ನ್ಯೂಸ್

ಸ್ವಾನುಭೂತಿಯೊಂದೇ ಸಾಲದು ಪರಾನುಭೂತಿಯೂ ಬೇಕು!

ಮೋಹನ್​ ಶೆಟ್ಟಿ
ಸಾಮಾನ್ಯವಾಗಿ ಗಂಡ ಹೆಂಡತಿ ಜೊತೆಯಾಗಿಯೇ ಸಾಯಲು ಆಗದು. ಭಿನ್ನ ಭಿನ್ನ ಕಾರಣಗಳಿಂದಾಗಿ, ಒಬ್ಬರು ಮೊದಲೇ ಅಸುನೀಗುತ್ತಾರೆ. ಉಳಿದವರು, ಬಾಳ ಸಂಗಾತಿ ಇಲ್ಲದೆ ತರತರದ ಕಷ್ಟಗಳನ್ನು ಅನುಭವಿಸುತ್ತಾರೆ. ಹೀಗೆ ಮಡದಿಯನ್ನು ಕಳಕೊಂಡು ಒಂಟಿಯಾದ ವೃದ್ಧರೊಬ್ಬರು ತನ್ನ ಮಗನ ಜೊತೆ ವಾಸವಾಗಿದ್ದರು. ಮಗನೇನೋ ಪಿತೃ ಸೇವೆಯನ್ನು ನಿರ್ವಂಚನೆಯಿಂದ ಮಾಡುತ್ತಿದ್ದ. ಆದರೆ ಸೊಸೆಗೆ ಮಾವನೆಂಬ ಭಕ್ತಿ ಭಾವದ ಬದಲು, ಈ ಮುದುಕನೊಂದು ಹೊರೆ, ಭಾರ, ದಂಡ ಪಿಂಡವೆಂಬ ಭಾವನೆ ಬಂದು ಹೋಗಿತ್ತು. ಈ ಭಾವನೆ ಆಕೆಯ ನಡೆನುಡಿಗಳಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು.

‘ಈ ಬೀದಿಯಲ್ಲಿರುವ ಮುದಿನಾಯಿಗಳಿಗೆಲ್ಲ ಸಾವು ಬಂತು. ಆದರೆ ನಮ್ಮ ಮನೆಯ ಮುದಿನಾಯಿಗೆ ಇನ್ನೂ ಬರಲಿಲ್ಲ. ಯಾವ ಪುರುಷಾರ್ಥಕ್ಕಾಗಿ ಇನ್ನೂ ಬದುಕಿ ಉಳಿದಿದೆಯೋ’ ಎಂಬ ಮಾತುಗಳಿಂದ ಮಾವನನ್ನು ತಿವಿಯುತ್ತಿದ್ದಳು. ಮಗ ಮಾತ್ರ ಅಪ್ಪನ ಮಲ ಮೂತ್ರವನ್ನು ಸ್ವಚ್ಛಗೊಳಿಸುವುದರಿಂದ ಹಿಡಿದು, ಸ್ನಾನವನ್ನೂ ಮಾಡಿಸಿ, ಬಟ್ಟೆ ಬರೆ ಹಾಕಿ ಟಿವಿಯ ಮುಂದೆ ಕುಳ್ಳಿರಿಸುತ್ತಿದ್ದ. ಮುದುಕನಿಗೋ ವಯಸ್ಸಾಗಿದ್ದರೂ ಬಾಯಿ ರುಚಿ ಮಾತ್ರ ಕಡಿಮೆಯಾಗಿರಲಿಲ್ಲ. ಆಗಾಗ ಏನನ್ನಾದರೂ ತಿನ್ನಬೇಕೆನ್ನುವ ಆಸೆ. ಆದರೆ ಇದಕ್ಕೆ ಅವಕಾಶವಿರಲಿಲ್ಲ. ಸೊಸೆ ಊಟ ಕೊಟ್ಟಾಗ ತಿನ್ನಬೇಕು ಹಾಗೂ ಕೊಟ್ಟದ್ದನ್ನೇ ತಿನ್ನಬೇಕು. ಅದೂ ಕೈಗಳು ನಡುಗುತ್ತಿದ್ದರೂ, ಆಕಡೆ ಈ ಕಡೆ ಚೆಲ್ಲದೆ ತಿನ್ನಬೇಕು. ಆದರೂ ಊಟ, ಮೈ ಮೇಲಿನ ಬಟ್ಟೆಯ ಮೇಲೆ ಬಿದ್ದು ಹೋಗುತ್ತಿತ್ತು. ಆಗ ಸೊಸೆಯ ಬಾಯಿಯಿಂದ ಸಹಸ್ರನಾಮವನ್ನೇ ಕೇಳಬೇಕಾಗುತ್ತಿತ್ತು. ಒಟ್ಟಿನಲ್ಲಿ ಮುದುಕನಿಗೆ ಆಯುಷ್ಯ ಮುಗಿದಿರಲಿಲ್ಲ. ಸಾಯುವವರೆಗೆ ಬದುಕಿರಲೇ ಬೇಕಾದ ಅನಿವಾರ್ಯತೆ ಇತ್ತು.

ಒಮ್ಮೆ ಇವರ ಹತ್ತಿರದ ಸಂಬಂಧಿಕರ ಮನೆಯ ಕಾರ್ಯಕ್ರಮಕ್ಕೆ ಆಮಂತ್ರಣವೊಂದು ಬಂತು. ಮುದುಕನಿಗೋ ಅಲ್ಲಿಗೆ ಹೋಗಬೇಕು. ಎಲ್ಲರನ್ನೂ ಮಾತನಾಡಿಸಬೇಕೆನ್ನುವ ಆಸೆ. ಅಂತೆಯೇ ಹೋಗಲು ರೆಡಿಯಾಗಿ ಕೂತಿದ್ದರು. ಸೊಸೆ ಇವರನ್ನು ಅಲ್ಲಿಗೆ ಕರಕೊಂಡು ಹೋಗೋದು ಬೇಡ. ಅಲ್ಲಿ ಇವರನ್ನು ನೋಡಿಕೊಳ್ಳೋದೇ ತಮಗೊಂದು ಕೆಲಸವಾಗಿಬಿಡುತ್ತದೆ. ಸರಿಯಾಗಿ ಊಟ ಮಾಡೋಕೂ ಬರೋಲ್ಲ! ಮೈಯೆಲ್ಲಾ ಗಲೀಜು ಮಾಡಿಕೊಳ್ಳುತ್ತಾರೆ ಎಂದು ಪರಿಪರಿಯಾಗಿ ಹೇಳಿದರೂ ಒಪ್ಪದ ಗಂಡ, ತನ್ನ ಅಪ್ಪನನ್ನ ಕರಕೊಂಡೇ ಹೋದ. ಮದುವೆ ಮನೆಯಲ್ಲಿ ಎಲ್ಲರಿಗೂ ಪರಿಚಯ ಮಾಡಿಸಿ, ಊಟದ ಮನೆಗೂ ಕರಕೊಂಡು ಹೋದ. ಅಲ್ಲಿ ಎಂದಿನಂತೆ, ನಡುಗುವ ಕೈಗಳಿಂದ ಊಟ ಮಾಡಲು ಸಾಧ್ಯವಾಗದೆ, ಈ ಮುದುಕ ಆಹಾರವನ್ನು ಎಲ್ಲಾ ಕಡೆ ಚೆಲ್ಲಿಕೊಂಡ. ಉಟ್ಟ ಬಟ್ಟೆಯನ್ನು ಗಲೀಜುಮಾಡಿಕೊಂಡ.

ಪಕ್ಕದಲ್ಲಿ ಕುಳಿತವರೆಲ್ಲಾ ಇವನನ್ನು ಅಸಹ್ಯದಿಂದ ನೋಡಲಾರಂಭಿಸಿದರು. ಇಷ್ಟಾದರೂ ಗಡಿಬಿಡಿ ಮಾಡಿಕೊಳ್ಳದ ಮಗ, ಶಾಂತಚಿತ್ತದಿಂದ, ಅಪ್ಪನಿಗೆ ತಿನ್ನಿಸಿ, ವಾಶ್​ರೂಂಗೆ ಕರಕೊಂಡು ಹೋಗಿ ಅವರನ್ನೂ ಅವರ ಬಟ್ಟೆಯನ್ನು ಸ್ವಚ್ಛಗೊಳಿಸಿ ಹೊರಗೆ ಕರೆತಂದ. ಇದನ್ನು ಗಮನಿಸಿದ ವೃದ್ಧರೊಬ್ಬರು ಇವನನ್ನು ಕೇಳಿದರು: ‘ಇಲ್ಲಿ ಏನಾದರೂ ಬಿಟ್ಟು ಹೋಗಿದ್ದೀಯಾ?’. ‘ಇಲವಲ್ಲ’ ಎನ್ನಲು, ಅವರು ಹೇಳಿದರು: ಮಕ್ಕಳಿಗೆ ಸಂಸ್ಕಾರದ ಒಂದು ಸುಂದರ ಪಾಠವನ್ನು ಹಾಗೂ ವೃದ್ಧ ಮಾತಾಪಿತರಿಗೆ, ಭರವಸೆಯೇ ಆಶಾಕಿರಣ ವನ್ನು ಬಿಟ್ಟು ಹೋಗಿದ್ದೀಯಾ. ನಿನಗೆ ಒಳ್ಳೆಯದಾಗಲಿ ಮಗೂ’.

