ನ್ಯೂಸ್

ಸತತ ಸೋಲುಗಳಿಂದ ಪರ್ಯಾಯ ವೃತ್ತಿಯ ಬಗ್ಗೆ ಯೋಚಿಸಿದ್ದರಂತೆ ಶಾರುಖ್​!

ಮುಂಬೈ: ನಿಜಕ್ಕೂ ಶಾರುಖ್​ ಖಾನ್​ಗೆ ಅಂಥದ್ದೊಂದು ಯಶಸ್ಸು ಬೇಕಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಅವರು ಪೂರ್ಣಪ್ರಮಾಣ ನಾಯಕನಾಗಿ ಅಭಿನಯಿಸಿದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಅದಕ್ಕೂ ಮುನ್ನ, ಮಾಡಿದ ಚಿತ್ರ ಯಾವುದೂ ಗೆದ್ದಿರಲಿಲ್ಲ. ಹಾಗಾಗಿ, ಶಾರುಖ್​ ಖಾನ್​ ಒಂದು ಯಶಸ್ಸಿಗಾಗಿ ಹಾತೊರೆಯುತ್ತಿದ್ದರು. ಆ ಯಶಸ್ಸು ಇದೀಗ 'ಪಠಾಣ್​' ಚಿತ್ರದ ಮೂಲಕ ಸಿಕ್ಕಿದೆ.

'ಪಠಾಣ್​' ಚಿತ್ರವು ಕಳೆದ ಬುಧವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದೆ. ಈ ಚಿತ್ರವು 500 ಕೋಟಿ ರೂ.ಗಳಿಗೂ ಹೆಚ್ಚು ಗಳಿಕೆ ಮಾಡುವ ಮೂಲಕ, ಖಾನ್​ಗೆ ದೊಡ್ಡ ಯಶಸ್ಸು ನೀಡಿದೆ. ಕಳೆದ ನಾಲ್ಕು ದಿನಗಳಲ್ಲಿ ಹಿಂದಿನ ನಾಲ್ಕು ವರ್ಷಗಳನ್ನು ಮರೆತಿರುವುದಾಗಿ ಶಾರುಖ್​ ಖಾನ್ ಹೇಳಿದ್ದಾರೆ.

ಚಿತ್ರ ಗೆದ್ದ ಖುಷಿಯಲ್ಲಿ ಚಿತ್ರತಂಡದವರು, ಸೋಮವಾರ ಮುಂಬೈನಲ್ಲಿ ಸಂತೋಷ ಕೂಟವೊಂದನ್ನು ಆಯೋಜಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಶಾರುಖ್​, 'ಕಳೆದ ನಾಲ್ಕು ದಿನಗಳಲ್ಲಿ ನಾನು ನಾಲ್ಕು ವರ್ಷಗಳನ್ನು ಮರೆತಿದ್ದೇನೆ. ನಾನು ಈ ಸಂದರ್ಭದಲ್ಲಿ ಮಾಧ್ಯಮದವರನ್ನು ಭೇಟಿ ಮಾಡಲೇ ಇಲ್ಲ. ಈ ಸಮಯದಲ್ಲಿ ಬಹಳ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಕೋವಿಡ್​ ನಡುವೆಯೇ ಚಿತ್ರೀಕರಣ ಮಾಡಿದ್ದೇವೆ. ಆ ನಂತರ ಒಂದಿಷ್ಟು ವಿವಾದಗಳಿಂದ ಚಿತ್ರಕ್ಕೆ ಸಮಸ್ಯೆಯಾದರೂ ಚಿತ್ರ ಬಿಡುಗಡೆಯಾಗಿ ಅದ್ಭುತವಾಗಿ ಪ್ರದರ್ಶನ ಕಾಣುತ್ತಿದೆ. ನಮಗೆ ಎಲ್ಲ ಕಡೆಯಿಂದ ಪ್ರೀತಿ ಸಿಕ್ಕಿದೆ. ಧನ್ಯವಾದಗಳನ್ನು ಹೇಳುವುದಕ್ಕೆ ಸಾಧ್ಯವೇ ಇಲ್ಲ. ಸಿನಿಮಾಗೆ ಜೀವ ತುಂಬಿದ್ದಕ್ಕಾಗಿ ಇಡೀ ಚಿತ್ರರಂಗದ ಪರವಾಗಿ ನಾನು ಧನ್ಯವಾದಗಳನ್ನು ಹೇಳುತ್ತೇನೆ' ಎಂದು ಶಾರುಖ್​ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳ ಕುರಿತು ಮಾತನಾಡಿರುವ ಅವರು, 'ಈ ನಾಲ್ಕು ವರ್ಷಗಳಲ್ಲಿ ಒಳ್ಳೆಯದ್ದು, ಕೆಟ್ಟದ್ದು ಎಲ್ಲವನ್ನೂ ನೋಡಿದ್ದೇನೆ. ಮಕ್ಕಳ ಜತೆಗೆ ಕಾಲ ಕಳೆದಿದ್ದೇನೆ. ಅವರು ಬೆಳೆಯುವುದನ್ನು ನೋಡಿದ್ದೇನೆ. ನನ್ನ ಹಿಂದಿನ ಚಿತ್ರ ಫ್ಲಾಪ್​ ಆಗಿತ್ತು. ನನ್ನ ಚಿತ್ರಗಳು ಗೆಲ್ಲುವುದಿಲ್ಲ ಎಂದು ಜನ ಹೇಳಿದ್ದರು. ಆಗ ಪರ್ಯಾಯ ವೃತ್ತಿಯ ಬಗ್ಗೆ ಯೋಚಿಸಿದ್ದೆ. ಇಟಾಲಿಯನ್​ ಅಡುಗೆ ಮಾಡುವುದನ್ನು ಕಲಿತೆ' ಎಂದು ತಮಾಷೆಯಾಗಿ ಹೇಳಿಕೊಂಡಿದ್ದಾರೆ ಶಾರುಖ್​.