ವಿಜಯವಾಣಿ ಫೋನ್-ಇನ್ನಲ್ಲಿ ಜನರ ಸಮಸ್ಯೆ ಆಲಿಸಿದ ಶ್ರೀರಾಮುಲು ಅವರು ಕೆಲವರಿಗೆ ಫೋನ್ ಮೂಲಕವೇ ಪರಿಹಾರ ಕಲ್ಪಿಸಿದರು.
ಕೆಲಸ ಉಳಿಸಿಕೊಂಡ ಆರೋಗ್ಯ ಕಾರ್ಯಕರ್ತ: ಬಳ್ಳಾರಿ ಜಿಲ್ಲೆ ಕೂಡ್ಲಗಿ ನಿವಾಸಿ, ಮಲೇರಿಯಾ ಆರೋಗ್ಯ ಕಾರ್ಯಕರ್ತ ನವೀನ್ ಲಾಕ್ಡೌನ್ ಕಾರಣದಿಂದ ಕೆಲಸಕ್ಕೆ ಹಾಜರಾಗಿರಲಿಲ್ಲ. ಇದರಿಂದ ಅಧಿಕಾರಿಗಳು ಕೆಲಸಕ್ಕೆ ಬರದಂತೆ ಸೂಚಿಸಿದ್ದರು. ಈ ವಿಚಾರವಾಗಿ ಕರೆ ಮಾಡಿದ ನವೀನ್ನನ್ನು ಮೊದಲಿಗೆ ತರಾಟೆಗೆ ತೆಗೆದುಕೊಂಡ ಸಚಿವರು, ‘ಈ ಸಂದರ್ಭ ಎಲ್ಲರೂ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಬೇಕು. ಸರ್ಕಾರ ಕೆಲಸ ಕೊಟ್ಟರೂ ನೆಪ ಹೇಳುವುದು ಸರಿಯಲ್ಲ. ಸಮಸ್ಯೆ ಇದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ಫೋನ್ ಮಾಡಿ ಇಲ್ಲವೆ ಪತ್ರ ಬರೆದು ತಿಳಿಸಬೇಕಿತ್ತು. ಕರೊನಾದಂಥ ತುರ್ತು ಸಂದರ್ಭ ಎದುರಾದಾಗ ಕೆಲಸ ಮಾಡದೆ ಇನ್ಯಾವಾಗ ಮಾಡುತ್ತೀಯಾ? ಸಿಕ್ಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕಲ್ಲವೆ ಎಂದು ಪ್ರಶ್ನಿಸಿದರು. ತಪ್ಪೊಪ್ಪಿಕೊಂಡು ಕ್ಷಮೆ ಕೇಳಿದ ನವೀನ್ಗೆ ‘ಅಲ್ಲಿ-ಇಲ್ಲಿ ಆಡ್ಡಾಡಬೇಡ’ ಎಂದ ಸಚಿವರು, ಸ್ಥಳೀಯ ಆರೋಗ್ಯಾಧಿಕಾರಿಗೆ ಕರೆ ಮಾಡಿ ಅತನನ್ನು ಕೆಲಸಕ್ಕೆ ತೆಗೆದುಕೊಳ್ಳುವಂತೆ ಸೂಚಿಸಿದರು.
ಶಸ್ತ್ರಚಿಕಿತ್ಸೆಗೆ ಕ್ರಮ: ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಿವಾಸಿ, ಕಟ್ಟಡ ಕಾರ್ವಿುಕ ಜಯಣ್ಣ ಎಂಬಾತ ಕರೆ ಮಾಡಿ ತನ್ನ ಪತ್ನಿ ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ಶಸ್ತ್ರಚಿಕಿತ್ಸೆ ಮಾಡಿಸಲು ಹಣ ಹೊಂದಿಸುವಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ ಚಿಕಿತ್ಸೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪತ್ನಿಯ ಆರೋಗ್ಯ ಕ್ಷೀಣಿಸುತ್ತಿದೆ ಎಂದು ಅಳಲು ತೋಡಿಕೊಂಡರು. ಕೂಡಲೆ ಜಿಲ್ಲಾ ವೈದ್ಯಾಧಿಕಾರಿಗೆ ಕರೆ ಮಾಡಿದ ಶ್ರೀರಾಮುಲು, ಶಸ್ತ್ರಚಿಕಿತ್ಸೆ ನಡೆಸಿ ಸೂಕ್ತ ಆರೋಗ್ಯ ಸೇವೆ ಒದಗಿಸಲು ಸೂಚಿಸಿದರು.
