ನ್ಯೂಸ್

ಭದ್ರತಾ ವೈಫಲ್ಯ; ಬೆಂಗಳೂರು-ವಾರಣಾಸಿ ಏರ್‌ ಇಂಡಿಯಾ ವಿಮಾನದಲ್ಲಿ ಕಾಕ್‌ಪಿಟ್ ಬಾಗಿಲು ತೆರೆಯಲು ಯತ್ನ| Air india

Air india; ಪ್ರಯಾಣಿಕರೊಬ್ಬರು ಕಾಕ್‌ಪಿಟ್ ಬಾಗಿಲನ್ನು ಗಾಳಿಯಲ್ಲಿ ಬಲವಂತವಾಗಿ ತೆರೆಯಲು ಯತ್ನಿಸಿದ ಘಟನೆ ಇಂದು (ಸೆ.22) ಬೆಂಗಳೂರಿನಿಂದ ವಾರಣಾಸಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX-1086 ರಲ್ಲಿ ನಡೆದಿದೆ.

ಪ್ರಯಾಣಿಕ ಕಾಕ್‌ಪಿಟ್ ಪ್ರದೇಶವನ್ನು ಪ್ರವೇಶಿಸಿದ್ದಲ್ಲದೆ, ಸರಿಯಾದ ಪಾಸ್‌ಕೋಡ್ ಅನ್ನು ಸಹ ನಮೂದಿಸಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಕ್ಯಾಪ್ಟನ್ ವಿಮಾನ ಹೈಜಾಕ್‌ ಭಯದಿಂದ ಬಾಗಿಲು ತೆರೆಯಲು ನಿರಾಕರಿಸಿದ್ದಾನೆ. ಆ ಪ್ರಯಾಣಿಕನು ತನ್ನ ಇತರ 8 ಜನ ಸಹ ಪ್ರಯಾಣಿಕರೊಂದಿಗೆ ಪ್ರಯಾಣಿಸುತ್ತಿದ್ದ ಎನ್ನಲಾಗಿದೆ. ವಿಮಾನ ವಾರಣಾಸಿ ತಲುಪುತ್ತಿದ್ದಂತೆ ಎಲ್ಲಾ ಒಂಬತ್ತು ಪ್ರಯಾಣಿಕರನ್ನು ಹೆಚ್ಚಿನ ತನಿಖೆಗಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಗೆ ಹಸ್ತಾಂತರಿಸಲಾಗಿದೆ. ಸಿಐಎಸ್‌ಎಫ್ ಸಿಬ್ಬಂದಿ ಆ ವ್ಯಕ್ತಿ ಮತ್ತು ಇತರ ಏಳು ಜನರನ್ನು ವಶಕ್ಕೆ ಪಡೆದು ಘಟನೆ ಬಗ್ಗೆ ಸುಧೀರ್ಘ ವಿಚಾರಣೆ ನಡೆಸುತ್ತಿದ್ದಾರೆ. ವಿಮಾನದುದ್ದಕ್ಕೂ ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳನ್ನು ಸಂಪೂರ್ಣವಾಗಿ ನಿರ್ವಹಿಸಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ದೃಢಪಡಿಸಿದೆ.

ಏರ್ ಇಂಡಿಯಾ ಹೇಳಿದ್ದೇನು.?

(ಏಜೆನ್ಸೀಸ್)

ವಾರಣಾಸಿಗೆ ಹೋಗುವ ನಮ್ಮ ವಿಮಾನವೊಂದರಲ್ಲಿ ಪ್ರಯಾಣಿಕರೊಬ್ಬರು ಶೌಚಾಲಯವನ್ನು ಹುಡುಕುತ್ತಿರುವಾಗ ಕಾಕ್‌ಪಿಟ್ ಪ್ರವೇಶ ಪ್ರದೇಶವನ್ನು ಸಮೀಪಿಸಿದ ಘಟನೆಯ ಕುರಿತು ಮಾಧ್ಯಮ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಬಲವಾದ ಸುರಕ್ಷತೆ ಮತ್ತು ಭದ್ರತಾ ಪ್ರೋಟೋಕಾಲ್‌ಗಳು ಜಾರಿಯಲ್ಲಿವೆ. ಹಾಗಾಗಿ ಇದರಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ನಾವು ಪುನರುಚ್ಚರಿಸುತ್ತೇವೆ. ಈ ವಿಷಯವನ್ನು ಲ್ಯಾಂಡಿಂಗ್ ಸಮಯದಲ್ಲಿ ಸಂಬಂಧಿತ ಅಧಿಕಾರಿಗಳಿಗೆ ವರದಿ ಮಾಡಲಾಗಿದೆ ಮತ್ತು ಪ್ರಸ್ತುತ ಈ ಘಟನೆ ತನಿಖೆಯಲ್ಲಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ.