ನಾಗ್ಪುರ: ಇಲ್ಲಿನ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಅವರ ಪತ್ನಿ ಅಸಹಜ ಲೈಂಗಿಕಕ್ರಿಯೆಗೆ ಆಗ್ರಹಿಸುತ್ತಿದ್ದ ಆರೋಪ ಮಾಡಿದ್ದಾರೆ. ಇದೀಗ ನ್ಯಾಯಾಧೀಶರಿಂದ ಪ್ರತ್ಯೇಕಗೊಂಡಿರುವ ಅವರ ಪತ್ನಿ ಈ ದೂರು ದಾಖಲಿಸಿದ್ದು, ತಮಗೆ ನ್ಯಾಯಾಧೀಶರ ಕುಟುಂಬದವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಿದ್ದಾರೆ. ಇದನ್ನು ಆಧರಿಸಿ ಅಮ್ರಾವತಿಯ ವರೌಡ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಕೂಡ ದಾಖಲಾಗಿದೆ. ಇದೀಗ ಈ ಎಫ್ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಧೀಶರು ಬಾಂಬೆ ಹೈಕೋರ್ಟ್ಗೆ ಮನವಿ ಸಲ್ಲಿಸಿದ್ದಾರೆ.
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನ್ಯಾಯಾಧೀಶರ ಪತ್ನಿ ಜಲಗಾಂವ್ನ ಮುಕ್ತಾಯಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ, ಠಾಣಾ ವ್ಯಾಪ್ತಿಯ ಅವಶ್ಯಕತೆ ಇದೆ ಎಂಬ ಕಾರಣಕ್ಕೆ ಪ್ರಕರಣವನ್ನು ವರೌಡ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು. ಆ ಠಾಣೆಯಲ್ಲಿ ಈಗ ನ್ಯಾಯಾಧೀಶರು ಮತ್ತು ಅವರ ಕುಟುಂಬ ವರ್ಗದವರ ವಿರುದ್ಧ ವರದಕ್ಷಿಣೆ ಕಿರುಕುಳ (498ಎ), ಅಸಹಜ ಲೈಂಗಿಕಕ್ರಿಯೆ (377) ಸೇರಿ ಐಪಿಸಿ ವಿವಿಧ ದಂಡಸಂಹಿತೆಗಳ ಮೇರೆಗೆ ಎಫ್ಐಆರ್ ದಾಖಲಾಗಿದೆ.
ತಮ್ಮನ್ನು ಅಸಹಜ ಲೈಂಗಿಕಕ್ರಿಯೆಗೆ ಸಹಕರಿಸುವಂತೆ ನ್ಯಾಯಾಧೀಶರು ಒತ್ತಾಯಿಸುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕಾಗಿ ನನಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದರು. ಅಲ್ಲದೆ ನನ್ನ ನಗ್ನ ಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆಹಿಡಿದುಕೊಂಡು ಹೆಚ್ಚಿನ ಮಾನಸಿಕ ಕಿರುಕುಳ ನೀಡಲಾಗಿದೆ ಎಂದು ನ್ಯಾಯಾಧೀಶರ ಪತ್ನಿ ತಾವು ಕೊಟ್ಟಿರುವ ದೂರಿನಲ್ಲಿ ವಿವರಿಸಿದ್ದಾರೆ.
ಸೆಷನ್ಸ್ ನ್ಯಾಯಾಲಯದಿಂದ ಕುಟುಂಬದವರು ನಿರೀಕ್ಷಣಾ ಜಾಮೀನು ಪಡೆದುಕೊಂಡ ನಂತರದಲ್ಲಿ ಪ್ರತಿವಾರವೂ ಪೊಲೀಸ್ ಠಾಣೆಗೆ ಹಾಜರಾತಿ ನೀಡಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಇದರ ಬೆನ್ನಲ್ಲೇ ತಮ್ಮ ವಕೀಲ ಪರ್ವೇಜ್ ಮಿಶ್ರಾ ಅವರ ಮೂಲಕ ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ನ್ಯಾಯಾಧೀಶರ ಪತ್ನಿ ದೂರು ನೀಡಿ 13 ತಿಂಗಳ ಬಳಿಕ ಎಫ್ಐಆರ್ ದಾಖಲಿಸಲಾಗಿದೆ. ಇದರಿಂದಾಗಿ ಅವರ ವಿರುದ್ಧ ಅವರ ಪತ್ನಿ ಮಾಡುತ್ತಿರುವ ಆರೋಪಗಳ ಬಗ್ಗೆ ಸಾಕಷ್ಟು ಅನುಮಾನ ಮೂಡುತ್ತದೆ. ಕಳೆದ ವರ್ಷ ಇಬ್ಬರೂ ಒಪ್ಪಿಕೊಂಡು ವಿವಾಹವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ವಿಷಯವನ್ನು ಎಫ್ಐಆರ್ನಲ್ಲಿ ಪ್ರಸ್ತಾಪಸಿಲಾಗಿಲ್ಲ ಎಂದು ಬಾಂಬೆ ಹೈಕೋರ್ಟ್ಗೆ ತಾವು ಸಲ್ಲಿಸಿರುವ ಮೇಲ್ಮನವಿಯಲ್ಲಿ ಪ್ರತಿಪಾದಿಸಿದ್ದಾರೆ.