supreme court 
ನ್ಯೂಸ್

ರಾಜ್ಯಕ್ಕೆ ಪೆನ್ನಾರ್ ಹಿನ್ನಡೆ: ನ್ಯಾಯಾಧಿಕರಣ ರಚನೆಗೆ ಸುಪ್ರೀಂಕೋರ್ಟ್ ಆದೇಶ

Webdesk - Ravikanth

| ರಾಘವ ಶರ್ಮ ನಿಡ್ಲೆ ನವದೆಹಲಿ

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟಗಳಲ್ಲಿ ಉಗಮಿ ಸುವ ಪೆನ್ನಾರ್ (ರಾಜ್ಯದಲ್ಲಿ ದಕ್ಷಿಣ ಪಿನಾಕಿನಿ) ನದಿ ನೀರಿಗೆ ಸಂಬಂಧಿಸಿದಂತೆ ತಮಿಳುನಾಡು ಮತ್ತು ಕರ್ನಾಟಕದ ನಡುವಿನ ವ್ಯಾಜ್ಯ ಪರಿಹಾರಕ್ಕೆ ಹೊಸ ನ್ಯಾಯಾಧಿಕರಣ ರಚಿಸಲು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಕಾವೇರಿ (ಮೇಕೆದಾಟು), ಕೃಷ್ಣಾ, ಮಹದಾಯಿ ನೀರಾವರಿ ಯೋಜನೆಗಳಿಗೆ ಕೇಂದ್ರದಿಂದ ಅನುಮೋದನೆ ಪಡೆದುಕೊಳ್ಳಲು ರಾಜ್ಯ ಸರ್ಕಾರ ಹರಸಾಹಸ ಪಡುತ್ತಿರುವ ಮಧ್ಯೆ ಸುಪ್ರೀಂಕೋರ್ಟ್​ನಿಂದ ಈ ಆದೇಶ ಹೊರಬಿದ್ದಿರುವುದು ರಾಜ್ಯಕ್ಕೆ ಆಘಾತ ತಂದಿದೆ. ತಮಿಳುನಾಡಿನ ವಾದಕ್ಕೆ ಒಪ್ಪಿಕೊಂಡು ನ್ಯಾಯಾಧಿಕರಣ ರಚನೆ ಮಾಡಬಾರದು ಎಂದು ಕರ್ನಾಟಕದ ವಕೀಲರು ವಾದ ಮಂಡಿಸಿದ್ದರೂ, ಕೇಂದ್ರ ಸರ್ಕಾರ ನ್ಯಾಯಾಧಿಕರಣ ರಚನೆಗೆ ಒಲವು ತೋರಿದ್ದರಿಂದ ಸುಪ್ರೀಂಕೋರ್ಟ್ ಈ ತೀರ್ಮಾನ ಪ್ರಕಟಿಸಿದೆ. ನ್ಯಾಯಾಧಿಕರಣ ರಚನೆಗೆ ಕೇಂದ್ರ ಸರ್ಕಾರ 6 ತಿಂಗಳ ಕಾಲಾವಕಾಶ ಕೇಳಿತು. ಆದರೆ, ನ್ಯಾ.ಎಂ.ಆರ್. ಶಾ ನೇತೃತ್ವದ ನ್ಯಾಯಪೀಠ 3 ತಿಂಗಳಲ್ಲಿ ನ್ಯಾಯಮೂರ್ತಿಗಳ ನೇಮಕ ಮಾಡಿ ವಿಚಾರಣೆ ಆರಂಭಿಸಬೇಕು ಎಂದು ಸೂಚನೆ ನೀಡಿದೆ. ನ್ಯಾಯಾಧಿಕರಣ ರಚನೆ ಮಾಡುವುದಕ್ಕೆ ಕೇಂದ್ರ ಜಲಶಕ್ತಿ ಸಚಿವರು ಒಪ್ಪಿಗೆ ನೀಡಿದ್ದಾರೆ. ಆದರೆ, ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅನುಮೋದನೆ ಪಡೆಯಲು ಸಮಯ ಬೇಕಾಗುತ್ತದೆ. ಹೀಗಾಗಿ 6 ತಿಂಗಳು ಅವಕಾಶ ಬೇಕೆಂದು ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೋರಿದ್ದರು.

ನದಿ ನೀರಿನ ಹಂಚಿಕೆ ಬಗ್ಗೆ ರಾಜ್ಯಗಳು ಪರಸ್ಪರ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದಿದ್ದ ತಮಿಳುನಾಡು ಸರ್ಕಾರ, ನ್ಯಾಯಾಧಿಕರಣ ರಚನೆಯೇ ಇದಕ್ಕೆ ಸೂಕ್ತ ಪರಿಹಾರ ಎಂದು ವಾದಿಸಿತ್ತು. 2020ರಲ್ಲಿ ಕೇಂದ್ರ ಸರ್ಕಾರದ ಸಂಧಾನ ಸಮಿತಿಯು ಎರಡು ಸಭೆಗಳನ್ನು ನಡೆಸಿತ್ತು. ಆದರೆ, ಪರಿಹಾರ ಸಿಗಲಿಲ್ಲ. ಇದಾಗಿ 2 ವರ್ಷಗಳ ಕಾಲ ಕೇಂದ್ರ ಸರ್ಕಾರ ಯಾವುದೇ ಹೆಚ್ಚುವರಿ ಪ್ರಯತ್ನಗಳನ್ನು ಮಾಡಲಿಲ್ಲ ಮತ್ತು ಸಭೆಗಳನ್ನೂ ನಡೆಸಲಿಲ್ಲ. ನ್ಯಾಯಾಧಿಕರಣ ರಚನೆಯಲ್ಲೂ ವಿಳಂಬ ಧೋರಣೆ ತಾಳಲಾಗಿದೆ. ಹೀಗಾಗಿ, ಸುಪ್ರೀಂಕೋರ್ಟ್ ಕೇಂದ್ರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ವಕೀಲ ಕೃಷ್ಣಮೂರ್ತಿ ಒತ್ತಾಯಿಸಿದ್ದರು.

ಕೇಂದ್ರ ಸರ್ಕಾರದ ವಕೀಲೆ ಐಶ್ವರ್ಯ ಭಾಟಿ ಅವರೂ ಹಿಂದಿನ ವಿಚಾರಣೆ ವೇಳೆ ಇದೇ ನಿಲುವನ್ನು ನ್ಯಾಯಪೀಠದ ಮುಂದಿಟ್ಟಿದ್ದರು. ಮಾತುಕತೆ ಫಲಪ್ರದವಾಗಿಲ್ಲ ಎಂದ ಮೇಲೆ ನ್ಯಾಯಾಧಿಕರಣ ರಚನೆ ಮಾಡುವುದೇ ಸೂಕ್ತ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು. ಇದನ್ನು ವಿರೋಧಿಸಿದ್ದ ರಾಜ್ಯ ಸರ್ಕಾರ, ಪರಸ್ಪರ ಮಾತುಕತೆಗೆ ಈಗಲೂ ಅವಕಾಶವಿದೆ ಎಂದು ಹೇಳಿದ್ದರೂ, ಸುಪ್ರೀಂಕೋರ್ಟ್ ಈ ವಾದ ಒಪ್ಪಲಿಲ್ಲ. ನಿಮಗೆ ಪರಿಹಾರ ಬೇಕೋ ಬೇಡವೋ ಅಥವಾ ವ್ಯಾಜ್ಯವನ್ನು ಹೀಗೆ ಮುಂದುವರಿಸಿಕೊಂಡು ಹೋಗೋಣವೇ ಎಂದು ಪ್ರಶ್ನಿಸಿತ್ತು.

ಪೆನ್ನಾರ್ ನ್ಯಾಯಾಧಿಕರಣ ರಚನೆ ಬಗ್ಗೆ ನಾವು ಮರುಪರಿಶೀಲನಾ ಅರ್ಜಿ ಸಲ್ಲಿಸಲಿದ್ದೇವೆ. ಕೇಂದ್ರ ಸಚಿವರ ಜತೆಗೂ ಚರ್ಚೆ ಮಾಡಲಿದ್ದೇವೆ. ರಾಜ್ಯದ ಅಭಿಪ್ರಾಯವನ್ನು ಮತ್ತೆ ಮನವರಿಕೆ ಮಾಡುತ್ತೇವೆ | ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ವಿರೋಧ ಯಾವ್ಯಾವುದಕ್ಕೆ?

  • ಕುಡಿಯುವ ನೀರಿನ ಉದ್ದೇಶಕ್ಕಾಗಿ ಉಪನದಿಯಾಗಿರುವ ಮಾರ್ಕಂಡೇಯ ನದಿಗೆ ಅಡ್ಡಲಾಗಿ 500 ಮಿಲಿಯನ್ ಕ್ಯೂಬಿಕ್ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯ ನಿರ್ವಣಕ್ಕೆ ಕರ್ನಾಟಕ ಉದ್ದೇಶಿಸಿರುವುದು
  • ವರ್ತರು ಕೆರೆಯ ಹೆಚ್ಚುವರಿ ನೀರನ್ನು ನರಸಾಪುರ ಟ್ಯಾಂಕ್​ಗೆ ತಿರುಗಿಸುವುದು
  • ಎಲ್ಲಮಲ್ಲಪ್ಪ ಚೆಟ್ಟಿ ಟ್ಯಾಂಕ್​ನಲ್ಲಿ ಏತ ನೀರಾವರಿ ಯೋಜನೆ
  • ಬ್ಯಾಲಹಳ್ಳಿ ಗ್ರಾಮದಲ್ಲಿ ಪೆನ್ನಾರ್ ನದಿಯಿಂದ ನೀರನ್ನು ಪಂಪ್ ಮಾಡುವುದು
  • ಪೆನ್ನಾರ್ ನದಿ ನೀರನ್ನು ತಟ್ಟನೂರು ಗ್ರಾಮದಿಂದ ಪಂಪ್ ಮಾಡುವ ಯೋಜನೆ

ಪ್ರಕರಣ ಏನು?: ತಮಿಳುನಾಡಿನ ಪೆನ್ನಾರ್ ಕಣಿವೆಯ ವ್ಯಾಪ್ತಿಗೆ ಬರುವ ಮತ್ತು ಕರ್ನಾಟಕದಲ್ಲಿ ಉಗಮ ಸ್ಥಾನವಿರುವ ಮಾರ್ಕಂಡೇಯ ನದಿ (ಪೆನ್ನಾರ್ ಉಪನದಿ)ಗೆ ಅಡ್ಡಲಾಗಿ ಹೊಸ ಅಣೆಕಟ್ಟನ್ನು ಕರ್ನಾಟಕ ನಿರ್ಮಾಣ ಮಾಡಿದೆ. ಇದನ್ನು ಪ್ರಶ್ನಿಸಿ ತಮಿಳುನಾಡು ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಸಲಹೆ ನೀಡಿತ್ತು. ಕೇಂದ್ರ ಜಲ ಆಯೋಗದ ಅಧಿಕಾರಿಗಳು ಎರಡೂ ರಾಜ್ಯಗಳ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿಗಳ ಜತೆ ಎರಡು ಬಾರಿ ಸಭೆ ನಡೆಸಿದ್ದರು. ಕೋಲಾರ, ಮಾಲೂರು, ಬಂಗಾರಪೇಟೆ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಸಲು ರಾಜ್ಯ ಸರ್ಕಾರ ಈ ಜಲಾಶಯ ನಿರ್ಮಾಣ ಯೋಜನೆ ಕೈಗೆತ್ತಿಕೊಂಡಿದೆ. ಆದರೆ ಯೋಜನೆಯಿಂದ ಪೆನ್ನಾರ್ ಕಣಿವೆಯಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂದು ತಮಿಳು ನಾಡು ಸುಪ್ರೀಂ ಮೆಟ್ಟಿಲೇರಿದೆ. ರಾಜ್ಯದಿಂದ ಅಫಿಡವಿಟ್: ಪೆನ್ನಾರ್ ವಿವಾದದ ಸಂಧಾನಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್​ಗೆ ಅಫಿಡವಿಟ್ ಸಲ್ಲಿಸಿರುವ ರಾಜ್ಯ ಸರ್ಕಾರ, ಸಂಧಾನ ಸಮಿತಿ ವ್ಯಾಪ್ತಿಯಲ್ಲಿ ಮಾತುಕತೆ ಮುಂದುವರಿಯಲಿದೆ ಎನ್ನುವುದು ನಮ್ಮ ಭಾವನೆ. ಸಂಧಾನ ಸಮಿತಿ ಪೆನ್ನಾರ್ ಕಣಿವೆ ಪ್ರದೇಶಗಳಿಗೆ ಇನ್ನೂ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ. ಸ್ಥಳ ಅಧ್ಯಯನ ಮತ್ತು ಸಂಬಂಧಪಟ್ಟವರೊಂದಿಗೆ ಅಲ್ಲಿ ಮಾತುಕತೆ ನಡೆಸಿ, ವಾಸ್ತವ ಅರಿತುಕೊಳ್ಳುವ ಅಗತ್ಯವಿದೆ. ಆದರೆ, 2020ರಲ್ಲಿ ಕರೊನಾ ಬಂದಿದ್ದರಿಂದ ಅರ್ಥಪೂರ್ಣ ಮಾತುಕತೆಗೆ ಅಡಚಣೆ ಉಂಟಾಯಿತು. ಈಗ ಕರೊನಾ ಬಾಧೆಯಿಲ್ಲ. ಹೀಗಾಗಿ, ಕೇಂದ್ರ ಸಂಧಾನ ಸಮಿತಿ ಪ್ರಕ್ರಿಯೆ ಮುಂದುವರಿಸಬೇಕು ಮತ್ತು ತಮಿಳುನಾಡು ವಿತಂಡವಾದ ಬದಿಗೆ ಸರಿಸಬೇಕು ಎಂದು ಆಗ್ರಹಿಸಿದೆ. ತಮಿಳುನಾಡಿಗೆ ನಿಗದಿಗಿಂತ ಹೆಚ್ಚು ನೀರು ಹರಿಯುತ್ತಿದ್ದರೂ ಸುಳ್ಳು ಆರೋಪಗಳನ್ನು ಮಾಡಿದೆ. ಕುಡಿಯುವ ನೀರಿನ ಯೋಜನೆಗಳನ್ನು ಕರ್ನಾಟಕ ಕೈಗೆತ್ತಿಕೊಂಡಿದೆ ಮತ್ತು ಇದರಿಂದ ತಮಿಳುನಾಡಿಗೆ ಯಾವುದೇ ಹಾನಿಯಾಗದು ಎಂದು ವಾದಿಸಿದೆ.

