ತೆಲಂಗಾಣ: ಇಲ್ಲಿನ ಏಕೈಕ ಬಿಜೆಪಿ ಶಾಸಕ ರಾಜಾ ಸಿಂಗ್ ಅವರಿಗೆ ಪೊಲೀಸರು ಪತ್ರವೊಂದನ್ನು ಕಳಿಸಿದ್ದು, ದಯವಿಟ್ಟು ಮೋಟರ್ ಬೈಕ್ ಮೇಲೆ ಒಬ್ಬೊಬ್ಬರೇ ಓಡಾಡಬೇಡಿ ಎಂದು ಹೇಳಿದ್ದಾರೆ.
ರಾಜಾ ಸಿಂಗ್ ಅವರಿಗೆ ಅಪಾಯ ಉಂಟಾಗಬಹುದು ಎಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹಾಗಾಗಿ ಬೈಕ್ನಲ್ಲಿ ಸಂಚರಿಸಬೇಡಿ ಎಂದು ತಿಳಿಸಿದ್ದಾಗಿ ಹೈದರಾಬಾದ್ ಪೊಲೀಸರು ಹೇಳಿದ್ದಾರೆ.
ರಾಜಾ ಸಿಂಗ್ ಅವರು ಹೆಚ್ಚಾಗಿ ತಮ್ಮ ಮತ ಕ್ಷೇತ್ರದ ಸಂಚಾರಕ್ಕೆ ಬೈಕ್ ಬಳಸುತ್ತಾರೆ. ಈಗ ಅವರಿಗೆ ಬೆದರಿಕೆ ಇದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ಮನವಿ ಮಾಡಲಾಗಿದೆ. ಸರ್ಕಾರ ನೀಡುವ ಬುಲೆಟ್ ಪ್ರೂಫ್ ವಾಹನದಲ್ಲಿಯೇ ಸಂಚರಿಸಲು ಹೇಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೋಮಾದಲ್ಲಿಯೇ ಇದ್ದಾರೆ ಪ್ರಣಬ್ ಮುಖರ್ಜಿ; ಶ್ವಾಸಕೋಶದ ಸೋಂಕಿಗೆ ಚಿಕಿತ್ಸೆ
ಆದರೆ ಎಂಎಲ್ಎ ಇದಕ್ಕೆ ಕ್ಯಾತೆ ತೆಗೆದಿದ್ದಾರೆ. ನನಗೇನು ಅಪಾಯವಿದೆ ಎಂಬುದನ್ನು ತಿಳಿಸಿ. ಕೆಲವು ಕಡೆಗಳಲ್ಲಿ ದೊಡ್ಡ ವಾಹನಗಳ ಪ್ರವೇಶ ಸಾಧ್ಯವಿಲ್ಲ. ಅಲ್ಲೆಲ್ಲ ಚಿಕ್ಕ ಬೈಕ್ನಲ್ಲಿಯೇ ಸಂಚಾರ ಮಾಡಬೇಕಾಗುತ್ತದೆ. ಕಿರಿದಾದ ಕಾಲು ದಾರಿಯಲ್ಲಿ ಬೈಕ್ನಲ್ಲಿ ಹೋಗುವುದು ಅನಿವಾರ್ಯ ಎಂದು ತಮ್ಮ ಕೆಲಸವನ್ನು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ನಾನು ನನ್ನ ಕ್ಷೇತ್ರದ ಜನರನ್ನು ಮಾತನಾಡಿಸದೆ ಇರಲು ಸಾಧ್ಯವಿಲ್ಲ..ಅವರಿಂದ ದೂರ ಉಳಿಯಲಾಗದು. ನನ್ನ ಶೆಡ್ಯೂಲ್ಗಳಲ್ಲ ಯಾವುದೇ ಬದಲಾವಣೆ ಇಲ್ಲ ಎಂದೂ ಹೇಳಿದ್ದಾರೆ.
ಭದ್ರತೆ ದೃಷ್ಟಿಯಿಂದ ಪೊಲೀಸರು ಆಗಸ್ಟ್ 28ರಂದು ಈ ಪತ್ರವನ್ನು ರಾಜಾ ಸಿಂಗ್ ಅವರಿಗೆ ತಲುಪಿಸಿದ್ದಾರೆ. (ಏಜೆನ್ಸೀಸ್)