ನ್ಯೂಸ್

ಗೃಹಲಕ್ಷ್ಮಿ ಯೋಜನೆ ಹಣ ಕೂಡಿಟ್ಟು ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ; ಬಳಿಕ ಹೇಳಿದ್ದಿಷ್ಟು

ಚಿಕ್ಕೋಡಿ: 2023ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್​ ಪಕ್ಷ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಅದರಂತೆ ಪ್ರತಿ ಮನೆ ಒಡತಿಗೆ 2000 ರೂಪಾಯಿ ನೀಡುವ ಗೃಹಲಕ್ಷ್ಮಿ ಯೋಜನೆ ಸಹ ಒಂದಾಗಿದ್ದು, ಇದರಿಂದ ಬರುವ ಹಣದಿಂದ ಬಹಳಷ್ಟು ಕುಟುಂಬಗಳಿಗೆ ಅನುಕೂಲವಾಗಿದೆ.

ಅದರಂತೆ ಈ ಹಿಂದೆ ಮಹಿಳೆಯರು ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಮೊಬೈಲ್​, ಕಣ್ಣಿನ ಶಸ್ತ್ರಚಿಕಿತ್ಸೆ, ಫ್ರಿಡ್ಜ್​ ಖರೀದಿಸಿ ಸುದ್ದಿಯಾಗಿದ್ದರು. ಇದೀಗ ಗ್ಯಾರಂಟಿ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಅಜ್ಜಿಯೊಬ್ಬರು ಹೋಳಿಗೆ ಊಟ ಹಾಕಿಸಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ನಡೆದಿದೆ.

ಅಕ್ಕಾತಾಯಿ ಲಂಗೋಟಿ ಹೆಸರಿನ ಅಜ್ಜಿ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣವನ್ನು ಕೂಡಿಟ್ಟು ಇಡೀ ಗ್ರಾಮಸ್ಥರಿಗೆ ಹೋಳಿಗೆ ಊಟ ಹಾಕಿಸಿದ್ದಾರೆ. ಇವರ ಕಾರ್ಯಕ್ಕೆ ಗ್ರಾಮಸ್ಥರು ಸಾಥ್​ ನೀಡಿದ್ದು, ವೃದ್ಧೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಈ ಕುರಿತು ಮಾತನಾಡಿರುವ ವೃದ್ಧೆ ಅಕ್ಕತಾಯಿ, ಸಿದ್ದರಾಮಯ್ಯನವರು ಪ್ರತಿ ತಿಂಗಳು ನಮಗೆಲ್ಲಾ 2,000 ಹಣ ನೀಡ್ತಿದ್ದಾರೆ. ರಾಜಕೀಯವಾಗಿ ಸಿದ್ದರಾಮಯ್ಯನವರು ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು. ಹೀಗಾಗಿ ಗ್ರಾಮದ ದೇವತೆಗೆ ಪೂಜೆ ಸಲ್ಲಿಸಿ ಊರಲ್ಲಿ ಹೋಳಿಗೆ ಊಟ ಹಾಕಿಸಿದ್ದೇನೆ. ಇದೇ ವೇಳೆ ಐದು ಜನ ಮಹಿಳೆಯರಿಗೆ ಉಡಿ ತುಂಬಿ ವೃದ್ಧೆ ಹರಿಸಿದ್ದಾರೆ. ವೃದ್ಧೆಯ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ಪಾತ್ರವಾಗುತ್ತಿದ್ದು, ಅಜ್ಜಿಯ ಕಾರ್ಯಕ್ಕೆ ಗ್ರಾಮದ ಮಹಿಳೆಯರು ಸಾಥ್​ ನೀಡಿದ್ದಾರೆ.