ನ್ಯೂಸ್

ಸೀಮಾ ಹೈದರ್​​ಗೆ ಬಾಲಿವುಡ್ ನಿರ್ಮಾಪಕರಿಂದ ಬಂತು ಬಂಪರ್ ಆಫರ್!

ಉತ್ತರಪ್ರದೇಶ: ಪಾಕಿಸ್ತಾನಿ ಮಹಿಳೆ ಸೀಮಾ ಹೈದರ್ ಮತ್ತು ಉತ್ತರ ಪ್ರದೇಶದ ಸಚಿನ್ ಮೀನಾ ಅವರ ಪ್ರೇಮಕಥೆಯು ಕಳೆದ ಎರಡು ತಿಂಗಳುಗಳಿಂದ ಭಾರೀ ಸುದ್ದಿ ಮಾಡುತ್ತಿದೆ. ಸೀಮಾ ಹೈದರ್ ಗೂಢಚಾರಿಣಿ ಎಂಬ ಆರೋಪ ಇರುವುದರಿಂದ ಯುಪಿ ಎಟಿಎಸ್ ತನಿಖೆ ನಡೆಸುತ್ತಿದೆ. ಇದೀಗ ಪಾಕಿಸ್ತಾನಿ ಮಹಿಳೆಗೆ ಬಾಲಿವುಡ್ ನಿರ್ಮಾಪಕರಿಂದ ಸಿನಿಮಾ ಆಫರ್ ಬಂದಿದೆ.

ಹೌದು, ಪ್ರಮುಖ ಚಲನಚಿತ್ರ ನಿರ್ಮಾಪಕರೊಬ್ಬರು ತಮ್ಮ ಚಿತ್ರದಲ್ಲಿ ಸೀಮಾ ಹೈದರ್‌ಗೆ ಪಾತ್ರ ನೀಡಿದ್ದಾರೆ. ಮುಂಬೈನಲ್ಲಿ ನಿರ್ಮಾಣ ಸಂಸ್ಥೆಯನ್ನು ನಡೆಸುತ್ತಿರುವ ಮೀರತ್‌ನ ಅಮಿತ್ ಜಾನಿ, ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದಾರೆ.

ಸದ್ಯ ಅಮಿತ್ ಜಾನಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೀಮಾ ಹೈದರ್ ಮತ್ತು ಸಚಿನ್ ಅವರ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ನಾನು ಆಫರ್ ನೀಡಿದ್ದೇನೆ. ಸೀಮಾ ಹೈದರ್ ಅಕ್ರಮವಾಗಿ ಭಾರತ ಪ್ರವೇಶಿಸಿದ ರೀತಿಯನ್ನು ನಾನು ಬೆಂಬಲಿಸುವುದಿಲ್ಲ. ಆದರೆ ದಂಪತಿಗಳ ಆರ್ಥಿಕ ಸ್ಥಿತಿಯ ಬಗ್ಗೆ ನನಗೆ ತಿಳಿದಿದೆ. ಹೀಗಾಗಿ ಮುಂಬರುವ ಯಾವುದೇ ಚಲನಚಿತ್ರಗಳಲ್ಲಿ ಪಾಕಿಸ್ತಾನಿ ಮಹಿಳೆಗೆ ಪಾತ್ರವನ್ನು ನೀಡುವುದಾಗಿ ಅಮಿತ್ ಜಾನಿ ವೈರಲ್ ವೀಡಿಯೊದಲ್ಲಿ ಹೇಳಿದ್ದಾರೆ.

ತೀಕ್ಷ್ಣ ಹೇಳಿಕೆಗಳಿಗೆ ಹೆಸರಾಗಿರುವ ಅಮಿತ್ ಜಾನಿ ಇತ್ತೀಚೆಗೆ ತಮ್ಮ ಚಿತ್ರದ ಟೀಸರ್ ಅನ್ನು ಬಿಡುಗಡೆ ಮಾಡಿದ್ದಾರೆ. ಸದ್ಯದಲ್ಲಿಯೇ ನೂಪುರ್ ಶರ್ಮಾ ಪ್ರತಿಭಟನೆಯ ವೇಳೆ ಹತ್ಯೆಯಾದ ಕನ್ಹಯ್ಯಾ ಲಾಲ್ ಸಾಹು ಅವರ ಹತ್ಯೆಯನ್ನು ಆಧರಿಸಿದ ಚಿತ್ರವನ್ನು ಅಮಿತ್ ಜಾನಿ ಬಿಡುಗಡೆ ಮಾಡಲಿದ್ದಾರೆ.

ಈ ಹಿಂದೆ, ಸೀಮಾ ಹೈದರ್ ಮತ್ತು ಸಚಿನ್ ಅವರಿಬ್ಬರ ವಿರುದ್ಧ ನಡೆಯುತ್ತಿರುವ ತನಿಖೆಯಿಂದಾಗಿ, ಅವರಿಗೆ ಯಾವುದೇ ಕೆಲಸ ಸಿಗುತ್ತಿಲ್ಲ, ಇದರಿಂದಾಗಿ ಅವರ ಕುಟುಂಬಕ್ಕೆ ತೀವ್ರ ಆರ್ಥಿಕ ಒತ್ತಡ ಉಂಟಾಗಿದೆ ಎಂದು ವರದಿಯಾಗಿತ್ತು. ದಂಪತಿಗಳ ಪರಿಸ್ಥಿತಿಯನ್ನು ನೋಡಿದ ನಂತರ ಇದೀಗ ಮುಂಬೈ ನಿರ್ಮಾಪಕ ಅಮಿತ್ ಜಾನಿ ಅವರು ತಮ್ಮ ಚಲನಚಿತ್ರದಲ್ಲಿ ಸೀಮಾ ಹೈದರ್ ಅವರಿಗೆ ಒಂದು ಪಾತ್ರವನ್ನು ನೀಡಲು ಮುಂದಾಗಿದ್ದಾರೆ. ಅವರ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.

ಸೀಮಾ ಹೈದರ್ ಸಚಿನ್ ಮೀನಾ ಮತ್ತು ಆತನ ಕುಟುಂಬದ ಸಹಾಯದಿಂದ ನಕಲಿ ದಾಖಲೆಗಳನ್ನು ತೋರಿಸಿ ನೇಪಾಳದಿಂದ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಳು.