ನ್ಯೂಸ್

ಆಸೀಸ್ ಕ್ರಿಕೆಟಿಗರಿಗೆ ಕಿರುಕುಳ; ಅವರಿಗೆ ಪಾಠವಾಗಬೇಕಿತ್ತು ಎಂದ ಬಿಜೆಪಿ ಸಚಿವ ಕೈಲಾಶ್ ವಿಜಯವರ್ಗಿಯ; ವ್ಯಾಪಕ ಆಕ್ರೋಶ| Kailash Vijayvargiya

ಭೋಪಾಲ್​: ಮಧ್ಯಪ್ರದೇಶದ ವಾಣಿಜ್ಯ ನಗರಿ ಇಂದೋರ್​ನಲ್ಲಿ ಆಸ್ಟ್ರೇಲಿಯಾದ ಇಬ್ಬರು ಮಹಿಳಾ ಕ್ರಿಕೆಟಿಗರಿಗೆ ಲೈಂಗಿಕ ಕಿರುಕುಳ ನಡೆದಿದ್ದು, ಘಟನೆ ಬಗ್ಗೆ ನಿನ್ನೆ(ಅ. 26) ಪ್ರತಿಕ್ರಿಯಿಸಿರುವ ಬಿಜೆಪಿ ಸಚಿವ ಕೈಲಾಶ್ ವಿಜಯವರ್ಗಿಯ(Kailash Vijayvargiya) ಅವರಿಗೆ ಪಾಠವಾಗಬೇಕಿತ್ತು ಎಂದಿದ್ದಾರೆ. ಸದ್ಯ  2025ರ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಅನ್ನು ಆಯೋಜಿಸುತ್ತಿರುವಾಗ ಈ ಹೇಳಿಕೆ ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ಮಾತನಾಡಿದ್ದ ಅವರು, ಭಾರತದಲ್ಲಿ ಕ್ರಿಕೆಟಿಗರ ಬಗ್ಗೆ ಅಪಾರ ಕ್ರೇಜ್ ಇರುವುದರಿಂದ ಆಟಗಾರರು ತಮ್ಮ ಸ್ಥಳವನ್ನು ತೊರೆದಾಗ, ಭದ್ರತಾ ಲೋಪದ ಮೇಲೆ ಮಾತ್ರ ಗಮನಹರಿಸುವ ಬದಲು, ಹೊರಗೆ ಹೋಗುವಾಗ ಸ್ಥಳೀಯ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ.

ಇದು ಇಂದೋರ್ ಮತ್ತು ದೇಶಕ್ಕೆ ನಾಚಿಕೆಗೇಡಿನ ಸಂಗತಿ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಾವು ಸಂಬಂಧಿತ ಅಧಿಕಾರಿಗಳಿಗೆ ಆದೇಶಿಸಿದ್ದೇವೆ. ಇಂತಹ ಘಟನೆಯನ್ನು ತಡೆಯಲು ಕಠಿಣ ಶಿಕ್ಷೆ ನೀಡುವ ಮೂಲಕ ಮಾದರಿಯಾಗಬೇಕು ಎಂದು ಇದೇ ವೇಳೆ ವಿಜಯವರ್ಗಿಯ ಆಗ್ರಹಿಸಿದ್ದಾರೆ.

ಜನದಟ್ಟಣೆಯಿಂದ ಫುಟ್ಬಾಲ್ ಆಟಗಾರರ ಬಟ್ಟೆಗಳು ಹರಿದು ಹೋಗುವುದನ್ನು ನಾನು ವೈಯಕ್ತಿಕವಾಗಿ ನೋಡಿದ್ದೇನೆ. ಒಬ್ಬ ಇಂಗ್ಲಿಷ್ ಫುಟ್ಬಾಲ್ ಆಟಗಾರ ಇಂಗ್ಲೆಂಡ್​ನಲ್ಲಿ ನನ್ನೊಂದಿಗೆ ಹೋಟೆಲ್‌ನಲ್ಲಿ ತಂಗಿದ್ದನು. ಇದ್ದಕ್ಕಿದ್ದಂತೆ ಹೆಚ್ಚಿನ ಸಂಖ್ಯೆಯ ಯುವ ಅಭಿಮಾನಿಗಳು ಬಂದರು. ಅವರ ಆಟೋಗ್ರಾಫ್ ತೆಗೆದುಕೊಂಡರು. ಒಂದು ಹುಡುಗಿ ಅವನಿಗೆ ಮುತ್ತಿಟ್ಟಳು. ಕೆಲ ಅಭಿಮಾನಿಗಳಿಂದ ಅವನ ಬಟ್ಟೆಗಳು ಹರಿದವು. ಆಟಗಾರರು ತಮ್ಮ ಜನಪ್ರಿಯತೆಯ ಬಗ್ಗೆ ತಿಳಿದಿರಬೇಕು. ಈ ಘಟನೆಯು ನಮಗೆ ಮತ್ತು ಆಟಗಾರರಿಗೆ ಎಲ್ಲರಿಗೂ ಒಂದು ಪಾಠವಾಗಿದೆ ಎಂದಿದ್ದಾರೆ.

ಕೈಲಾಶ್ ವಿಜಯವರ್ಗಿಯಾ ಹೇಳಿಕೆಗೆ ಕಾಂಗ್ರೆಸ್ ಆಕ್ರೋಶ

ವಿಜಯವರ್ಗೀಯ ಅವರ ಹೇಳಿಕೆಗೆ ವಿರೋಧ ಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅರುಣ್ ಯಾದವ್ ಈ ಹೇಳಿಕೆಯನ್ನು "ಬೇಜವಾಬ್ದಾರಿ ಮತ್ತು ಪ್ರತಿಗಾಮಿ" ಎಂದು ಖಂಡಿಸಿದ್ದಾರೆ.

ಈ ಘಟನೆಯು ಅತಿಥಿ ದೇವೋ ಭವ ಎಂಬ ಧ್ಯೇಯವಾಕ್ಯವನ್ನು ಪಾಲಿಸುವ ದೇಶದಲ್ಲಿ ರಾಜ್ಯವು ತನ್ನ ಅತಿಥಿಗಳನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಕೈಲಾಶ್ ಜಿ ಅವರ ಹೇಳಿಕೆಯು ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡುವ ಬದಲು, ಸಚಿವರು ಸಂತ್ರಸ್ತರ ಮೇಲೆ ದೂಷಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಘಟನೆಯ ಹಿನ್ನೆಲೆ

ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾಗವಹಿಸುತ್ತಿದ್ದ ಇಬ್ಬರು ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟಿಗರ ಮೇಲೆ ಗುರುವಾರ(ಅ. 230 ಬೆಳಿಗ್ಗೆ ಇಂದೋರ್‌ನಲ್ಲಿ ಮೋಟಾರ್ ಸೈಕಲ್‌ನಲ್ಲಿ ಬಂದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಖಜ್ರಾನಾ ರಸ್ತೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಶುಕ್ರವಾರ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ, ಆಟಗಾರರು ತಮ್ಮ ಹೋಟೆಲ್‌ನಿಂದ ಹೊರಬಂದು ಕೆಫೆಯತ್ತ ನಡೆದುಕೊಂಡು ಹೋಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿದ್ದ ವ್ಯಕ್ತಿ ಅವರನ್ನು ಹಿಂಬಾಲಿಸಿದ್ದು, ಸ್ಥಳದಿಂದ ಪರಾರಿಯಾಗುವ ಮೊದಲು ಅವನು ಇಬ್ಬರಲ್ಲಿ ಒಬ್ಬರನ್ನು ಅನುಚಿತವಾಗಿ ಮುಟ್ಟಿದನು ಎನ್ನಲಾಗಿದೆ. (ಏಜೆನ್ಸೀಸ್)