

ಸಿನಿಮಾ ಕಲಾವಿದರಿಗೆ ಇತ್ತೀಚಿನ ದಿನಗಳಲ್ಲಿ ಒಂದಲ್ಲ ಒಂದು ರೀತಿ ಬೆದರಿಕೆ ಕರೆಗಳು ಬರುತ್ತಿವೆ. ರಜನಿಕಾಂತ್ ಮನೆಯಲ್ಲಿ ಬಾಂಬ್ ಇಟ್ಟಿರುವ ಸುಳ್ಳು ಸುದ್ದಿ ಕಳೆದ ತಿಂಗಳು ಹರಿದಾಡಿತ್ತು. ದಳಪತಿ ವಿಜಯ್ ಸೇರಿ ಇನ್ನೂ ಹಲವು ನಟರಿಗೆ ಈ ರೀತಿ ಬೆದರಿಕೆ ಹಾಕಲಾಗಿತ್ತು. ಹೀಗಿರುವಾಗಲೇ ಶನಿವಾರ ರಾತ್ರಿ ತೆಲುಗು ನಟ ಮೋಹನ್ ಬಾಬು ಮನೆಗೇ ನುಗ್ಗಿ ಕೊಲೆ ಬೆದರಿಕೆ ಹಾಕಿದ ಗುಂಪನ್ನು ಪೊಲೀಸರು ಕೆಲವೇ ಗಂಟೆಯಲ್ಲಿ ವಶಕ್ಕೆ ಪಡೆದಿದ್ದಾರೆ.
ಶಂಶಾಬಾದ್ ವಿಮಾನ ನಿಲ್ದಾಣದ ಬಳಿ ಮೋಹನ್ ಬಾಬು ನಿವಾಸವಿದೆ. ರಾತ್ರೋರಾತ್ರಿ ನಾಲ್ವರು ಇನೋವಾ ಕಾರಿನಲ್ಲಿ ಆಗಮಿಸಿ, ಭದ್ರತಾ ಸಿಬ್ಬಂದಿಗೆ ಬೆದರಿಸಿ, ಮನೆಯ ಗೇಟ್ ಗುದ್ದಿಕೊಂಡು ಗಲಾಟೆ ಮಾಡಿತ್ತು. ಮನೆಗೆ ನುಗ್ಗಿ ಕೊಲೆ ಬೆದರಿಕೆ ಸಹ ಹಾಕಿತ್ತು. ಕೂಡಲೇ ಪಹಡಿ ಶರೀಫ್ ಪೊಲೀಸ್ ಠಾಣೆಗೆ ಕರೆ ಮಾಡಿ, ಘಟನೆ ಬಗ್ಗೆ ವಿವರಿಸಿ ದೂರು ನೀಡಿದ್ದರು.
ಅದರಂತೆ ಬೆಳಗಾಗುವಷ್ಟರಲ್ಲಿಯೇ ಸಿಸಿಟಿವಿ ಆಧರಿಸಿ, ಕೆಲವೇ ಗಂಟೆಗಳಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ರಾಘವೇಂದ್ರ, ಆನಂದ್, ಗೌತಮ್, ಡೇವಿಡ್ ಬಂಧಿತರಾಗಿದ್ದು, ವಿಜಯಲಕ್ಷ್ಮೀ ಎಂಬುವವರ ಹೆಸರಿನಲ್ಲಿ ವಾಹನ ನೋಂದಣಿಯಾಗಿರುವ ಮಾಹಿತಿ ಲಭ್ಯವಾಗಿದೆ. (ಏಜೆನ್ಸೀಸ್)