ನ್ಯೂಸ್

ನಾಳೆ ದ್ವಿತೀಯ ಪಿಯು ಪರೀಕ್ಷೆ

malli

ಬೆಂಗಳೂರು: ಲಾಕ್​ಡೌನ್​ನಿಂದಾಗಿ ಮುಂದೂಡಲಾಗಿದ್ದ ಬಹುನಿರೀಕ್ಷಿತ ದ್ವಿತೀಯ ಪಿಯು ಆಂಗ್ಲ ಭಾಷಾ ಪರೀಕ್ಷೆ ಗುರುವಾರ (ಜೂ.18) ರಾಜ್ಯಾದ್ಯಂತ 1016 ಪರೀಕ್ಷಾ ಕೇಂದ್ರದಲ್ಲಿ ನಡೆಯಲಿದೆ. ಬೆಳಗ್ಗೆ 10.15ರಿಂದ 1.30ರವರೆಗೆ ಪರೀಕ್ಷೆ ನಡೆಯಲಿದ್ದು, 5.95 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ. ಈ ಪರೀಕ್ಷೆಯು ಮಾರ್ಚ್ 23ರಂದೇ ನಡೆಯಬೇಕಾಗಿತ್ತು. ವಿದ್ಯಾರ್ಥಿಗಳು ಆರೋಗ್ಯ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೊಳಪಟ್ಟು ಆನಂತರ ಪರೀಕ್ಷಾ ಕೇಂದ್ರ ಪ್ರವೇಶಿಸಬೇಕಿದೆ.

ಈಗಾಗಲೇ 18,524 ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ತಾಂತ್ರಿಕ ಕಾರಣಗಳಿಂದ ಕೇಂದ್ರ ಬದಲಾವಣೆಯಾಗದಿದ್ದ ಪಕ್ಷದಲ್ಲಿ ಅಥವಾ ಇತರ ಕಾರಣಗಳಿಂದ ಹೋಗಲು ಸಾಧ್ಯವಾಗದಿದ್ದರೆ, ಅಂತಹ ವಿದ್ಯಾರ್ಥಿಗಳು ಮೂಲ ಕೇಂದ್ರಗಳಿಗೆ ಹೋಗಿ ಪರೀಕ್ಷೆ ಬರೆಯಬಹುದಾಗಿದೆ. ಕರೊನಾ ಹಿನ್ನೆಲೆಯಲ್ಲಿ ಪರೀಕ್ಷೆಗೆ ಗೈರು ಹಾಜರಾದರೆ ಅಂತಹ ವಿದ್ಯಾರ್ಥಿಗಳಿಗೆ ಮುಂದೆ ನಡೆಯಲಿರುವ ಪೂರಕ ಪರೀಕ್ಷೆಯಲ್ಲಿ ಅವಕಾಶ ನೀಡಿ ‘ರೆಗ್ಯೂಲರ್ ವಿದ್ಯಾರ್ಥಿ’ ಎಂದು ಪರಿಗಣಿಸಲಿದೆ.

ಕೆಮ್ಮು-ನಗಡಿ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರದ ವ್ಯವಸ್ಥೆ ಮಾಡಲಾಗಿದ್ದು, ಇಲ್ಲಿ ಪರೀಕ್ಷೆ ಬರೆಯಬಹುದಾಗಿದೆ. 1,889 ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಕರ್ನಾಟಕಕ್ಕೆ ಬಂದು ಪರೀಕ್ಷೆ ಬರೆಯಲಿದ್ದು, ಗಡಿ ಭಾಗದ ಜಿಲ್ಲೆಗಳಲ್ಲಿ ಪರೀಕ್ಷೆಗೆ ಹಾಜರಾಗಲು ಅವಕಾಶ ಮಾಡಿಕೊಡಲಾಗಿದೆ. ಪ್ರವೇಶ ಪತ್ರ ತೋರಿಸಿ ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸಬಹುದು.