ನ್ಯೂಸ್

33 ವರ್ಷ, 100 ಚಿತ್ರ, ಹಲವಾರು ಫಿಲ್ಮ್ ಅವಾರ್ಡ್ಸ್​; ಶಾರುಖ್ ಖಾನ್ ಸಿನಿಪಯಣದಲ್ಲಿ ಒಲಿದ ಮೊದಲ ರಾಷ್ಟ್ರಪ್ರಶಸ್ತಿ | Shah Rukh Khan

Shah Rukh Khan: ಆ.01 ರಂದು 71ನೇ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಕಟಿಸಿದ ಕೇಂದ್ರ ಸರ್ಕಾರ, 2023ರಲ್ಲಿ ಬಿಡುಗಡೆಯಾದ ಹಲವು ಸಿನಿಮಾಗಳಿಗೆ ಪ್ರಶಸ್ತಿಗಳನ್ನು ಘೋಷಿಸಿತು. ಇದರೊಂದಿಗೆ ವಿವಿಧ ವಿಭಾಗಗಳಿಗೂ ಅವಾರ್ಡ್​ಗಳನ್ನು ಕೊಟ್ಟು ಗೌರವಿಸಲಾಯಿತು. ಈ ಪೈಕಿ ಬಾಲಿವುಡ್​ ಹಿರಿಯ ನಟ ಶಾರುಖ್ ಖಾನ್ ಮತ್ತು ವಿಕ್ರಾಂತ್ ಮ್ಯಾಸ್ಸೆ ಒಟ್ಟಿಗೆ ಅತ್ಯುತ್ತಮ ನಟ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿದರು.

'ಜವಾನ್' ಚಿತ್ರಕ್ಕಾಗಿ ಶಾರುಖ್ ಗೆದ್ದರೆ, 12 ಫೇಲ್​ ಸಿನಿಮಾಗಾಗಿ ವಿಕ್ರಾಂತ್​ ಗೆದ್ದಿದ್ದಾರೆ. ಬಾಲಿವುಡ್​ನ ಸ್ಟಾರ್​ ಹಾಗೂ ಹಿರಿಯ ನಟ ಶಾರುಖ್​ ಖಾನ್​ಗೆ ಅಪಾರ ಅಭಿಮಾನಿಗಳ ಬಳಗವಿದ್ದು, ಹಲವಾರು ಸೂಪರ್​ಹಿಟ್​ ಸಿನಿಮಾಗಳನ್ನು ಹಿಂದಿ ಚಿತ್ರೋದ್ಯಮಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅತ್ಯುತ್ತಮ ನಟ ರಾಷ್ಟ್ರಪ್ರಶಸ್ತಿ ಅವರ ಮೊದಲ ರಾಷ್ಟ್ರೀಯ ಪ್ರಶಸ್ತಿ ಎಂಬುದು ಸದ್ಯ ಹಲವರ ಹುಬ್ಬೇರಿಸಿದೆ. 33 ವರ್ಷಗಳ ಸಿನಿಪಯಣದಲ್ಲಿ ನೂರಾರು ಸಿನಿಮಾಗಳನ್ನು ಮಾಡಿರುವ ನಟನಿಗೆ, ಫಿಲ್ಮ್​ಫೇರ್​ ಹಿಡಿದು ನಾನಾ ರೀತಿಯ ಪ್ರಶಸ್ತಿಗಳು ಒಲಿದು ಬಂದಿವೆ. ಆದರೆ, ಇಲ್ಲಿಯವರೆಗೆ ರಾಷ್ಟ್ರೀಯ ಪ್ರಶಸ್ತಿ ಸಿಕ್ಕಿರಲಿಲ್ಲ.

