ನ್ಯೂಸ್

ಲಾಕ್​ಡೌನ್ ಪ್ರಭಾವ: 2 ಸಾವಿರ ಅಂಶ ಕುಸಿತ ಕಂಡ ಸೆನ್ಸೆಕ್ಸ್​

ನವದೆಹಲಿ: ಲಾಕ್​ಡೌನ್​ 3.0 ಭಾರತದ ಷೇರುಪೇಟೆಯ ಮೇಲೆ ಭಾರಿ ಹೊಡೆತ ಬಿದ್ದಿದೆ. ಜಾಗತಿಕ ಷೇರುಪೇಟೆಗಳಲ್ಲಿನ ವಹಿವಾಟು ಹಾಗೂ ಅಮೆರಿಕ ಮತ್ತು ಚೀನಾ ನಡುವಿನ ಬಿಕ್ಕಟ್ಟಿನ ಪರಿಣಾಮವಾಗಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ತಿಂಗಳ ಶುರುವಿನಲ್ಲಿಯೇ 2000 ಅಂಶ ಕುಸಿದಿದೆ.

ಲೋಹ, ಹಣಕಾಸು, ಆಟೊ ವಲಯದ ಷೇರುಗಳು ತೀವ್ರ ನಷ್ಟಕ್ಕೆ ಒಳಗಾಗಿವೆ. ಕಳೆದ ವಾರಾಂತ್ಯದ ವಹಿವಾಟಿನಲ್ಲಿ ಸೆನ್ಸೆಕ್ಸ್‌ 33,717 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿತ್ತು. ಈ ಮೂಲಕ ಶೇ 7.6 ರಷ್ಟು ಜಿಗಿತ ಕಂಡಿತ್ತು. ಶೇ. 7.7 ರಷ್ಟು ಏರಿಕೆಯೊಂದಿಗೆ ನಿಫ್ಟಿ 9,859 ಅಂಶಗಳಲ್ಲಿ ವಹಿವಾಟನ್ನು ಮುಕ್ತಾಯಗೊಳಿಸಿತ್ತು.

ಆದರೆ ಈಗ ಸೆನ್ಸೆಕ್ಸ್‌ 2,002.27 ಅಂಶ (ಶೇ 5.94) ಇಳಿಕೆಯಾಗಿದೆ. ಈ ಮೂಲಕ 31,715.35 ಅಂಶಗಳಲ್ಲಿ ವಹಿವಾಟು ಮುಕ್ತಾಯವಾಗಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 566.40 ಅಂಶ (ಶೇ 5.74) ಅಂಶ ಕಡಿಮೆಯಾಗಿ 9,293.50 ಅಂಶ ಮುಟ್ಟಿದೆ.

ಹಿಂದೂಸ್ತಾನ್ ಯೂನಿಲಿವರ್‌ , ರಿಲಯನ್ಸ್‌ , ಐಸಿಐಸಿಐ ಬ್ಯಾಂಕ್‌, ಟಾಟಾ ಸ್ಟೀಲ್‌, ಇನ್​ಫೋಸಿಸ್​, ಐಟಿಸಿ ಷೇರುಗಳ ಬೆಲೆ ಶೇ 2ರಿಂದ ಶೇ 10.5ರಷ್ಟು ಇಳಿಕೆ ಕಂಡಿವೆ.

ಇದರ ಜತೆಗೆ, ಲಾಕ್​ಡೌನ್​ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ಕಾರ್ಯನಿರ್ವಹಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ, ಅವು ಶೂನ್ಯ ವಾಹನ ಮಾರಾಟ ಕಂಡಿವೆ. ಇದರ ಪರಿಣಾಮವೂ ಸೆನ್ಸೆಕ್ಸ್​ ಮೇಲೆ ಬಿದ್ದಿದೆ.

ಟಾಟಾ ಮೋಟಾರ್ಸ್‌ ಷೇರುಬೆಲೆಯು ಶೇ. 12.45ರಷ್ಟು ಕಡಿಮೆಯಾಗಿದ್ದರೆ, ಮದರ್‌ಸನ್‌ ಸುಮಿ ಸಿಸ್ಟಮ್ಸ್‌ ಷೇರು ಶೇ 12.27ರಷ್ಟು, ಅಪೋಲೋ ಟಯರ್ಸ್​ ಶೇ. 9.45ರಷ್ಟು, ಹೀರೋ ಮೋಟೋಕಾರ್ಪ್​ ಶೇ. 8.34ರಷ್ಟು, ಅಶೋಕ ಲೇಲ್ಯಾಂಡ್‌ ಶೇ. 7.83ರಷ್ಟು, ಟಿವಿಎಸ್‌ ಮೋಟಾರ್ಸ್‌ ಕಂಪನಿ ಶೇ 7.16ರಷ್ಟು, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಶೇ. 6.95ರಷ್ಟು, ಬಜಾಜ್‌ ಆಟೊ ಶೇ. 6.66ರಷ್ಟು ಹಾಗೂ ಐಷರ್‌ ಮೋಟಾರ್ಸ್‌ ಶೇ 6.30ರಷ್ಟು ಕಡಿಮೆಯಾಗಿವೆ. (ಏಜೆನ್ಸೀಸ್​)