ಪೆನ್ನಯಾರ್ (ನೆಡುಂಗಲ್ ಆಣೆಕಟ್ಟು) - ಪಾಲಾರ್ ಲಿಂಕ್

ತಮಿಳುನಾಡು ಸರ್ಕಾರದ ಯೋಜನೆಯು ಪೆನ್ನೈಯಾರ್ ನದಿಯ 3 ಟಿಎಂಸಿ ಪ್ರವಾಹದ ನೀರನ್ನು ನೆಡುಂಗಲ್ ಆಣೆಕಟ್ಟಿನಿಂದ (ಕೃಷ್ಣಗಿರಿ ಜಲಾಶಯದ ಕೆಳಭಾಗದಲ್ಲಿದೆ) ಪಾಲಾರ್​ನ ಉಪನದಿಯಾದ ಕಲ್ಲಾರ್​ಗೆ ತಿರುಗಿಸುವ ಉದ್ದೇಶ ಹೊಂದಿದೆ. ಈ ಯೋಜನೆಗಾಗಿ 648.23 ಕೋಟಿ ರೂ. ಅಂದಾಜು ವೆಚ್ಚದ ವಿವರ ಯೋಜನಾ ವರದಿಯನ್ನು ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿ, 2018 ರಲ್ಲಿ ತಮಿಳುನಾಡು ಸರ್ಕಾರಕ್ಕೆ ಸಲ್ಲಿಸಿತ್ತು. ಈ ಯೋಜನೆ ಜಾರಿ ಮೂಲಕ, ಕೃಷ್ಣಗಿರಿ ಜಿಲ್ಲೆಯ ಪೋಚಂಪಲ್ಲಿ, ಕೃಷ್ಣಗಿರಿ ತಾಲ್ಲೂಕುಗಳು ಮತ್ತು ತಿರುಪತ್ತೂರು ಜಿಲ್ಲೆಯ ವಾಣಿಯಂಬಾಡಿ, ತಿರುಪತ್ತೂರ್ ತಾಲ್ಲೂಕುಗಳಲ್ಲಿ 24,329 ಎಕರೆ ಪ್ರದೇಶಗಳಲ್ಲಿರುವ ತೆರೆದ ಬಾವಿಗಳು ಮತ್ತು ಬೋರ್​ವೆಲ್​ಗಳಲ್ಲಿ ನೀರು ತುಂಬಿಸಲು ಸಾಧ್ಯವಾಗಲಿದೆ. ಈ ಬಗ್ಗೆ 2022-23ರ ಸಾಲಿನ ಸಂಬಂಧಿಸಿದ ತಮಿಳುನಾಡಿನ ಯೋಜನಾ ನೀತಿಗಳ ವರದಿಯಲ್ಲಿ ದಾಖಲಿಸಲಾಗಿದೆ. ಪೆನ್ನೈಯಾರ್​ನಲ್ಲಿ ನಡೆಯುತ್ತಿರುವ ಯೋಜನೆಗಳಿಗೆ ಅನುಗುಣವಾಗಿ ಪರಿಷ್ಕೃತ ಯೋಜನಾ ವರದಿ ಸಿದ್ಧಪಡಿಸಬೇಕು. ಇದಕ್ಕಾಗಿ ವಿವರವಾದ ಸಮೀಕ್ಷೆ ಮತ್ತು ಲೆವೆಲಿಂಗ್ ಕಾರ್ಯಾಚರಣೆ ಕೈಗೊಳ್ಳಬೇಕು. 2021-2022 ರ ಬಜೆಟ್​ನಲ್ಲಿ ಮೇಲಿನ ಯೋಜನೆಗಾಗಿ ಸಮೀಕ್ಷೆ ಮತ್ತು ಲೆವೆಲಿಂಗ್ ಕೆಲಸಕ್ಕೆ ಅನುಮತಿ ನೀಡಿ, 0.96 ಕೋಟಿ ರೂ.ಗೆ ಮಂಜೂರಾತಿ ನೀಡಲಾಗಿತ್ತು. ನ್ಯಾಯಾಧಿಕರಣವೇ ಅಂತಿಮ ಎನ್ನುವುದಾದರೆ ಅಲ್ಲಿ ಹೋರಾಟ ಮಾಡದೆ ವಿಧಿಯಿಲ್ಲ. ಸುಪ್ರೀಂಕೋರ್ಟ್ ಹೇಳಿದ ಮೇಲೆ ಬೇರೆ ಆಯ್ಕೆಗಳಿಲ್ಲ. ಈ ನಡುವೆ, ಪೆನ್ನಯಾರ್ ನೀರನ್ನು ಪಾಲಾರ್​ಗೆ ಜೋಡಿಸುವುದಾದರೆ, ಕರ್ನಾಟಕ ವಿರೋಧ ವ್ಯಕ್ತಪಡಿಸಬೇಕು ಮತ್ತು ತಮಿಳುನಾಡಿನ ವಿರುದ್ಧ ದೂರು ನೀಡಬೇಕು ಎಂದು ರಾಜ್ಯದ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವಾರ್ಷಿಕವಾಗಿ ರಾಜ್ಯಕ್ಕೆ 11 ಟಿಎಂಸಿ: ದಕ್ಷಿಣ ಪೆನ್ನಾರ್ ಜಲಾನಯನ ಪ್ರದೇಶದ ಕರ್ನಾಟಕಕ್ಕೆ ಸೇರಿದ ಕಣಿವೆಯಲ್ಲಿ ವಾರ್ಷಿಕವಾಗಿ ಸುಮಾರು 11 ಟಿಎಂಸಿ ನೀರು ಲಭ್ಯವಿದೆ. 10 ಟಿಎಂಸಿ ನೀರಿಗಾಗಿ ಯೋಜಿಸಿರುವ ಯೋಜನೆಗಳು ಕುಡಿಯುವ ನೀರು ಮತ್ತು ನೀರಾವರಿಯ ಅವಶ್ಯಕತೆಗಳನ್ನು ಪೂರೈಸುತ್ತದೆ. ಈ ನೀರು ಕಾವೇರಿ ನದಿ ನೀರು ವ್ಯಾಜ್ಯದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾದ ನೀರಿನ ಭಾಗವೇ ಆಗಿದೆ. ಕರ್ನಾಟಕವು ಬೆಂಗಳೂರಿನ ಕುಡಿಯುವ ನೀರು ಪೂರೈಕೆಗಾಗಿ ಸುಮಾರು 12 ಟಿಎಂಸಿ ಕಾವೇರಿ ನೀರನ್ನು ದಕ್ಷಿಣ ಪೆನ್ನಾರ್ ಜಲಾನಯನ ಪ್ರದೇಶಕ್ಕೆ ತಿರುಗಿಸಿದೆ. ಈ ಹರಿವಿನಿಂದ ಸೃಷ್ಟಿಯಾಗುವ ಸುಮಾರು 8.4 ಟಿಎಂಸಿ ನೀರು ರಾಜ್ಯಕ್ಕೆ ಪ್ರತ್ಯೇಕವಾಗಿ ಸೇರಿದೆ. ಆದ್ದರಿಂದ, ಈ ನೀರಿನ ಯಾವುದೇ ಭಾಗವನ್ನು ಪಡೆಯಲು ತಮಿಳುನಾಡಿಗೆ ಹಕ್ಕಿಲ್ಲ. ಕರ್ನಾಟಕ ಯೋಜಿಸಿರುವ ಐದು ಯೋಜನೆಗಳಿಗೆ ಈ ನೀರನ್ನು ಬಳಸಿಕೊಳ್ಳಲಾಗುತ್ತಿದೆ.