ಯಾವುದೇ ಹಿನ್ನೆಲೆ ಇಲ್ಲದೆ, ಸಣ್ಣ ಪಾತ್ರಗಳು ಮತ್ತು ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಸ್ಟಾರ್ ಹೀರೋ ಆಗಿ ಬೆಳೆದ ಶಾರುಖ್​, 90ರ ದಶಕದಲ್ಲಿ ಬಾಲಿವುಡ್​ ಚಿತ್ರರಂಗವನ್ನು ಆಳಿದ ನಟ ಎಂದರೆ ಖಂಡಿತ ತಪ್ಪಾಗಲಾರದು. ತಮ್ಮ ಚಿತ್ರಗಳಿಂದ ಪ್ರೇಕ್ಷಕರ ಹೃದಯ ಗೆದ್ದ ಕಿಂಗ್ ಖಾನ್​, ಇಂದು ಕೋಟ್ಯಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಅನೇಕ ಸೂಪರ್ ಹಿಟ್‌ ಮತ್ತು ಉತ್ತಮ ಚಿತ್ರಗಳಿಂದ ಪ್ರಭಾವಿತರಾದ ಶಾರುಖ್ ಖಾನ್ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅತ್ಯುತ್ತಮ ನಟ ವಿಭಾಗಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ಸಹ ಗೆದ್ದಿದ್ದಾರೆ. 12 ಬಾರಿ ಅತ್ಯುತ್ತಮ ನಟನಾಗಿ ಫಿಲ್ಮ್‌ಫೇರ್ ಅವಾರ್ಡ್​ ಪಡೆದಿದ್ದಾರೆ. 'ದಿಲ್ವಾಲೆ ದುಲ್ಹನಿಯಾ ಲೆ ಜಾಯೆಂಗೆ', 'ಸ್ವದೇಶ್', 'ವೀರ್ ಜ಼ಾರಾ', 'ಚೆಕ್ ದೇ ಇಂಡಿಯಾ', 'ದೇವದಾಸ್', 'ಡಾನ್', 'ಮೈ ನೇಮ್ ಈಸ್ ಖಾನ್' ಸೇರಿ ಮುಂತಾದ ಚಿತ್ರಗಳಲ್ಲಿ ಶಾರುಖ್ ಖಾನ್ ತಮ್ಮ ಅಭಿನಯದಿಂದಲೇ ಚಿತ್ರಪ್ರೇಮಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇಂತಹ ಸೂಪರ್​ಹಿಟ್​ ಚಿತ್ರಗಳಿಗೆ ಸಿಗದ ರಾಷ್ಟ್ರೀಯ ಪ್ರಶಸ್ತಿ ಈಗ ವಾಣಿಜ್ಯ ಚಿತ್ರ 'ಜವಾನ್‌' ಲಭಿಸಿರುವುದು ಗಮನಾರ್ಹ. ಜವಾನ್ ಚಿತ್ರದಲ್ಲಿ ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಭಾರತೀಯ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಲಾಭವನ್ನು ಗಳಿಸಿತು. ಇದು ಚಿತ್ರತಂಡಕ್ಕೆ ಉತ್ತಮ ಆದಾಯವನ್ನೇ ತಂದುಕೊಟ್ಟಿತು. ಸಿನಿಪ್ರಿಯರು ಕೂಡ ಜವಾನ್​ ಚಿತ್ರಕ್ಕೆ ಪಾಸಿಟಿವ್ ಪ್ರತಿಕ್ರಿಯೆಗಳನ್ನು ನೀಡಿದ್ದರು. ಇಷ್ಟು ವರ್ಷಗಳಲ್ಲಿ ನಟನಿಗೆ ಸಿಗದ ರಾಷ್ಟ್ರೀಯ ಅತ್ಯುತ್ತಮ ನಟ ಪ್ರಶಸ್ತಿ ಈಗ ಒಲಿದು ಬಂದಿರುವುದಕ್ಕೆ ಅಭಿಮಾನಿಗಳು ಅತೀವ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಬಾಲಿವುಡ್ ದಿಗ್ಗಜರು, ಗಣ್ಯರಿಂದಲೂ ನಟನಿಗೆ ಅಭಿನಂದನೆಗಳ ಸುರಿಮಳೆಯೇ ಹರಿದುಬಂದಿವೆ,(ಏಜೆನ್ಸೀಸ್).