ಶೈಕ್ಷಣಿಕವಾಗಿ ಮುಂದುವರಿದ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ. ಇದರ ಫಲವಾಗಿಯೇ ವೈಜ್ಞಾನಿಕ ಸಂಸ್ಥೆಗಳು, ಸಂಶೋಧನಾಲಯಗಳು, ಉತ್ಪಾದನಾ ಘಟಕಗಳು, ಸಾರ್ವಜನಿಕ ಉದ್ಯಮಗಳು ಇಲ್ಲಿ ವಿಪುಲವಾಗಿವೆ. ಬೆಂಗಳೂರಿನಲ್ಲಿ ಸ್ಥಾಪನೆಯಾದ ಭಾರತೀಯ ವಿಜ್ಞಾನ ಸಂಸ್ಥೆಯೊಂದರಿಂದಾಗಿಯೇ ಎಚ್ಎಲ್, ಇಸ್ರೋ ಸೇರಿ ಹಲವು ಮಹತ್ವದ ಸಂಶೋಧನಾ ಸಂಸ್ಥೆಗಳು, ಹತ್ತಾರು ಕೈಗಾರಿಕೆಗಳು ರಾಜ್ಯದಲ್ಲಿ ನೆಲೆಯೂರುವಂತಾದವು. ರಾಜ್ಯದ ಹಿರಿಮೆ ಎನಿಸಿಕೊಂಡವು.
ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ): ಭಾರತದ ವಿಜ್ಞಾನ ಕ್ಷೇತ್ರದ ಮುಕುಟಮಣಿಯಾಗಿದೆ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ). ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸುವುದು ಉದ್ಯಮಿ ಜೆ.ಎನ್.ಟಾಟಾ ಕನಸಾಗಿದ್ದರೂ, ಅದು ನನಸಾಗಲು ಮೈಸೂರು ರಾಜಮಾತೆಯಾಗಿದ್ದ ಮಹಾರಾಣಿ ಕೆಂಪನಂಜಮ್ಮಣ್ಣಿ ಅವರೂ ಕಾರಣಕರ್ತರು. ಐಐಎಸ್ಸಿಗಾಗಿ 371 ಎಕರೆ ಭೂಮಿ, ಆರಂಭಿಕ ವೆಚ್ಚ, ವಾರ್ಷಿಕ ದತ್ತಿ ಒದಗಿಸಿದರು. ಪರಿಣಾಮ 1909ರಲ್ಲಿ ಎರಡು ವಿಭಾಗಗಳೊಂದಿಗೆ ಐಐಎಸ್ಸಿ ಆರಂಭವಾಯಿತು. ಇಂದು ಅಂತಾರಾಷ್ಟ್ರೀಯವಾಗಿಯೂ ಭಾರತದ ಹೆಗ್ಗುರುತೆನಿಸಿದೆ.
ಎಚ್ಎಎಲ್: ಹಿಂದುಸ್ಥಾನ್ ಎರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಜಾಗತಿಕವಾಗಿ ಅತಿ ದೊಡ್ಡ ವೈಮಾನಿಕ ಹಾಗೂ ಭದ್ರತಾ ಸಂಸ್ಥೆಗಳಲ್ಲಿ ಸ್ಥಾನ ಪಡೆದಿದೆ. ಖಾಸಗಿಯಾಗಿ ಆರಂಭವಾದ ಈ ಸಂಸ್ಥೆಯಲ್ಲಿ ಕೃಷ್ಣರಾಜ ಒಡೆಯರ್ ಪಾಲುದಾರರಾಗಿದ್ದರು. ಹೀಗಾಗಿ ಇದು ರಾಜಧಾನಿಯಲ್ಲಿ ನೆಲೆಯೂರಿತು. ಬ್ರಿಟಿಷರಿಗಾಗಿ ಯುದ್ಧ ವಿಮಾನಗಳ ತಯಾರಿಕೆಯಲ್ಲಿ ತೊಡಗಿತು. ಅಮೆರಿಕದ ತೆಕ್ಕೆಗೆ ಒಳಗಾಗಿ ಯುದ್ಧ ವಿಮಾನ ದುರಸ್ತಿ ಕೇಂದ್ರವಾಯತು. ಇಂದು ದೇಶದ ರಕ್ಷಣಾ ಕ್ಷೇತ್ರದ ಬೆನ್ನೆಲುಬಾಗಿದೆ. ವೈಮಾನಿಕ ರಂಗದಲ್ಲಿ ಸ್ವಾವಲಂಬನೆಗೆ ಕಾರಣವಾಗಿದೆ. ವಿದೇಶಗಳಿಗೂ ರಫ್ತು ಮಾಡುತ್ತಿದೆ.
ಭಾರತೀಯ ಖಭೌತಶಾಸ್ತ್ರ ಸಂಸ್ಥೆ: ಭಾರತದ ಭೌಗೋಳಿಕ ಸರ್ವೆಗೆ (ದಿ ಗ್ರೇಟ್ ಟ್ರಿಗ್ನಾಮೇಟ್ರಿ ಸರ್ವೆ ಆಫ್ ಇಂಡಿಯಾ) ಬೆಂಗಳೂರು ಕೇಂದ್ರವಾದಂತೆ ಖಗೋಳ ಅಧ್ಯಯನಕ್ಕೂ ರಾಜಧಾನಿ ವಿಶೇಷ ಕೊಡುಗೆ ನೀಡುತ್ತಿದೆ. ಕೋರಮಂಗಲದಲ್ಲಿ ಮುಖ್ಯ ಕಚೇರಿ ಹೊಂದಿರುವ ಭಾರತೀಯ ಖಭೌತಶಾಸ್ತ್ರ ಸಂಸ್ಥೆಯು ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ ಹಾಗೂ ಇತರ ಸಂಬಂಧಿತ ಭೌತಶಾಸ್ತ್ರಗಳ ಅಧ್ಯಯನಕ್ಕೆ ಮೀಸಲಾಗಿದೆ. ಗೌರಿಬಿದನೂರಿನಲ್ಲಿರುವ ರೇಡಿಯೋ ಅಲೆಗಳ ಸಂಶೋಧನಾ ಕೇಂದ್ರವು ಸೂರ್ಯನ ಅಧ್ಯಯನಕ್ಕೆ ಮೀಸಲಾಗಿದೆ.
