ನ್ಯೂಸ್

ಜಿಹಾದಿಗಳ ಜಹಗೀರು ಪಿಒಕೆಯಲ್ಲಿ ಲೈಂಗಿಕ ಜೀತ ಪದ್ಧತಿ

ನವದೆಹಲಿ: ಜಿಹಾದಿಗಳ ಜಹಗೀರು ಆಗಿ ಮಾರ್ಪಟ್ಟಿರುವ ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಲೈಂಗಿಕ ಜೀತಪದ್ಧತಿ ಜೋರಾಗಿದೆ. ಇಲ್ಲಿ ಕಾರ್ಯಾಚರಿಸುತ್ತಿರುವ ಬಹುತೇಕ ಭಯೋತ್ಪಾದನಾ ಸಂಘಟನೆಗಳು ವೇಶ್ಯಾವಾಟಿಕೆಯ ಮೂಲಕವೇ ಹಣ ಸಂಗ್ರಹಿಸುತ್ತಿರುವುದಾಗಿ ಯುನೈಟೆಡ್​ ಕಾಶ್ಮೀರ ಪೀಪಲ್ಸ್​ ನ್ಯಾಷನಲ್​ ಪಾರ್ಟಿಯ ವಕ್ತಾರ ನಾಸೀರ್​ ಅಜೀಜ್​ ಖಾನ್​ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಹೋರಾಟದ ನೆಪದಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಉಗ್ರರು ಕಾಶ್ಮೀರಿ ಮಹಿಳೆಯರನ್ನು ಲೈಂಗಿಕ ಜೀತದಾಳುಗಳನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.

ಕಾಶ್ಮೀರದ ಉಗ್ರರ ಅಡಗುದಾಣದ ಮೇಲೆ ಭಾರತೀಯ ಭದ್ರತಾಪಡೆ ಸಿಬ್ಬಂದಿ ನಡೆಸಿದ್ದ ದಾಳಿಯಲ್ಲಿ ಸ್ಟಿರಾಯ್ಡ್​ಗಳು, ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಮಾತ್ರೆಗಳು, ನಿರೋಧ್​ ಮತ್ತು ನೀಲಿಚಿತ್ರಗಳು ಪತ್ತೆಯಾಗಿದ್ದವು.

ಜೈಷ್​ ಎ ಮೊಹಮ್ಮದ್​ ಭಯೋತ್ಪಾದನಾ ಸಂಘಟನೆಯ ಉಗ್ರನಿಂದ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ, ಹಾಡಹಗಲೇ ತನ್ನನ್ನು ತನ್ನ ಮನೆಯಿಂದ ಅಪಹರಿಸಿದ್ದ ಉಗ್ರರು ನಿರಂತರವಾಗಿ ಅತ್ಯಾಚಾರ ಎಸಗಿದ್ದಾಗಿ ದೂರಿದ್ದರು.

ನಾಯಿಗೂಡಿನಂತ ಬಂಕರ್​ಗಳಲ್ಲೇ ಅತ್ಯಾಚಾರ: ಪಿಒಕೆಯಲ್ಲಿ ಯೋಧರ ಭದ್ರತೆಗಾಗಿ ನಿರ್ಮಿಸಲಾಗಿರುವ ನಾಯಿಗೂಡುಗಳಂಥ ಬಂಕರ್​ಗಳಲ್ಲೇ ಉಗ್ರರು ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಾರೆ ಎಂದು ಪಿಒಕೆಯ ಪ್ರತ್ರಕರ್ತ ಜಲಾಲುದ್ದೀನ್​ ಮುಘಲ್​ ಈ ಹಿಂದೆ ವರದಿ ಮಾಡಿದ್ದರು.

ಇಸ್ಲಾಮಿಕ್​ ರಿಲೀಫ್​ ಫೌಂಡೇಷನ್​ ಎಂಬ ಸಂಸ್ಥೆ 1990ರ ದಶಕದಲ್ಲಿ ಈ ಬಂಕರ್​ಗಳನ್ನು ನಿರ್ಮಿಸಿತ್ತು ಎನ್ನಲಾಗಿದೆ. ಪಾಕ್​ ಸೇನಾಪಡೆಯ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನಾಪಡೆ ಪ್ರತಿಯಾಗಿ ನಡೆಸುವ ಗುಂಡಿನ ದಾಳಿಯಿಂದ ಬಚಾವಾಗಲು ಸ್ಥಳೀಯರು ರಾತ್ರಿಯ ವೇಳೆ ಈ ಬಂಕರ್​ಗಳನ್ನೇ ಆಶ್ರಯಿಸುತ್ತಾರೆ ಎನ್ನಲಾಗಿದೆ.

ಈ ಸಂದರ್ಭವನ್ನು ಬಳಸಿಕೊಂಡು ಈ ಪ್ರದೇಶದಲ್ಲಿ ಭದ್ರತೆಗಾಗಿ ನಿಯೋಜನೆಗೊಂಡಿರುವ ಪಾಕ್​ನ ಸೇನಾಪಡೆ ಸಿಬ್ಬಂದಿ ಮತ್ತು ಅಲ್ಲಿಂದ ಕಾರ್ಯಾಚರಿಸುವ ಉಗ್ರರು ಆ ಮಹಿಳೆಯರ ಮೇಲೆ ಅತ್ಯಾಚಾರ ಎಸಗುತ್ತಾರೆ. ಯೋಧರು ಎಂಬ ಕಾರಣಕ್ಕೆ ಪಾಕ್​ ಸೇನಾಪಡೆ ಸಿಬ್ಬಂದಿ ವಿರುದ್ಧ ಯಾವುದೇ ಪ್ರಕರಣ ದಾಖಲಾಗುವುದಿಲ್ಲ. ಉಗ್ರರ ಪ್ರಾಣಬೆದರಿಕೆಯಿಂದಾಗಿ ಅವರ ವಿರುದ್ಧವೂ ಪೊಲೀಸರಿಗೆ ದೂರು ಕೊಡಲು ಜನರು ಹಿಂದೇಟು ಹಾಕುತ್ತಾರೆ ಎನ್ನಲಾಗಿದೆ.