Sensex crashes : ಅಮೆರಿಕದ ನೂತನ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರ ಸ್ವೀಕರಿಸಿದ ಒಂದು ದಿನದ ಬೆನ್ನಲ್ಲೇ ಭಾರತದ ಷೇರುಪೇಟೆಯಲ್ಲಿ ಮಹಾ ಕುಸಿತ ಕಂಡುಬಂದಿದೆ. ಬಿಎಸ್‌ಇ ಸೆನ್ಸೆಕ್ಸ್ ಮತ್ತು ಎನ್‌ಎಸ್‌ಇ ನಿಫ್ಟಿ ಎರಡೂ ಸೂಚ್ಯಂಕಗಳು ತಲಾ 1 ಪ್ರತಿಶತಕ್ಕೂ ಹೆಚ್ಚು ಕುಸಿತಕಂಡಿದ್ದು, ಷೇರುದಾರರಿಗೆ ಭಾರಿ ನಷ್ಟ ಉಂಟಾಗಿದೆ.
ಸೆನ್ಸೆಕ್ಸ್ 1,300 ಅಂಕಗಳಿಗೂ ಹೆಚ್ಚು ಕುಸಿತ ಕಂಡು ದಿನದ ಕನಿಷ್ಠ ಮಟ್ಟ 75,641ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 50, 368 ಅಂಕಗಳನ್ನು ಕುಸಿತದೊಂದಿಗೆ 22,977ಕ್ಕೆ ತಲುಪಿತು. ಇಂದಿನ ವಹಿವಾಟಿನಲ್ಲಿ ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ತಲಾ 2 ಪ್ರತಿಶತಕ್ಕೂ ಹೆಚ್ಚು ಕುಸಿತ ಕಂಡವು. ಭಾರತೀಯ ಷೇರು ಮಾರುಕಟ್ಟೆಯಲ್ಲಿ ಮಾರಾಟ ಪ್ರವೃತ್ತಿ ಹೆಚ್ಚಾದ ಕಾರಣ 7.4 ಲಕ್ಷ ಕೋಟಿಗೂ ಹೆಚ್ಚು ಹೂಡಿಕೆದಾರರ ಸಂಪತ್ತು ನಷ್ಟವಾಗಿದೆ.
ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರಕ್ಕೆ ಬಂದ ಮೊದಲ ದಿನವೇ ಕೆನಡಾ ಮತ್ತು ಮೆಕ್ಸಿಕೊ ಮೇಲಿನ ಸುಂಕಗಳು ಸೇರಿದಂತೆ ಹಲವಾರು ಘೋಷಣೆಗಳನ್ನು ಮಾಡಿದರು. ಭಾರತ ಸೇರಿದಂತೆ ಹಲವಾರು ದೇಶಗಳ ಮೇಲೆ ಹೆಚ್ಚಿನ ಸುಂಕಗಳನ್ನು ವಿಧಿಸುವ ಬೆದರಿಕೆಯನ್ನು ಹಾಕಿದ್ದಾರೆ. ಅಲ್ಲದೆ, ಅವರ ವಲಸೆ ನೀತಿಗಳು ಭಾರತೀಯ ತಂತ್ರಜ್ಞಾನ ವಲಯದ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತಿದೆ.
ಟ್ರಂಪ್ 2.0 ಸರ್ಕಾರ ಆರ್ಥಿಕ ನಿರ್ಧಾರಗಳ ಬಗ್ಗೆ ಹೆಚ್ಚಿನ ಸ್ಪಷ್ಟತೆ ಇಲ್ಲದೆ ಪ್ರಾರಂಭವಾಗಿದೆ. ಉದ್ಘಾಟನಾ ಭಾಷಣದಲ್ಲೇ ವಲಸಿಗರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದರ ಬಗ್ಗೆ ಟ್ರಂಪ್ ಅವರು ಸ್ಪಷ್ಟವಾಗಿ ಮಾತನಾಡಿದ್ದರೂ ಸುಂಕಗಳ ವಿಚಾರದಲ್ಲಿ ಅವರ ಮಾತುಗಳು ಅಸ್ಪಷ್ಟವಾಗಿವೆ. ಹೀಗಾಗಿ ಮುಂದೇನಾಗಬಹುದು ಎಂಬ ಆತಂಕದಲ್ಲಿ ಷೇರುಪೇಟೆಯಲ್ಲಿ ಷೇರುಗಳ ತೀವ್ರ ಮಾರಾಟವು ದಿನದ ವಹಿವಾಟುವಿನ ಮೇಲೆ ಪರಿಣಾಮ ಬೀರಿದೆ.
ಇನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಶನಿವಾರ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರವು ಬಳಕೆಯನ್ನು ಹೆಚ್ಚಿಸಲು, ಗ್ರಾಮೀಣ ವಲಯವನ್ನು ಬಲಪಡಿಸಲು ಮತ್ತು ಉತ್ಪಾದನೆ ಮತ್ತು ಮೂಲಸೌಕರ್ಯವನ್ನು ಬೆಂಬಲಿಸಲು ಕ್ರಮಗಳನ್ನು ಘೋಷಿಸುತ್ತದೆ ಎಂಬ ನಿರೀಕ್ಷೆಗಳು ಹೆಚ್ಚಿವೆ. ಅಲ್ಲದೆ, ತೆರಿಗೆ ವಿಚಾರದಲ್ಲೂ ಬದಲಾವಣೆಗಳಾಗುವ ಸಾಧ್ಯತೆ ಇದೆ. ಹೀಗಾಗಿ ಮಾರುಕಟ್ಟೆಯಲ್ಲಿ ಈ ಬದಲಾವಣೆಗೆ ಕಾರಣವಾಗಿದೆ ಎನ್ನಲಾಗಿದೆ. ಇದಿಷ್ಟೇ ಅಲ್ಲದೆ, ರೂಪಾಯಿ ಎದುರು ಬಲಗೊಳ್ಳುತ್ತಿರುವ US ಡಾಲರ್ ಮತ್ತು ಹೆಚ್ಚುತ್ತಿರುವ ಬಾಂಡ್ ಇಳುವರಿಯ ಮಧ್ಯೆ ವಿದೇಶಿ ಬಂಡವಾಳ ಹೂಡಿಕೆದಾರರು ನಿರಂತರ ಷೇರು ಮಾರಾಟ ಮಾಡುತ್ತಿರುವುದು ಇತ್ತೀಚಿನ ತಿಂಗಳುಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಕುಸಿತದ ಹಿಂದಿನ ಪ್ರಮುಖ ಅಂಶವಾಗಿದೆ. (ಏಜೆನ್ಸೀಸ್)