ನ್ಯೂಸ್

ಇನ್​ಸ್ಟಾದಲ್ಲಿ ಅಶ್ಲೀಲ ವಿಡಿಯೋ ಪೋಸ್ಟ್​: ತಿಂಗಳಿಗೆ ಎಷ್ಟು ಹಣ ಸಿಗ್ತಿತ್ತು? ಪೊಲೀಸರ ಮುಂದೆ ಬಾಯ್ಬಿಟ್ಟ ಯುವತಿಯರು! Instagram

Instagram : ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ ಆರೋಪದಲ್ಲಿ ಉತ್ತರ ಪ್ರದೇಶ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಈ ಘಟನೆ ಸಂಭಾಲ್‌ನಲ್ಲಿ ನಡೆದಿದ್ದು, ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲಾಗಿದೆ.

ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಕ್ಕಾಗಿ ಸಂಭಾಲ್​ನ ಅಸ್ಮೋಲಿ ಠಾಣಾ ಪೊಲೀಸರು ಮೂವರು ಮಹಿಳೆಯರು ಮತ್ತು ಓರ್ವ ಪುರುಷನನ್ನು ಬಂಧಿಸಿದ್ದಾರೆ.

ಆರೋಪಿಗಳು ಇಂತಹ ಅಶ್ಲೀಲ ವಿಡಿಯೋಗಳ ಮೂಲಕ ತಿಂಗಳಿಗೆ 25,000 ರಿಂದ 30,000 ರೂ. ಗಳಿಸುತ್ತಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ. ಇನ್‌ಸ್ಟಾಗ್ರಾಂ ಖಾತೆಗಳು ಮೆಹ್ರುಲ್ ನಿಶಾ ಅಲಿಯಾಸ್ ಪರಿ, ಮೆಹಕ್ ಮತ್ತು ಹಿನಾ ಎಂಬ ಮೂವರು ಮಹಿಳೆಯರಿಗೆ ಸೇರಿವೆ ಎಂದು ಗುರುತಿಸಲಾಗಿದೆ. ಈ ಮೂವರಲ್ಲಿ ಇಬ್ಬರು ಸಹೋದರಿಯರು ಎಂದು ಹೇಳಲಾಗಿದೆ.

ಇನ್‌ಸ್ಟಾಗ್ರಾಂನಲ್ಲಿ ಹೆಚ್ಚಿನ ಫಾಲೋವರ್ಸ್​ ಪಡೆಯಲು ಮತ್ತು ಹೆಚ್ಚಿನ ಹಣವನ್ನು ಗಳಿಸಲು ಈ ಮೂವರು ಆಕ್ಷೇಪಾರ್ಹ ವಿಡಿಯೋಗಳನ್ನು ಕ್ರಿಯೆಟ್​ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವತಿಯರ ವಿಡಿಯೋಗಳನ್ನು ತಯಾರಿಸಲು ಮತ್ತು ಅವುಗಳನ್ನು ಪ್ರಚಾರ ಮಾಡಲು ಸಹಾಯ ಮಾಡಿದ್ದಕ್ಕಾಗಿ ಜರಾರ್ ಆಲಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸಾಮಾಜಿಕ ವೇದಿಕೆಗಳಲ್ಲಿ ತಮ್ಮನ್ನು ತಾವು ವ್ಯಕ್ತಪಡಿಸಿಕೊಳ್ಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಹಾಗಂತ, ಸಾರ್ವಜನಿಕ ಸಭ್ಯತೆ ಮತ್ತು ಸಾಮಾಜಿಕ ರೂಢಿಗಳನ್ನು ನಿರ್ಲಕ್ಷಿಸಬಾರದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಸ್ಥಳೀಯರ ದೂರಿನ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಭಾನುವಾರ ಪ್ರಕರಣ ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 296(ಬಿ) (ಅಶ್ಲೀಲ ಕೃತ್ಯಗಳು ಮತ್ತು ಹಾಡುಗಳು) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದೇ ರೀತಿಯ ಅಪರಾಧಗಳನ್ನು ಮಾಡುವವರಿಗೆ ಪೊಲೀಸರು ಬಂಧನದ ಎಚ್ಚರಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)