ಸಂದೇಶವಿಷ್ಟೆ: ಓಡಾಡಲು ಅಶಕ್ತರಾದ ಹಾಗೂ ಇತರರ ಸಹಾಯವಿಲ್ಲದೆ, ಉಣ್ಣಲು, ಕುಡಿಯಲು ಸಾಧ್ಯವಾಗದ ವೃದ್ಧ ಹೆತ್ತವರನ್ನು ಮಕ್ಕಳು ಹೊರಗಡೆ ಯಾವ ಕಾರ್ಯಕ್ರಮಕ್ಕೂ ಕರಕೊಂಡು ಹೋಗುವುದಿಲ್ಲ. ಮನೆಯಲ್ಲೇ ಬಿಟ್ಟುಹೋಗುತ್ತಾರೆ. ‘ನಿಮ್ಮಂಥವರು ಅಲ್ಲಿ ಬಂದು ಮಾಡೋದಾದರೂ ಏನಿದೆ? ಇಲ್ಲೇ ಸಾರು ಅನ್ನ ಇದೆ. ತಿಂದ್ಕೊಂಡು ಬಿದ್ಕೊಂಡಿರಿ’ ಎನ್ನುತ್ತಿರುತ್ತಾರೆ ಹೆಚ್ಚಿನ ಮಕ್ಕಳು. ನೊಂದುಕೊಂಡ ವೃದ್ಧರು ಮರು ಮಾತನಾಡಲು ಸಾಧ್ಯವಾಗದೇ, ಒಳಗೊಳಗೇ ತಮ್ಮ ಅಸಹಾಯಕ ಪರಿಸ್ಥಿತಿಯನ್ನು ನೆನೆದುಕೊಂಡು ಮರುಗುತ್ತಿರುತ್ತಾರೆ. ಇದು ತರವಲ್ಲ. ನಾವು ಚಿಕ್ಕವರಿದ್ದಾಗ, ನಮ್ಮನ್ನು ಅವರ ಹೆಗಲ ಮೇಲೆ ಹೊತ್ತುಕೊಂಡು ಹೋಗಿಲ್ಲವೇ ನಮ್ಮ ಹೆತ್ತವರು?

ನಮ್ಮ ಮಲಮೂತ್ರವನ್ನು ತೆಗೆದು ನಮ್ಮನ್ನು ಸ್ವಚ್ಛಗೊಳಿಸಲಿಲ್ಲವೇ?ಇಂತಹ ಹೆತ್ತವರು, ಅವರ ವೃದ್ಧಾಪ್ಯದಲ್ಲಿ ಹೊರೆ ಭಾರವೆಂದರೆ ಹೇಗೆ? ಅವರ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಲ್ಲವೆಂದರೆ ಹೇಗೆ? ಅವರ ಮಾತುಗಳನ್ನು ಕೇಳಿಸಿಕೊಂಡಿಲ್ಲವೆಂದರೆ ಹೇಗೆ? ನೆನಪಿರಲಿ, ನಮಗೂ ವಯಸ್ಸಾಗುತ್ತಿರುತ್ತದೆ. ನಾವೂ ಒಂದು ದಿನ ತರತರದ ವ್ಯಾಧಿಗಳೊಂದಿಗೆ ಮುದುಕರಾಗುತ್ತೇವೆ. ನಮ್ಮ ಮಕ್ಕಳೂ ನಮಗೂ ಹೀಗೆಯೇ ಮಾಡಿದರೆ ಏನು ಮಾಡೋಣ? ಮುದುಕರಿಗೆ ಬೇಕಾದುದು ಒಂದೊಳ್ಳೆ ಮಾತು, ಸಹಾಯ ಹಾಗೂ ಅವರು ಹೇಳುವ ಹಳೇ ಕತೆಗಳನ್ನೆಲ್ಲಾ ಕೇಳಿಸಿಕೊಳ್ಳುವ ಕಿವಿಗಳು. ಬರೇ ಊಟ ತಿಂಡಿಯಷ್ಟೇ ಅಲ್ಲ. ಒಂದಿಷ್ಟು ಪ್ರೀತಿ ಕಾಳಜಿಯನ್ನು ಬಯಸುತ್ತವೆ ಈ ಮುದಿ ಜೀವಗಳು. ಇಷ್ಟನ್ನಾದರೂ ಕೊಡಲು ನಮಗೇನು ಕಷ್ಟ? ನಮಗೇನು ನಷ್ಟ?