠ ಶಿಕ್ಷೆಯನ್ನು ನಿಷೇಧಿಸುವ ಯಾವುದೇ ಕಾನೂನು ಇಲ್ಲ ಎಂದು ನ್ಯಾಯಾಲಯ ಹೇಳಿದೆ. ಅಂದಹಾಗೆ ಈ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಗ್ರೀಷ್ಮಾಳ ತಾಯಿ ಸಿಂಧು ಅವರನ್ನು ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯ ಖುಲಾಸೆಗೊಳಿಸಿದೆ.

ಏನಿದು ಪ್ರಕರಣ?

ಕೇರಳದ ತಿರುವನಂತಪುರದಲ್ಲಿ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಳು. ಅ. 14ರಂದು ಶರೋನ್​ ರಾಜ್​ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್​, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಆತ ಮೃತಪಟ್ಟನು. ಸಂಚು ರೂಪಿಸಿ ಆತನನ್ನು ಗ್ರೀಷ್ಮಾ ಕೊಲೆ ಮಾಡಿದ್ದಾಳೆ.

ಪ್ರಯತ್ನಗಳು ವಿಫಲವಾದ್ದರಿಂದ ಕೊಲೆ

ಗ್ರೀಷ್ಮಾ 2022ರ ಮಾರ್ಚ್ 4ರಂದು ಯೋಧನೊಬ್ಬನ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು. ಬಳಿಕ ಶರೂನ್​ ಜತೆ ತನ್ನ ಸಂಬಂಧವನ್ನು ಕಡಿದುಕೊಂಡಿದ್ದಳು. ಆದರೆ, ಮೇ ತಿಂಗಳಲ್ಲಿ ಶರೂನ್​ ಮತ್ತೆ ಗ್ರೀಷ್ಮಾಗೆ ಹತ್ತಿರವಾಗಿದ್ದ.​ ಬಳಿಕ ನವೆಂಬರ್‌ನಲ್ಲಿ ಶರೋನ್ ಅವರ ಮನೆಯಲ್ಲಿ ಮತ್ತು ನಂತರ ವೆಟ್ಟುಕಾಡ್ ಚರ್ಚ್‌ನಲ್ಲಿ ಇಬ್ಬರು ವಿವಾಹವಾದರು. ಇದಾದ ಬಳಿಕ ಥ್ರಿಪ್ಪರಪುವಿನಲ್ಲಿ ರೂಮ್​ ಬುಕ್​ ಮಾಡಿ ಇಬ್ಬರು ಲೈಂಗಿಕ ಕ್ರಿಯೆ ನಡೆಸಿದರು. ಯೋಧನ ಜತೆ ತನ್ನ ಮದುವೆ ದಿನ ಹತ್ತಿರ ಬರುತ್ತಿದ್ದಂತೆ ಶರೂನ್​ನಿಂದ ದೂರಾಗಲು ಗ್ರೀಷ್ಮಾ ಬಯಸಿದಳು. ಲವ್​ ಬ್ರೇಕಪ್​ ಮಾಡಿಕೊಳ್ಳಲು ಸಾಕಷ್ಟು ಮನವೊಲಿಸಿದಳು. ಆದರೆ, ಅದಕ್ಕೆ ಆತ ಒಪ್ಪಲಿಲ್ಲ. ತನ್ನ ಜಾತಕದ ಪ್ರಕಾರ ಮೊದಲ ಪತಿ ಸಾಯುತ್ತಾನೆ ಎಂದು ಹೇಳುವ ಮೂಲಕ ರಾಜ್​ನನ್ನು ಬೆದರಿಸುವ ಪ್ರಯತ್ನ ಮಾಡಿದ್ದಳು. ಆದರೂ ಆತ ಆಕೆಯನ್ನು ಬಿಡಲು ತಯಾರಿರಲಿಲ್ಲ. ತನ್ನೆಲ್ಲ ಪ್ರಯತ್ನಗಳು ವಿಫಲವಾದ್ದರಿಂದ ಅಂತಿಮವಾಗಿ ಕೊಲೆಯನ್ನು ಆಯ್ಕೆ ಮಾಡಿಕೊಂಡಳು ಎಂದು ಪೊಲೀಸ್​ ಮೂಲಗಳು ತಿಳಿಸಿವೆ.

ಸೆಕ್ಸ್​ಗಾಗಿ ಒತ್ತಾಯ

2022ರ ಅಕ್ಟೋಬರ್​ 13ರಂದು ಇಬ್ಬರು 1 ಗಂಟೆ 7 ನಿಮಿಷಗಳ ಕಾಲ ಸೆಕ್ಸ್​ ಬಗ್ಗೆ ಮಾತನಾಡಿದ್ದರು. ಸೆಕ್ಸ್​ಗಾಗಿ ಒತ್ತಾಯ ಮಾಡುತ್ತಿದ್ದರಿಂದ ಅಕ್ಟೋಬರ್​ 14ರಂದು ನಾನು ಗ್ರೀಷ್ಮಾ ಮನೆಗೆ ಹೋದೆ ಎಂದು ಶರೂನ್​ ತನ್ನ ಸಂಬಂಧಿಕರ ಮುಂದೆ ಹೇಳಿಕೊಂಡಿದ್ದಾನೆ. ಆಯುರ್ವೇದಿಕ್​ ಔಷಧದಲ್ಲಿ ವಿಷ ಬೆರೆಸಿ ನೀಡಿ ಕೊಲೆ ಮಾಡಿದ್ದಾಳೆ. ಬಳಿಕ ಆತನೊಂದಿಗೆ ನಡೆಸಿದ್ದ ಚಾಟ್​ ಅನ್ನು ಗ್ರೀಷ್ಮಾ ಡಿಲೀಟ್​ ಮಾಡಿದ್ದಾಳೆ. ಅಳಿಸಿದ ಸಂದೇಶಗಳನ್ನು ಹಿಂಪಡೆಯಬಹುದೇ ಎಂದು ನೋಡಲು ಅವಳು ಹಲವಾರು ಬಾರಿ ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿಯೂ ಹುಡುಕಾಡಿದ್ದಾಳೆ.

ಸಾಯುವ ಕೊನೆಯ ಕ್ಷಣದಲ್ಲಿ ಐಸಿಯು ಬೆಡ್​ನಲ್ಲಿದ್ದ ಶರೋನ್ ರಾಜ್, ನನಗೆ ವಿಷವನ್ನು ನೀಡಿ ವಂಚನೆ ಮಾಡಿದ್ದಾಳೆ ಎಂದು ಸಂಬಂಧಿಕರಿಗೆ ಹೇಳಿದ್ದಾನೆ. ಈ ಎಲ್ಲ ಅಂಶಗಳನ್ನು ಪೊಲೀಸರು ಚಾರ್ಜ್​ಶೀಟ್​ನಲ್ಲಿ ದಾಖಲಿಸಿದ್ದು, ನೆಯ್ಯಟ್ಟಿಂಕರ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.

ತಿರುವನಂತಪುರಂ ಗ್ರಾಮೀಣ ಎಸ್‌ಪಿ ಡಿ.ಶಿಲ್ಪಾ ಅವರ ನೇತೃತ್ವದಲ್ಲಿ ರಚಿಸಲಾದ ವಿಶೇಷ ತನಿಖಾ ತಂಡವು ಪ್ರಕರಣದ ತನಿಖೆ ನಡೆಸಿತು. ಎಸ್‌ಪಿ ಎಂ.ಕೆ. ಜುಲ್ಫಿಕರ್, ಡಿವೈಎಸ್‌ಪಿಗಳಾದ ಕೆ.ಜೆ. ಜಾನ್ಸನ್, ವಿ.ಟಿ. ರಸಿತ್ ಮತ್ತು ಪಾರಸಲ ಇನ್ಸ್‌ಪೆಕ್ಟರ್ ಸಾಜಿ ತನಿಖೆಯ ನೇತೃತ್ವ ವಹಿಸಿದ್ದರು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ವಿ.ಎಸ್. ವಿನೀತ್ ಕುಮಾರ್, ಅಲ್ಫಾಸ್ ಮಥಥಿಲ್ ಮತ್ತು ನವನೀತ್ ಕುಮಾರ್ ಪ್ರಾಸಿಕ್ಯೂಷನ್ ಪರವಾಗಿ ಹಾಜರಾದರು. (ಏಜೆನ್ಸೀಸ್​)