ಕಿಡ್ನಿ ಕಸಿಗೆ ಅನುಮತಿ: ಬೆಳಗಾವಿಯ ಕಿತ್ತೂರಿನಿಂದ ಮಂಜುನಾಥ್ ಎಂಬುವರು ಕರೆ ಮಾಡಿ ತನ್ನ ಸಹೋದರ 3 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಸಹೋದರಿಯೇ ಕಿಡ್ನಿ ನೀಡಲು ಸಿದ್ಧರಿದ್ದಾರೆ. ಅಗತ್ಯ ಹಣಕಾಸು ವ್ಯವಸ್ಥೆಯನ್ನೂ ಮಾಡಿಕೊಂಡಿದ್ದೇವೆ. ಆದರೆ ಕಸಿ ಶಸ್ತ್ರಚಿಕಿತ್ಸೆಗೆ ರಾಜ್ಯ ಅಂಗಾಂಗ ಕಸಿ ಸಮಿತಿಯಿಂದ ಅನುಮತಿ ದೊರೆಯದೆ ವಿಳಂಬವಾಗುತ್ತಿದೆ ಎಂದರು. ಈ ಸಂಬಂಧ ಇನ್ನೊಂದು ವಾರದಲ್ಲಿ ಶಸ್ತ್ರಚಿಕಿತ್ಸೆಗೆ ಅನುಮತಿ ನೀಡುವುದರ ಜತೆಗೆ ಸರ್ಕಾರದಿಂದ ಚಿಕಿತ್ಸೆ ವೆಚ್ಚ ಭರಿಸುವ ಭರವಸೆಯನ್ನೂ ಸಚಿವರು ನೀಡಿದರು.
ಊಟ, ವಸತಿ ವ್ಯವಸ್ಥೆ: ಕೊಪ್ಪಳ ನಿವಾಸಿ ನಾಗರತ್ನ ಎಂಬುವರು ತನ್ನ ತಾಯಿ ಕರೊನಾ ಶಂಕಿತರಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ವರದಿಯಲ್ಲಿ ನೆಗೆಟಿವ್ ಬಂದಿದೆ. ಆದರೂ 14 ದಿನ ಕ್ವಾರಂಟೈನ್ ಮಾಡುವುದಾಗಿ ಹೇಳಿದ್ದಾರೆ. ಅದರೆ ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ನಮ್ಮನ್ನು ಮನೆಗೆ ಕಳುಹಿಸಿ ಎಂದು ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಆಸ್ಪತ್ರೆಯಲ್ಲಿ ವ್ಯವಸ್ಥೆಯನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ. ಕ್ವಾರಂಟೈನ್ ಅವಧಿ ಮುಗಿಯುವವರೆಗೂ ಮನೆಗೆ ಕಳುಹಿಸಲು ಸಾಧ್ಯವಿಲ್ಲ. ನೀವು ಬಯಸಿದರೆ ನಿಮಗೂ ಆಸ್ಪತ್ರೆಯಲ್ಲೇ ಅವರೊಂದಿಗೆ ಇರಲು ಸೂಕ್ತ ವಸತಿ ಹಾಗೂ ಉಟದ ವ್ಯವಸ್ಥೆ ಮಾಡಿಕೊಡಲಾಗುವುದು ಎಂದರು. ಕಾರ್ಯಕ್ರಮ ಮುಗಿಯುವುದರೊಳಗೆ
ಮನೆ ಬಾಗಿಲಿಗೆ ತಲುಪಿದ ಔಷಧ: ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ಮಲೆಬೆನ್ನೂರು ನಿವಾಸಿ ಶೇಷಾದ್ರಿ ಅವರು ಬ್ರೇನ್ ಹೆಮರೇಜ್ನಿಂದ ಬಳಲುತ್ತಿರುವ ತನ್ನ ಅಣ್ಣನಿಗೆ ಅಗತ್ಯವಾದ ‘ಸಿಟಿಕೊಲಿನ್ - 500’ ಮಾತ್ರೆ ಎಲ್ಲೂ ಸಿಗುತ್ತಿಲ್ಲ ಎಂದು ಕರೆ ಮಾಡಿ ಅಲವತ್ತುಕೊಂಡರು. ತಕ್ಷಣ ಸಚಿವರು ಸ್ಥಳೀಯ ಆರೋಗ್ಯಾಧಿಕಾರಿಗಳನ್ನು ಸಂರ್ಪಸಿ ಔಷಧ ತಲುಪಿಸಲು ಸೂಚಿಸಿದರು. ಫೋನ್-ಇನ್ ಮುಗಿದ ಬಳಿಕ ಶ್ರೇಷಾದ್ರಿ ಅವರನ್ನು ‘ವಿಜಯವಾಣಿ’ ಸಂರ್ಪಸಿದಾಗ ಅಚ್ಚರಿ ಕಾದಿತ್ತು. ಕರೆ ಮಾಡಿದ್ದ ವೇಳೆ ಔಷಧ ತಲುಪಿಸಲು ಮೂರು ಗಂಟೆ ಅವಕಾಶ ಕೇಳಿದ ಸಚಿವರು, ಕೇವಲ ಒಂದೂವರೆ ತಾಸಿನಲ್ಲೇ ಮನೆ ಬಾಗಿಲಿಗೆ ಮಾತ್ರೆ ತಲುಪುವಂತೆ ಮಾಡಿದರು. ಸಚಿವರ ಈ ಕಾರ್ಯಕ್ಕೆ ಕೃತಜ್ಞತೆ ಸಲ್ಲಿಸಿದ ಶ್ರೇಷಾದ್ರಿ ಅವರು, ಈ ಉಪಕಾರವನ್ನು ನಾವು ಮರೆಯುವುದಿಲ್ಲ ಎಂದರು.
