ಕೊಲ್ಕತಾ : ಹಿರಿಯ ತೃಣಮೂಲ ಕಾಂಗ್ರೆಸ್(ಟಿಎಂಸಿ) ಸಂಸದ ಮತ್ತು ಕೆಲವು ತಿಂಗಳ ಮುಂಚೆ ಬಿಜೆಪಿ ಸೇರಿದ ಸುವೇಂದು ಅಧಿಕಾರಿಯವರ ತಂದೆ ಸಿಸಿರ್ ಅಧಿಕಾರಿ ಅವರು ಬಿಜೆಪಿ ಸೇರುವ ಸಾಧ್ಯತೆಗಳು ಕಂಡುಬರುತ್ತಿವೆ. ಇಂದು ಪಶ್ಚಿಮ ಬಂಗಾಳದ ಎಗ್ರಾದಲ್ಲಿ ನಡೆಯಲಿರುವ ಬಿಜೆಪಿ ನಾಯಕ ಹಾಗೂ ಗೃಹ ಮಂತ್ರಿ ಅಮಿತ್ ಷಾ ಅವರ ಸಾರ್ವಜನಿಕ ರಾಲಿಯಲ್ಲಿ ಸಿಸಿರ್ ಅಧಿಕಾರಿ ಭಾಗವಹಿಸಲಿದ್ದಾರೆ.
ಕಳೆದ ಡಿಸೆಂಬರ್ನಲ್ಲಿ ಇದೇ ರೀತಿ ಷಾ ರಾಲಿಯ ವೇಳೆ ಸುವೇಂದು ಅಧಿಕಾರಿ ಟಿಎಂಸಿಯಿಂದ ಬಿಜೆಪಿಗೆ ಹಾರಿದ್ದರು. ಈಗ ಅವರ ತಂದೆ ಕಾಂತಿ ಕ್ಷೇತ್ರದ ಲೋಕಸಭಾ ಸದಸ್ಯರಾಗಿರುವ ಸಿಸಿರ್, ಅದೇ ರೀತಿ ಷಾ ರಾಲಿಯಲ್ಲಿ ಭಾಗವಹಿಸುತ್ತಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ. ಅವರೊಂದಿಗೆ ಟಿಎಂಸಿ ಸಂಸದರೇ ಆದ ಪುತ್ರ ದಿಬ್ಯೇಂದು ಅಧಿಕಾರಿ ಕೂಡ ರಾಲಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆ ಪ್ರತಿಷ್ಠಿತ ದಿಘಾ-ಶಂಕರ್‌ಪುರ ಅಭಿವೃದ್ಧಿ ಮಂಡಳಿಯ ಚೇರ್ಮನ್ಗಿರಿಯಿಂದ ಮತ್ತು ಟಿಎಂಸಿಯ ಜಿಲ್ಲಾ ಘಟಕದ ಅಧ್ಯಕ್ಷತೆಯಿಂದ ಸಿಸಿರ್ ಅಧಿಕಾರಿ ಅವರನ್ನು ಟಿಎಂಸಿ ಕೆಳಗಿಳಿಸಿತ್ತು. ಸುದ್ದಿಗಾರರೊಂದಿಗೆ ಮಾತನಾಡಿರುವ ಸಿಸಿರ್ ಅಧಿಕಾರಿ, "ನನ್ನ ಇಡೀ ಕುಟುಂಬವನ್ನು ಟಿಎಂಸಿಯೇ ದೂರ ತಳ್ಳುತ್ತಿದೆ" ಎಂದಿದ್ದಾರೆ. ಜೊತೆಗೆ ನಂದೀಗ್ರಾಮದಲ್ಲಿ ಟಿಎಂಸಿ ಮುಖ್ಯಸ್ಥೆ ಸಿಎಂ ಮಮತಾ ಬ್ಯಾನರ್ಜಿ ಅವರ ಎದುರು ಸ್ಪರ್ಧಿಸುತ್ತಿರುವ ತಮ್ಮ ಮಗ ಸುವೇಂದು ಪರವಾಗಿ ತಾವು ಪ್ರಚಾರ ಮಾಡುವುದಾಗಿ ಕೂಡ ಹೇಳಿಕೆ ನೀಡಿದ್ದಾರೆ. (ಏಜೆನ್ಸೀಸ್)