ಬೆಂಗಳೂರು: ಬಹುನಿರೀಕ್ಷಿತ ವಿಧಾನಮಂಡಲ ಜಂಟಿ ಅಧಿವೇಶನ, ವಿರೋಧ ಪಕ್ಷದ ಪ್ರತಿಭಟನೆ ನಡುವೆ ಅನಿಶ್ಚಿತತೆಗೆ ಸಿಲುಕಿರುವುದರಿಂದ ನಿಗದಿತ ಅವಧಿಗೂ ಮುನ್ನವೇ ಮೊಟಕಾಗುವ ಲಕ್ಷಣಗಳು ದಟ್ಟವಾಗಿವೆ. ಅತ್ತ ಈಶ್ವರಪ್ಪ ರಾಜೀನಾಮೆಗೆ ಪಟ್ಟು ಹಿಡಿದಿರುವ ಕಾಂಗ್ರೆಸ್ ತನ್ನ ನಿಲುವು ಸಡಿಲಿಸಲು ಸಿದ್ಧವಿಲ್ಲ. ಇತ್ತ ಆಡಳಿತ ಪಕ್ಷ ಬಿಜೆಪಿಯೂ ನಿಲುವು ಸಡಿಲಿಸದಿರಲು ನಿರ್ಧರಿಸಿರುವುದರಿಂದ ಸೋಮವಾರವೂ ಸದನ ಸುಗಮವಾಗಿ ನಡೆಯುವ ಸಾಧ್ಯತೆಗಳು ಕಾಣುತ್ತಿಲ್ಲ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ಆಯ್ಕೆ ಮಾಡಿರುವ 362 ಅಭ್ಯರ್ಥಿಗಳ ಪಟ್ಟಿಯನ್ನು ಸಕ್ರಮಗೊಳಿಸುವ ನಿಟ್ಟಿನಲ್ಲಿ ತಂದಿರುವ ತಿದ್ದುಪಡಿ ವಿಧೇಯಕ ಸೇರಿದಂತೆ ಐದು ವಿಧೇಯಕಗಳು ಸದನದಲ್ಲಿ ಮಂಡನೆಯಾಗಿದ್ದರೂ ಚರ್ಚೆಗೆ ಪ್ರತಿಪಕ್ಷ ಸಿದ್ಧ್ದಲ್ಲ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯೇ ಆರಂಭವಾಗಿಲ್ಲ. ಈ ವಾತಾವರಣದಲ್ಲಿ ಕಲಾಪ ಮುಂದೂಡುವುದು ಸೂಕ್ತವಲ್ಲ ಎಂಬ ತೀರ್ವನಕ್ಕೆ ಸರ್ಕಾರ ಬಂದಂತಿದ್ದು, ರಾಜಕೀಯ ಪ್ರತಿಷ್ಠೆ ಕಾರಣಕ್ಕೆ ಮಹತ್ವದ ವಿಧೇಯಕಗಳನ್ನು ಚರ್ಚೆ ನಡೆಸದೆಯೇ ಒಪ್ಪಿಗೆ ಪಡೆದುಕೊಳ್ಳುವುದು ದಟ್ಟವಾಗಿದೆ.
ರಾಜ್ಯಪಾಲರ ಭಾಷಣವಾದ ಬಳಿಕ ಸಂತಾಪ ಸೂಚನೆಗಳು ಸದನದಲ್ಲಿ ಯಾವುದೇ ಗದ್ದಲಗಳಿಲ್ಲದೆ ನಡೆದಿವೆ. ಇನ್ನುಳಿದಂತೆ ಕೇವಲ ಪ್ರಶ್ನೋತ್ತರಕ್ಕೆ ಅಧಿವೇಶನ ಸೀಮಿತವಾಗಿದೆ. ಆದರೆ, ವಿರೋಧ ಪಕ್ಷದ ಸದಸ್ಯರು ಪ್ರಶ್ನೋತ್ತರದಲ್ಲಿಯೂ ಭಾಗವಹಿಸುತ್ತಿಲ್ಲ.
