Encounter :ಜಾರ್ಖಂಡ್ನ ಗುಮ್ಲಾ ಜಿಲ್ಲೆಯ ಗಾಘ್ರಾ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ (ಜು.26) ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಖಚಿತ ಮಾಹಿತಿಯ ಆಧಾರದ ಮೇಲೆ ಪೊಲೀಸರು ಕೂಂಬಿಂಗ್ ಕಾರ್ಯಾಚರಣೆ ನಡೆಸುವಾಗ ಎನ್‌ಕೌಂಟರ್ ನಡೆದಿದೆ. ಪೊಲೀಸರನ್ನು ಕಂಡ ತಕ್ಷಣ ನಕ್ಸಲರು ಫೈರಿಂಗ್ ಮಾಡಿದ್ದು, ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿವೆ. ಈ ವೇಳೆ ಭದ್ರತಾ ಪಡೆಗಳ ಗುಂಡೇಟಿಗೆ ಮೂವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತಪಟ್ಟ ನಕ್ಸಲರೆಲ್ಲಾ ಸಿಪಿಐ ಮಾವೋವಾದಿ ಸಂಘಟನೆಯಿಂದ ಬೇರ್ಪಟ್ಟ ಜಾರ್ಖಂಡ್ ಜನ ಮುಕ್ತಿ ಪರಿಷತ್ಗೆ(ಜೆಜೆಎಂಪಿ) ಸೇರಿದವರು ಎಂದು ಜಾರ್ಖಂಡ್ ಪೊಲೀಸ್ ಐಜಿ ಮೈಕೆಲ್ ಎಸ್. ರಾಜ್ ಹೇಳಿದ್ದಾರೆ.
ಎನ್‌ಕೌಂಟರ್ ನಂತರ, ಸ್ಥಳದಿಂದ ಒಂದು ಎಕೆ -47 ಮತ್ತು 2 ಐಎನ್‌ಎಸ್‌ಎಎಸ್ ರೈಫಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಇಡೀ ಪ್ರದೇಶವನ್ನು ಸುತ್ತುವರೆದು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)