ನ್ಯೂಸ್

ಕರೊನಾಗೆ ಸ್ವಯಂಚಿಕಿತ್ಸೆ ಸೇಫಲ್ಲ; ಆರೋಗ್ಯ ಇಲಾಖೆ ಎಚ್ಚರಿಕೆ

| ಪಂಕಜ ಕೆ.ಎಂ. ಬೆಂಗಳೂರು

ಕರೊನಾ ರೋಗಲಕ್ಷಣ ಕಂಡುಬಂದರೂ ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯದೆ ಮನೆಯಲ್ಲೇ ಸ್ವಯಂಚಿಕಿತ್ಸೆಗೊಳಪಡುತ್ತಿರುವವರ ಸಂಖ್ಯೆ ಹೆಚ್ಚಾದಂತೆ ಸಾವಿನ ಸಂಖ್ಯೆ ಕೂಡ ಉಲ್ಬಣಿಸುತ್ತಿರುವುದು ಆತಂಕ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಹೋಂ ಐಸೋಲೇಷನ್​ಗೆ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ದಿನಕಳೆದಂತೆ ಕರೊನಾ ಬಗ್ಗೆ ಆರಂಭದಲ್ಲಿದ್ದ ಆತಂಕ, ಎಚ್ಚರಿಕೆ ಮಾಯವಾಗುತ್ತಿದೆ. ರೋಗ ಲಕ್ಷಣ ಪತ್ತೆಯಾದರೂ ತಾವು ಕರೊನಾ ಗೆದ್ದು ಬರುತ್ತೇವೆಂಬ ಅತಿಯಾದ ಆತ್ಮವಿಶ್ವಾಸದಿಂದ ಬಹುತೇಕರು ಮನೆಯಲ್ಲೇ ಸ್ವಯಂಚಿಕಿತ್ಸೆ ಗೊಳಪಡುತ್ತಿದ್ದಾರೆ. ಬಳಿಕ ದೇಹಸ್ಥಿತಿ ಗಂಭೀರಗೊಂಡಾಗ ಆಸ್ಪತ್ರೆಗೆ ಧಾವಿಸಿ ಚಿಕಿತ್ಸೆ ವಿಫಲಗೊಂಡು ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಹೀಗಾಗಿ ಪರಿಷ್ಕೃತ ಮಾರ್ಗಸೂಚಿ ಪ್ರಕಟಿಸಿದೆ.

ಕೆಮ್ಮು, ಜ್ವರ, ಉಸಿರಾಟದ ಸಮಸ್ಯೆ, ಗಂಟಲು ನೋವು ಮಾತ್ರ ಕರೊನಾ ಲಕ್ಷಣ ಎಂದು ಈವರೆಗೆ ತಿಳಿಯಲಾಗಿತ್ತು. ಆದರೆ ಸಾಂಕ್ರಾಮಿಕ ರೋಗಿಗಳಿಗೆ ಬರುವ ಎಲ್ಲ ಲಕ್ಷಣಗಳು ಕೋವಿಡ್ ಲಕ್ಷಣಗಳೇ ಆಗಿವೆ ಎಂದು ಈಗ ತಜ್ಞರು ಗುರುತಿಸಿದ್ದಾರೆ. ಆದರೆ, ಬಹಳಷ್ಟು ಮಂದಿ ಈ ಲಕ್ಷಣಗಳನ್ನು ನಿರ್ಲಕ್ಷಿಸಿ ಸ್ವಯಂಚಿಕಿತ್ಸೆ ಮಾಡಿಕೊಳ್ಳುತ್ತಿದ್ದಾರೆ. ಕರೊನಾ ಬಂದರೂ ಸ್ವಯಂಚಿಕಿತ್ಸೆಗೊಳಪಟ್ಟಿದ್ದ ಬೆಂಗಳೂರಿನ ಖಾಸಗಿ ಕಾಲೇಜು ಉಪನ್ಯಾಸಕ ಹಾಗೂ ಅದೇ ಕಾಲೇಜಿನ ಮತ್ತೊಬ್ಬ ಉಪನ್ಯಾಸಕ ಮತ್ತು ಆತನ ಪತ್ನಿ ಮೃತಪಟ್ಟಿದ್ದಾರೆ.

ಜ್ವರ ಬಂದಾಗಲೆಲ್ಲ ಡೋಲೋ-650 ಮಾತ್ರೆ ಹಾಗೂ ಕೆಮ್ಮಿನ ಸಿರಪ್ ಸೇವಿಸುತ್ತಿದ್ದ ಈ ಮೂವರು ಸ್ವಯಂ ಹೋಂಕ್ವಾರಂಟೈನ್​ಗೆ ಒಳಗಾಗಿದ್ದರು. ವೈದ್ಯರನ್ನು ಭೇಟಿಯಾಗಿ ಸಲಹೆ ಪಡೆಯದೆಯೇ ಮಾತ್ರೆ, ಔಷಧ ಸೇವಿಸುತ್ತಿದ್ದರು. ಸೋಂಕು ಉಲ್ಬಣಗೊಂಡ ನಂತರ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿದ್ದರಿಂದ ಮೂವರ ಜೀವ ಹೋಗಿದೆ.

20 ಮಂದಿಗೊಂದು ಡಿಜಿಟಲ್ ಟೀಂ: ಭೌಗೋಳಿಕ ಪ್ರದೇಶ ಆಧರಿಸಿ ಹೋಂ ಐಸೋಲೇಷನ್​ನಲ್ಲಿರುವ ಪ್ರತಿ 10ರಿಂದ 20 ಮಂದಿಯ ತಪಾಸಣೆಗೆ ಒಬ್ಬ ವೈದ್ಯರು, ಒಬ್ಬರು ಸ್ಟಾಫ್ ನರ್ಸ್, ಒಬ್ಬ ಆರೋಗ್ಯ ಕಾರ್ಯಕರ್ತರನ್ನು ಒಳಗೊಂಡ ಡಿಜಿಟಲ್ ಮೊಬೈಲ್ ತಂಡ ರಚಿಸಬೇಕು. ಈ ತಂಡ ಮೂರು ದಿನಗಳಿಗೆ ಒಮ್ಮೆ ಸೋಂಕಿತ ವ್ಯಕ್ತಿಯ ಮನೆಗೆ ಭೇಟಿ ನೀಡಿ, ಆರೋಗ್ಯ ತಪಾಸಣೆ ನಡೆಸಬೇಕು. ಈ ವೇಳೆ ರೋಗಿ ಇತರೆ ಕಾಯಿಲೆಯಿಂದ ಸಮಸ್ಯೆಗೆ ಒಳಗಾದಲ್ಲಿ ಅಥವಾ ಸೋಂಕಿನಿಂದ ತೀವ್ರ ಅಸ್ವಸ್ಥಗೊಂಡಿದ್ದಲ್ಲಿ ಆಸ್ಪತ್ರೆಗೆ ದಾಖಲಿಸಬೇಕು. ಡಿಜಿಟಲ್ ಮೊಬೈಲ್ ತಂಡ ಥರ್ವಮೀಟರ್, ಪಲ್ಸ್ ಆಕ್ಸಿಮೀಟರ್, ಔಷಧಗಳು ಹಾಗೂ ವೈದ್ಯಕೀಯ ಉಪಕರಣ ಹೊಂದಿರಬೇಕು.

60 ವರ್ಷ ಮೇಲ್ಪಟ್ಟವರಿಗಿಲ್ಲ

ಈ ಮೊದಲು 50 ವರ್ಷದೊಳಗಿನ ಲಕ್ಷಣರಹಿತರಿಗೆ ಮನೆ ಆರೈಕೆಗೆ ಅವಕಾಶ ಮಾಡಿಕೊಡಲಾಗಿತ್ತು. ಆಗಸ್ಟ್​ನಲ್ಲಿ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದ ಇಲಾಖೆ, ಮನೆ ಆರೈಕೆಗೆ ಒಳಪಡುವವರ ವಯಸ್ಸನ್ನು 50 ರಿಂದ 60ಕ್ಕೆ ಹೆಚ್ಚಿಸಿ, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇತರೆ ಆರೋಗ್ಯ ಸಮಸ್ಯೆ ಹೊಂದಿದ 60 ವರ್ಷ ಒಳಗಿನ ಸೋಂಕಿತರ ಆರೋಗ್ಯ ತಪಾಸಣೆ ನಡೆಸಿದ ವೈದ್ಯರು ಜೀವಕ್ಕೆ ಅಪಾಯವಿಲ್ಲ ಎಂದು ದೃಢಪಡಿಸಿದಲ್ಲಿ ಅಂತಹವರು ಮನೆ ಆರೈಕೆಗೆ ಒಳಗಾಗಬಹುದು. ಆದರೆ 60 ವರ್ಷ ಮೇಲ್ಪಟ್ಟವರು ಸೋಂಕಿಗೆ ಒಳಗಾದಲ್ಲಿ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಹೇಳಿತ್ತು.