ರಾಜ್ಯಪಾಲರ ಭಾಷಣದ ಮೇಲೆ ನಡೆಯಬೇಕಾಗಿದ್ದ ಚರ್ಚೆಗೆ ರಾಜಕೀಯ ಗ್ರಹಣ ಹಿಡಿದಿದೆ. ಆರಂಭದಲ್ಲೇ ಹಿಜಾಬ್ ಪ್ರಕರಣದ ಬಿಸಿ ತಟ್ಟಿತ್ತಾದರೂ, ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆಯೇ ಮಹತ್ವ ಪಡೆದುಕೊಂಡಿದ್ದರಿಂದ ಕಾಂಗ್ರೆಸ್ ಈ ವಿಷಯವನ್ನು ಪ್ರತಿಷ್ಠೆಯಾಗಿ ಪರಿಗಣಿಸಿ ಎರಡೂ ಸದನದಲ್ಲಿ ಅಹೋರಾತ್ರಿ ಧರಣಿ ನಡೆಯುತ್ತಿದೆ.
ಸುಗಮವಾಗಿ ಅಧಿವೇಶನ ನಡೆಯಬೇಕು. ಅಲ್ಲಿ ನಮಗೆ ಮಾತನಾಡಲು ಪ್ರಶ್ನೆ ಕೇಳಲು ಮುಕ್ತ ಅವಕಾಶಗಳಿರಬೇಕು ಎನ್ನುವ ಶಾಸಕರ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್ನಲ್ಲೂ ಅನೇಕರಲ್ಲಿ ಈ ಅಭಿಪ್ರಾಯವಿದೆ. ಆದರೆ, ಆಯಾ ಪಕ್ಷದ ನಿಲುವು ಶಾಸಕರ ಧ್ವನಿಗೆ ಅಡ್ಡಿಯಾಗಿದೆ. ಈ ರೀತಿಯಲ್ಲಿ ಸದನ ನಡೆದರೆ ನಮ್ಮಂತ ಶಾಸಕರು ಏನು ಮಾಡಬೇಕು? ನಮಗೆ ಸದನದಲ್ಲಿ ಮಾತನಾಡಲು ಅವಕಾಶ ಸಿಗುವುದೇ ಕಡಿಮೆ. ಸಿಕ್ಕ ಸಮಯವೂ ಈ ರೀತಿ ಧರಣಿಯಲ್ಲಿಯೇ ಮುಗಿದು ಹೋಗುತ್ತಿದೆ ಎಂದು ಅನೇಕರು ಅಸಮಾಧಾನ ಹೊರಹಾಕಿದ್ದಾರೆ.
ವಂದನಾ ನಿರ್ಣಯ: ರಾಜ್ಯಪಾಲರ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸುವ ನಿಟ್ಟಿನಲ್ಲಿ ನಡೆಯಲಿರುವ ಚರ್ಚೆಗೆ ಧರಣಿ ಅಡ್ಡಿಯಾಗಿರುವ ಕಾರಣ, ನೇರವಾಗಿ ಮುಖ್ಯಮಂತ್ರಿಗಳೇ ಸದನದಲ್ಲಿ ಭಾಷಣ ಮಾಡಿ ವಂದನಾ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆ ಇದೆ. ಚರ್ಚೆಯೇ ಇಲ್ಲದೆ ವಂದನಾ ನಿರ್ಣಯ ಅಂಗೀಕರಿಸಿ ರಾಜ್ಯಪಾಲರಿಗೆ ಕಳುಹಿಸಿಕೊಡಲಾಗುವುದು ಎಂದು ಮೂಲಗಳು ಖಚಿತಪಡಿಸಿವೆ.
ಇಂದು ಬಿಜೆಪಿ ಸಭೆ: ಕಾಂಗ್ರೆಸ್ ಯಾವ ನಿಲುವು ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಿ ಮುಂದಿನ ತೀರ್ಮಾನ ಮಾಡಲು ಬಿಜೆಪಿ ನಿರ್ಧರಿಸಿದೆ. ಹಾಗೆಯೇ ಹಿಜಾಬ್ ವಿಷಯ, ಪರಿಷತ್ ಚುನಾವಣೆ, ನಿಗಮ ಮಂಡಳಿ ನೇಮಕ, ಸಚಿವ ಸಂಪುಟ ವಿಸ್ತರಣೆ ಹೀಗೆ ವಿವಿಧ ವಿಚಾರವಾಗಿ ಚರ್ಚೆ ನಡೆಸಲು ಪಕ್ಷದ ಕಚೇರಿಯಲ್ಲಿ ಸೋಮವಾರ ಸಂಜೆ ಸಭೆ ಆಯೋಜನೆಗೊಂಡಿದೆ. ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಚಿವರುಗಳು ಮತ್ತು ಹಲವು ಪ್ರಮುಖರು ಭಾಗವಹಿಸಲಿದ್ದಾರೆ.
ದೇಶದ ಹಿತದೃಷ್ಟಿಯಿಂದ ರಾಷ್ಟ್ರಧ್ವಜದ ಬಗ್ಗೆ ಏನನ್ನು ಹೇಳಬೇಕಿತ್ತೋ ಅದನ್ನು ತುಂಬ ಸ್ಪಷ್ಟವಾಗಿ ಹೇಳಿದ್ದೇನೆ. ರಾಷ್ಟ್ರಧ್ವಜ ನನಗೆ ತಾಯಿ ಸಮಾನ. ಆ ಬಗ್ಗೆ ಅಪಮಾನ ಮಾಡಿದವರು ರಾಷ್ಟ್ರದ್ರೋಹಿ ಆಗುತ್ತಾರೆ. ಕಾಂಗ್ರೆಸ್ನವರ ಇಂತಹ ಹೋರಾಟಗಳಿಗೆ ನಾನು ಹಿಗ್ಗಲ್ಲ, ಜಗ್ಗಲ್ಲ, ಬಗ್ಗುವುದಿಲ್ಲ. | ಕೆ.ಎಸ್.ಈಶ್ವರಪ್ಪ ಸಚಿವ ಸಚಿವ ಕೆ.ಎಸ್.ಈಶ್ವರಪ್ಪ ಅವರ ಹೇಳಿಕೆ ಖಂಡಿಸುವ ಭರಾಟೆಯಲ್ಲಿ ಕಾಂಗ್ರೆಸ್, ವಿಧಾನಮಂಡಲದ ಜಂಟಿ ಅಧಿವೇಶನಕ್ಕೆ ತಿಲಾಂಜಲಿಯಿಟ್ಟಿದೆ. ಒಂದು ಕಡೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದರೆ ಅದು ಧರಣಿ. ಅಸಲಿಗೆ ಧರಣಿ ಅಂದರೆ ಅರ್ಥ ಗೊತ್ತಿಲ್ಲದ ನಾಯಕರು ಪ್ರಜಾಪ್ರಭುತ್ವವನ್ನು ರಾಜ್ಯದಲ್ಲಿ ಹೇಗೆ ಎತ್ತಿ ಹಿಡಿಯುತ್ತಾರೆ? | ತುಳಸಿ ಮುನಿರಾಜುಗೌಡ ವಿಧಾನಪರಿಷತ್ ಸದಸ್ಯ
ಮಂಗಳವಾರ ಸಮಾಪ್ತಿ?: ಲಭ್ಯ ಮಾಹಿತಿ ಪ್ರಕಾರ ಸದನದಲ್ಲಿ ಸೋಮವಾರ ಪ್ರತಿಭಟನೆ ಮುಂದುವರಿದರೆ, ಮಂಗಳವಾರ ಅಧಿವೇಶನವನ್ನು ಮೊಟಕು ಮಾಡಲು ಆಡಳಿತ ಪಕ್ಷವೂ ತೆರೆಮರೆಯಲ್ಲಿ ಸಿದ್ಧತೆ ನಡೆಸಿದೆ. ಈಗಾಗಲೇ ಮಂಡನೆ ಆಗಿರುವ ವಿಧೇಯಕಗಳನ್ನು ಎರಡೂ ಸದನದಲ್ಲಿ ಅಂಗೀಕರಿಸಿದ ಬಳಿಕ ಅನಿರ್ದಿಷ್ಟ ಅವಧಿಗೆ ಸದನವನ್ನು ಮುಂದೂಡುವ ಸಾಧ್ಯತೆ ಹೆಚ್ಚಾಗಿದೆ. ಸೋಮವಾರ ಮತ್ತೊಂದು ಸುತ್ತಿನ ಮನವೊಲಿಕೆ ನಡೆಯಲಿದೆ. ಉಳಿದ ಐದು ದಿನಗಳಲ್ಲಾದರೂ ಕಲಾಪ ಸುಗಮವಾಗಿ ನಡೆಯಲಿ ಎಂಬ ಸಲಹೆಯನ್ನು ಆಡಳಿತ ಪಕ್ಷದ ಪ್ರಮುಖರು ಕಾಂಗ್ರೆಸ್ ಮುಂದೆ ಇಡಲಿದ್ದಾರೆ. ಸದ್ಯದ ಪರಿಸ್ಥಿತಿ ನೋಡಿದರೆ ಸರ್ಕಾರದ ಕೋರಿಕೆ ಪರಿಗಣಿಸುವ ಸ್ಥಿತಿಯಲ್ಲಿ ಪ್ರತಿಪಕ್ಷ ನಾಯಕರು ಇಲ್ಲ.