ನ್ಯೂಸ್

ಬೆಂಗಳೂರಿನಲ್ಲಿ ಚೀನಾ HMPV ವೈರಸ್: ಎರಡನೇ ಪ್ರಕರಣ ದಾಖಲು

HMPV : ಇಡೀ ಜಗತ್ತನ್ನೇ ಗಢಗಢ ನಡುಗಿಸಿದ ಮಹಾಮಾರಿ ಕರೊನಾ ವೈರಸ್​ ತವರು ಚೀನಾ ಎಂಬುದು ಎಲ್ಲರಿಗೂ ತಿಳಿದಿದೆ. ಇದೇ ಚೀನಾದಿಂದ ಇದೀಗ ಮತ್ತೊಂದು ವೈರಸ್​ ಹರಡುತ್ತಿದೆ. ಅದೇ ಎಚ್​ಎಂಪಿವಿ ( ಹ್ಯೂಮನ್ ಮೆಟಾಪ್ನ್ಯೂಮೋವೈರಸ್ ) ವೈರಸ್. ಇದೀಗ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪತ್ತೆಯಾಗಿರುವುದಾಗಿ ವರದಿಯಾಗಿದೆ.

ಬೆಂಗಳೂರಿನಲ್ಲಿ ಈ ವೈರಸ್​(ಎರಡು ಪ್ರಕರಣ) ಪತ್ತೆಯಾಗಿರುವುದು ಭಾರಿ ಆತಂಕಕ್ಕೆ ದಾರಿ ಮಾಡಿಕೊಟ್ಟಿದೆ.  8 ತಿಂಗಳ ಮಗುವಿನಲ್ಲಿ HMPV ವೈರಸ್​ ಪತ್ತೆಯಾಗಿದೆ. ಜ್ವರ ಹಿನ್ನೆಲೆಯಲ್ಲಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತ ಪರೀಕ್ಷೆ ಮಾಡಿಸಿದಾಗ HMPV ವೈರಸ್​ ಇರುವುದು ಪತ್ತೆಯಾಗಿದೆ. ಆದರೆ, ಈ ವೈರಸ್​ ಬಗ್ಗೆ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಇಲಾಖೆಗೆ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ತಿಳಿಸಿದ್ದಾರೆ.

ಇನ್ನು ಇದೇ ಆಸ್ಪತ್ರೆಯಲ್ಲಿ ಮೂರು ತಿಂಗಳ ಮಗುವಿಗೆ ಕೂಡ ಸೋಂಕು ತಗುಲಿದೆ ಎಂದು ಧೃಢಪಟ್ಟಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಮಗುವಿನ ವರದಿಯನ್ನು ಖಾಸಗಿ ಲ್ಯಾಬ್​ ಧೃಢಪಡಿಸಿದೆ ಎಂದು ಮೂಲಗಳು ತಿಳಿಸಿವೆ.  ಮಗುವಿನ ಮತ್ತು ಕುಟುಂಬದ ಟ್ರಾವೆಲ್​ ಇತಿಹಾಸ ಇಲ್ಲ ಎಂದು ಹೇಳಿದ್ದಾರೆ.

ಈ ವೈರಸ್ ಎಲ್ಲ ವಯಸ್ಸಿನ ವ್ಯಕ್ತಿಗಳಲ್ಲಿ ಉಸಿರಾಟದ ಸಮಸ್ಯೆಗಳನ್ನು ಉಂಟುಮಾಡಬಹುದು. ಆದರೂ ಚಿಕ್ಕ ಮಕ್ಕಳು, ಹಿರಿಯರು ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವವರ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ಈ ವೈರಸ್​ನ ಲಕ್ಷಣಗಳು ಯಾವುವೆಂದರೆ, ಕೆಮ್ಮು, ಜ್ವರ, ಮೂಗು ಕಟ್ಟುವುದು ಮತ್ತು ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಲಕ್ಷಣಗಳಿವೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ವೈರಸ್​ ಬಗ್ಗೆ ಹೆಚ್ಚು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ.

HMPV ವೈರಸ್​ ಚೀನಾದಲ್ಲಿ ಪತ್ತೆಯಾಗಿದೆ ಎಂಬ ಸುದ್ದಿ ಹೊರ ಬೀಳುತ್ತಿದ್ದಂತೆ ವಿಶ್ವದ ಎಲ್ಲ ರಾಷ್ಟ್ರಗಳು ಅಲರ್ಟ್​ ಆಗಿವೆ. ಭಾರತ ಕೂಡ ವೈರಸ್​ ಬಗ್ಗೆ ಎಚ್ಚರಿಕೆಯನ್ನು ವಹಿಸಿದೆ.(ಏಜೆನ್ಸೀಸ್​).