ಎಲ್ಲರೂ ಮನೆಚಿಕಿತ್ಸೆಗೆ ಅರ್ಹರಲ್ಲ

ಕರೊನಾ ಸೋಂಕು ದೃಢಪಟ್ಟವರೆಲ್ಲರೂ ಮನೆಚಿಕಿತ್ಸೆ ಪಡೆಯಲು ಅರ್ಹರಲ್ಲ. ವೈದ್ಯರು ಅವರ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆಗಳನ್ನು ನೀಡಿ ಅಪಾಯದ ಪ್ರಮಾಣ ಆಧರಿಸಿ ಆಸ್ಪತ್ರೆಯೋ, ಮನೆಯೋ ಎಂದು ಸೂಚಿಸುತ್ತಾರೆ. ಹೋಂ ಐಸೋಲೇಷನ್​ಗೆ ಒಳಗಾದವರಿಗೆ ಯಾವ ರೀತಿ ಔಷಧ ಹಾಗೂ ಆಹಾರ ಸೇವಿಸಬೇಕು ಎಂಬ ಬಗ್ಗೆ ವೈದ್ಯರೇ ಸಲಹೆ ನೀಡುತ್ತಾರೆ. ಕಾಲಕಾಲಕ್ಕೆ ಆರೋಗ್ಯ ಕುರಿತು ಮಾಹಿತಿ ಪಡೆದು ಅನಿವಾರ್ಯತೆ ಇದ್ದಲ್ಲಿ ಆಸ್ಪತ್ರೆಗೆ ದಾಖಲಾಗಲು ಸೂಚಿಸುತ್ತಾರೆ.

ಸಾವಿನ ಸಂಖ್ಯೆ ನಿಯಂತ್ರಿಸಬೇಕು

ಮನೆ ಆರೈಕೆಗೆ ಒಳಪಟ್ಟಿರುವವರಿಗೂ ನಿರಂತರವಾಗಿ ವೈದ್ಯರ ಸಲಹೆ ಅಗತ್ಯ. ಕೋವಿಡ್ ಸೋಂಕಿತರ ಆರೋಗ್ಯ ಕುರಿತು ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ 18 ದಿನಗಳ ಕಾಲ ನಿರಂತರ ಮಾಹಿತಿ ಪಡೆಯುವ ಮೂಲಕ ಹೆಚ್ಚುತ್ತಿರುವ ಸೋಂಕಿತರ ಸಾವುಗಳನ್ನು ನಿಯಂತ್ರಿಸಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಮಾರ್ಗಸೂಚಿಯಲ್ಲೇನಿದೆ?
  • ಮನೆ ಆರೈಕೆಗೆ ಒಳಗಾದ 2 ರಿಂದ 10ನೇ ದಿನಗಳವರೆಗೆ ವೈದ್ಯಕೀಯ ಅಧಿಕಾರಿಗಳು ಪ್ರತಿದಿನ ಸೋಂಕಿತರಿಗೆ ಕರೆ ಮಾಡಿ ಅವರ ಆರೋಗ್ಯದ ಕುರಿತು ವಿಚಾರಿಸಬೇಕು
  • 11ನೇ ದಿನದ ನಂತರ ಸೋಂಕಿತ ವ್ಯಕ್ತಿಯ ದೇಹದ ತಾಪಮಾನ, ನಾಡಿಮಿಡಿತ ಹಾಗೂ ರಕ್ತದಲ್ಲಿನ ಆಮ್ಲಜನಕದ ಪ್ರಮಾಣವನ್ನು ಪರೀಕ್ಷಿಸಬೇಕು
  • ರೋಗಿಯ ಆರೋಗ್ಯ ಸಹಜ ಸ್ಥಿತಿಯಲ್ಲಿದ್ದರೆ, ಕಳೆದ ಮೂರು ದಿನಗಳಿಂದ ಯಾವುದೇ ರೋಗ ಲಕ್ಷಣ ಇಲ್ಲದಿದ್ದರೆ ಮತ್ತೆ ಒಂದು ವಾರ ಮನೆಯಲ್ಲಿಯೇ ಪ್ರತ್ಯೇಕವಾಗಿರಿಸಬೇಕು
  • 18 ದಿನಕ್ಕೆ ಮತ್ತೊಮ್ಮೆ ಸೋಂಕಿತರ ಪರೀಕ್ಷೆ ನಡೆಸಿ ವರದಿ ನೀಡಬೇಕು. ಈ ವೇಳೆ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂಬುದು ದೃಢಪಟ್ಟರೆ ಈ ಮೊದಲಿನಂತೆ ತಮ್ಮ ಕಾರ್ಯಚಟುವಟಿಕೆಯಲ್ಲಿ ತೊಡಗಿಕೊಳ್ಳಬಹುದು
ಮನೆಯಲ್ಲಿ ಈ ಸೌಲಭ್ಯ ಇರಬೇಕು
  1. ಮನೆ ಆರೈಕೆಗೆ ಒಳಗಾಗುವ ಸೋಂಕಿತರಿಗೆ ಪ್ರತ್ಯೇಕ ಕೊಠಡಿ, ಶೌಚಗೃಹದ ವ್ಯವಸ್ಥೆ, ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆ ಇರಬೇಕು
  2. ಪಲ್ಸ್ ಆಕ್ಸಿಮೀಟರ್, ಡಿಜಿಟಲ್ ಥರ್ವಮೀಟರ್, ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್, ಝಿಂಕ್, ವಿಟಮಿನ್-ಸಿ ಮತ್ತು ಪ್ಯಾರಾಸಿಟಮಾಲ್ ಮಾತ್ರೆಗಳು ಹಾಗೂ ಪಾಲಿಸಬೇಕಾದ ನಿಯಮ ಒಳಗೊಂಡ ಕೈಪಿಡಿಯನ್ನು ಒದಗಿಸಬೇಕು
  3. ಸೋಂಕಿತ ಮನೆ ಆರೈಕೆಗೆ ಒಳಪಡಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದರೆ ಕೂಡಲೇ ಕೋವಿಡ್ ಕೇರ್ ಸೆಂಟರ್ ಅಥವಾ ಕೋವಿಡ್ ಆಸ್ಪತ್ರೆಗೆ ದಾಖಲಿಸಬೇಕು
ಮನೆಯ ಆಯ್ಕೆ ಏಕೆ?
  • ಸರ್ಕಾರಿ ಆಸ್ಪತ್ರೆ ಸೇರಲು ಹಿಂಜರಿಕೆ
  • ಖಾಸಗಿ ಚಿಕಿತ್ಸೆಗೆ ಹಣದ ಕೊರತೆ
  • ನೆರೆಹೊರೆಯವರ ಕಡೆಗಣನೆ ಆತಂಕ
ಕರೊನಾದಲ್ಲಿ 18ಕ್ಕೂ ಹೆಚ್ಚು ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಸಕಾಲದಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ಚಿಕಿತ್ಸೆ ಪಡೆದು ಗುಣಮುಖರಾಗಬಹುದು. ವೈದ್ಯರ ಸಲಹೆ ಇಲ್ಲದೆ ಚಿಕಿತ್ಸೆ ಪಡೆಯುವುದು ಸೂಕ್ತವಲ್ಲ. | ಡಾ. ವೆಂಕಟಸುಬ್ಬರಾವ್ ವಿಕ್ರಂ ಆಸ್ಪತ್ರೆ  ಬೆಂಗಳೂರು
ಮೊದಲ ದಿನದಿಂದಲೇ ನಿಗಾ

ಮೊದಲ ದಿನದಿಂದಲೇ ದೂರವಾಣಿ ಕರೆ ಮೂಲಕ ರೋಗಿಗೆ ಚಿಕಿತ್ಸಾ ವಿಧಾನ ನಿಗದಿ ಪಡಿಸಬೇಕು. ನಾಡಿಮಿಡಿತ, ರಕ್ತದಲ್ಲಿನ ಆಮ್ಲಜನಕ ಪ್ರಮಾಣ, ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಪಡೆದು, ಮೌಲ್ಯಮಾಪನ ಮಾಡಬೇಕು. ಮನೆಯಲ್ಲಿ ಪ್ರತ್ಯೇಕವಾಗಿರಲು ವ್ಯವಸ್ಥೆ ಇದೆಯೇ? ಪರೀಕ್ಷಾ ಸಾಮಗ್ರಿ ಹೊಂದಿ ದ್ದಾರೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಆರೋಗ್ಯದಲ್ಲಿ ವ್ಯತ್ಯಾಸವಾದರೆ ಹತ್ತಿರದ ಆಸ್ಪತ್ರೆಗೆ ದಾಖಲಾಗಲು ಸೂಚಿಸಬೇಕು.