ಇಸ್ರೋ: ಡಾ.ವಿಕ್ರಮ್ ಸಾರಾಭಾಯ್ ದೂರದೃಷ್ಟಿಯೊಂದಿಗೆ 1962ರಲ್ಲಿ ರಚಿಸಲಾದ ನ್ಯಾಷನಲ್ ಕಮಿಟಿ ಫಾರ್ ಸ್ಪೇಸ್ ರಿಸರ್ಚ್ (ಇನ್ಕೋಸ್ಪಾರ್) ನಂತರ 1969ರಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎನಿಸಿತು. ಐಐಎಸ್ಸಿ ನಿರ್ದೇಶಕರಾಗಿದ್ದ ಡಾ.ಸತೀಶ್ ಧವನ್ ಇದಕ್ಕೂ ಆರಂಭಿಕ ನಿರ್ದೇಶಕರಾಗಿದ್ದರು. ಈ ಕಾರಣಕ್ಕೆ ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿತು. ಇಸ್ರೋಗಾಗಿಯೇ ಬಾಹ್ಯಾಕಾಶ ಇಲಾಖೆ ರೂಪಿಸಿ, ಅದರ ಅಧೀನಕ್ಕೆ ತರಲಾಯಿತು. ಇಸ್ರೋ ಅಧ್ಯಕ್ಷರೇ ಈ ಇಲಾಖೆ ಕಾರ್ಯದರ್ಶಿ ಹಾಗೂ ಬಾಹ್ಯಾಕಾಶ ಆಯೋಗದ ಮುಖ್ಯಸ್ಥರಾಗಿರುತ್ತಾರೆ.
ಆರ್ಯಭಟ ರೂಪಿಸಿದ ಸಂಸ್ಥೆ: ಭಾರತದ ಮೊದಲ ಉಪಗ್ರಹ ತಯಾರಿಸುವ ಯೋಜನೆ ರೂಪುಗೊಂಡಾಗ ಅದಕ್ಕೆ ಕೇಂದ್ರ ಸ್ಥಾನವಾಗಿದ್ದು ಬೆಂಗಳೂರು. ಐಐಎಸ್ಸಿ ಆವರಣದಲ್ಲಿಯೇ ಕಾರ್ಯಾರಂಭವಾದರೂ, ಬಳಿಕ ಪೀಣ್ಯದ ಕೈಗಾರಿಕಾ ಶೆಡ್ಗೆ ಸ್ಥಳಾಂತರಗೊಂಡಿತು. ‘ಆರ್ಯಭಟ’ ಸಿದ್ಧಗೊಂಡಿದ್ದು ಇಲ್ಲಿಯೇ. ಈ ಯಶಸ್ಸಿನ ನಂತರ ಉಪಗ್ರಹ ಯೋಜನೆಗಳಿಗೆ ಭಾರಿ ಮಹತ್ವ ದೊರೆತು ಪ್ರತ್ಯೇಕ ಸಂಸ್ಥೆ ಸ್ಥಾಪನೆಯಾಯಿತು. ಆರ್ಯಭಟ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಯು.ಆರ್. ರಾವ್ ಅವರ ಹೆಸರನ್ನೇ ಇದಕ್ಕೆ ಇಡಲಾಯಿತು. ನೂರಾರು ಉಪಗ್ರಹಗಳು ಇಲ್ಲಿ ರೂಪುಗೊಂಡಿವೆ.
ಇಂಡಿಯನ್ ರೇರ್ ಮೆಟಲ್ ಪ್ಲಾಂಟ್: ಮೈಸೂರು ಹೊರವಲಯದಲ್ಲಿರುವ ಸ್ಥಳೀಯವಾಗಿ ಆರ್ಎಂಪಿ (ರೇರ್ ಮೆಟಲ್ ಪ್ಲಾಂಟ್) ಎಂದೇ ಕರೆಯಲಾಗುವ ಈ ಸಂಸ್ಥೆಯು ಭಾರತದ ಪರಮಾಣು ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಬಲಾಢ್ಯ ರಾಷ್ಟ್ರಗಳು ಹಾಗೂ ಶತ್ರುರಾಷ್ಟ್ರಗಳು ಇದರ ಚಟುವಟಿಕೆ ಮೇಲೆ ಸದಾ ಕಣ್ಣಿಟ್ಟಿರುತ್ತವೆ. ಭಾರತದ ನ್ಯೂಕ್ಲಿಯರ್ ಚಟುವಟಿಕೆಗಳಿಗೆ ಯುರೇನಿಯಂ ಸಂಸ್ಕರಣೆಗೆ ದೇಶದ ಪ್ರಮುಖ ತಾಣ ಇದಾಗಿದೆ.