ನ್ಯೂಸ್

ದೇಶಿಯ ಕೋವಿಡ್​-19 ಲಸಿಕೆ ತಯಾರಿಕೆಗೆ ಪೈಪೋಟಿ ನೆಡಸುತ್ತಿವೆ 7 ಕಂಪನಿಗಳು

ನವದೆಹಲಿ: ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊವಿಡ್​-19 ಸೋಂಕಿಗೆ ದೇಶಿಯವಾಗಿ ಲಸಿಕೆ ತಯಾರಿಸಲು ಭಾರತದ ಒಟ್ಟು 7 ಕಂಪನಿಗಳು ಪೈಪೋಟಿಗಿಳಿದಿವೆ.

ಈಗಾಗಲೆ ಘೋಷಿಸಿರುವಂತೆ ಹೈದರಾಬಾದ್​ ಮೂಲದ ಭಾರತ್​ ಬಯೋಟೆಕ್​ ಸಿದ್ಧಪಡಿಸಿರುವ ಕೊವಾಕ್ಸಿನ್​ ಲಸಿಕೆಯನ್ನು ಮಾನವರ ಮೇಲೆ ಪ್ರಯೋಗಿಸಲಾಗುತ್ತಿದೆ. ಮುಂಬೈ ಮೂಲದ ಝೈಡಸ್​ ಕ್ಯಾಡಿಲಾ ಕಂಪನಿ ಝೈಕೋವ್​-ಡಿ ಎಂಬ ಲಸಿಕೆಯನ್ನು ಸಿದ್ಧಪಡಿಸಿದ್ದು, ಮಾನವರ ಮೇಲಿನ ಪ್ರಯೋಗಕ್ಕೆ ಮುಂದಾಗುತ್ತಿದೆ.

ಈ ಎರಡು ಕಂಪನಿಗಳಲ್ಲದೆ ಪುಣೆಯ ಸೆರಂ ಇನ್​ಸ್ಟಿಟ್ಯೂಟ್​, ಪನೇಷಿಯಾ ಬಯೋಟೆಕ್​, ಇಂಡಿಯನ್​ ಇಮ್ಯುನೋಲಾಜಿಕಲ್ಸ್​, ಮೈನ್​ವ್ಯಾಕ್ಸ್​ ಮತ್ತು ಬಯೋಲಾಜಿಕಲ್​ ಇ ಕಂಪನಿಗಳು ಕೂಡ ದೇಶಿಯವಾಗಿ ಕೋವಿಡ್​-19 ಲಸಿಕೆ ತಯಾರಿಸಲು ಪೈಪೋಟಿಗಿಳಿದಿವೆ.

ಸೆರಂ ಇನ್​ಸ್ಟಿಟ್ಯೂಟ್​ ಸಂಸ್ಥೆಯು ಅಸ್ಟ್ರಾಜೆನೆಕಾ ಆಕ್ಸ್​ಫರ್ಡ್​ನ ಕೋವಿಡ್​-19 ಲಸಿಕೆ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಕೈಜೋಡಿಸಿದೆ. ಆ ಲಸಿಕೆ ಸಿದ್ಧವಾದ ಬಳಿಕ ಭಾರತ ಸೇರಿ ಕೆಳಮಧ್ಯಮ ವರ್ಗದ ರಾಷ್ಟ್ರಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಲಸಿಕೆಗಳನ್ನು ತಯಾರಿಸಿ, ವಿತರಿಸಲು ಈ ಸಂಸ್ಥೆ ಸಜ್ಜಾಗುತ್ತಿದೆ.

ಅಸ್ಟ್ರಾಜೆನೆಕಾ ಆಕ್ಸ್​ಫರ್ಡ್​ನ ಕೋವಿಡ್​-19 ಲಸಿಕೆ ವರ್ಷಾಂತ್ಯದ ವೇಳೆಗೆ ಲಭ್ಯವಾಗುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿರುವ ಸೆರಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾದ ಸಿಇಒ ಅಡಾರ್​ ಪೂನಾವಾಲಾ, ಜೀವಂತ ಕರೊನಾ ವೈರಾಣುವನ್ನು ನಿಶ್ಶಕ್ತಗೊಳಿಸಿದ ಲಸಿಕೆಯನ್ನು ಸಿದ್ಧಪಡಿಸುವ ಬಗ್ಗೆ ಅಮೆರಿಕದ ಬಯೋಟೆಕ್​ ಸಂಸ್ಥೆ ಕೋಡಾಜೆನಿಕ್ಸ್​ ಜತೆಗೂ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಈ ಲಸಿಕೆಯು ಕ್ಲಿನಿಕಲ್​ಪೂರ್ವ ಟ್ರಯಲ್​ನಲ್ಲಿ ಇರುವುದಾಗಿ ಹೇಳಿದ್ದಾರೆ.

ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿಯ (ಎನ್​ಡಿಡಿಬಿ) ಸಹಸಂಸ್ಥೆಯಾಗಿರುವ ಇಂಡಿಯನ್​ ಇಮ್ಯುನೋಲಾಜಿಕಲ್ಸ್​ ಕೋವಿಡ್​-19 ಲಸಿಕೆ ಅಭಿವೃದ್ಧಿಪಡಿಸಲು ಆಸ್ಟ್ರೇಲಿಯಾದ ಗ್ರಿಫಿತ್​ ಯೂನಿವರ್ಸಿಟಿ ಜತೆ ಒಪ್ಪಂದ ಮಾಡಿಕೊಂಡಿದೆ. ಮೈನ್​ವ್ಯಾಕ್ಸ್​ ಮತ್ತು ಬಯೋಲಾಜಿಲ್​ ಇ ಸಂಸ್ಥೆಗಳು ಕೂಡ ಕೋವಿಡ್​-19 ಲಸಿಕೆ ತಯಾರಿಸುವ ನಿಟ್ಟಿನಲ್ಲಿ ಪ್ರಯತ್ನಮುಖಿಯಾಗಿವೆ.