ಇದನ್ನೂ ಓದಿ: ಭಾರತದಲ್ಲಿ 2000 ತಲುಪಿತು ಕರೊನಾದಿಂದ ಸತ್ತವರ ಸಂಖ್ಯೆ!
ರ್ಯಾಪಿಡ್ ಟೆಸ್ಟ್ ಕಿಟ್: ರಾಜ್ಯದಲ್ಲಿ ಕರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರನ್ನು ಶೀಘ್ರ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಮೂಲಕ ವೈರಸ್ ಹರಡುವುದನ್ನು ತಡೆಯಲು ರ್ಯಾಪಿಡ್ ಟೆಸ್ಟ್ ಕಿಟ್ ಬಳಕೆ ಮಾಡಲು ಸರ್ಕಾರ ಸಜ್ಜಾಗಿದೆ. ಈ ಕಿಟ್ ಬಳಕೆಯಿಂದ ಕೇವಲ 15-20 ನಿಮಿಷಗಳಲ್ಲಿ ಸೋಂಕಿತರನ್ನು ಪತ್ತೆ ಹಚ್ಚಬಹುದಾಗಿದೆ. ಇದರಿಂದ ಸೋಂಕಿತರನ್ನು ಬೇಗನೆ ಗುರುತಿಸಿ ಚಿಕಿತ್ಸೆಗೆ ಒಳಪಡಿಸಲು ಅನುಕೂಲವಾಗಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಈಗಾಗಲೆ ದಕ್ಷಿಣ ಕೊರಿಯಾದಿಂದ ರ್ಯಾಪಿಡ್ ಟೆಸ್ಟ್ ಕಿಟ್ಗಳ ಖರೀದಿಗೆ ಮುಂದಾಗಿದ್ದು, ಅದು ಬಂದ ಬಳಿಕ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್ )ನಿಂದ ಪರೀಕ್ಷೆ ನಡೆಸಲಾಗುವುದು. ಪರೀಕ್ಷೆಯಲ್ಲಿ ಬಳಕೆಗೆ ಯೋಗ್ಯ ಎಂದು ಐಸಿಎಂಆರ್ ಅನುಮತಿ ನೀಡಿದ ಬಳಿಕವಷ್ಟೇ ರಾಜ್ಯಗಳಿಗೆ ಕಿಟ್ಗಳನ್ನು ವಿತರಿಸಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಚೀನಾಕ್ಕೆ ವಾಪಸ್: ಕರೊನಾ ಸೋಂಕಿತರ ಶೀಘ್ರ ಪತ್ತೆಗಾಗಿ ಈ ಹಿಂದೆ ಕೇಂದ್ರ ಸರ್ಕಾರ ಚೀನಾದಿಂದ ಸುಮಾರು 2 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ಗಳನ್ನು ಖರೀದಿಸಿತ್ತು. ಅವುಗಳಲ್ಲಿ ರಾಜ್ಯಕ್ಕೆ 2 ಸಾವಿರ ಕಿಟ್ಗಳ ಹಂಚಿಕೆ ಸಹ ಮಾಡಲಾಗಿತ್ತು. ಬಳಕೆಗೂ ಮುನ್ನವೇ ಅವು ಕಳಪೆ ಎಂಬುದು ತಿಳಿದು ಹಿಂಪಡೆದ ಕೇಂದ್ರ ಸರ್ಕಾರ ಅವುಗಳನ್ನು ಚೀನಾಗೆ ವಾಪಸ್ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದರು.