ನ್ಯೂಸ್

ಶಾಲಾ ಶಿಕ್ಷಕರ ವಲಯ ವರ್ಗಕ್ಕೆ ಕೊಕ್

ಬೆಂಗಳೂರು: ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಕಾರಣಕ್ಕೆ ಸ್ಥಗಿತಗೊಂಡಿದ್ದ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಗೆ ಮರು ಚಾಲನೆ ಸಿಕ್ಕಿದೆ. ಆದರೆ, ಈ ವರ್ಷಕ್ಕೆ ಮಾತ್ರ ಅನ್ವಯಿಸುವಂತೆ ವಲಯ ವರ್ಗಾವಣೆಯನ್ನು ಕೈಬಿಡಲಾಗಿದೆ. ಪರಿಷ್ಕೃತ ವೇಳಾಪಟ್ಟಿ ಪ್ರಕಾರ ವರ್ಗಾವಣೆ ಬಯಸುವ ಶಿಕ್ಷಕರಿಗೆ ಅರ್ಜಿ ಸಲ್ಲಿಸಲು ಜೂ.20ರವರೆಗೆ ಅವಕಾಶ ಕಲ್ಪಿಸಲಾಗಿದೆ.

ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು, ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆಯಾದಲ್ಲಿ ವೇಳಾಪಟ್ಟಿ ಬದಲಾಗಲಿದೆ ಎಂದು ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

2020ರಲ್ಲಿ ಜಾರಿಯಾದ ಶಿಕ್ಷಕರ ವರ್ಗಾವಣೆ ಕಾಯ್ದೆಯಂತೆ ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮತ್ತು ಕಡ್ಡಾಯ ವರ್ಗಾವಣೆಗಳನ್ನು ಒಂದರ ನಂತರ ಮತ್ತೊಂದನ್ನು ಪರ್ಯಾಯ ವರ್ಷಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ.ಆದರೆ, ಕಳೆದ ವರ್ಷ ನಡೆಯಬೇಕಿದ್ದ ವರ್ಗಾವಣೆ ಪ್ರಕ್ರಿಯೆ ಲೋಕಸಭಾ ಚುನಾವಣೆ ನೀತಿ ಸಂಹಿತೆಯಿಂದ 3 ತಿಂಗಳು ವಿಳಂಬವಾಗಿದೆ.

ಈ ಹಿನ್ನೆಲೆಯಲ್ಲಿ ಶೈಕ್ಷಣಿಕ ವರ್ಷಾರಂಭದಲ್ಲಿಯೇ ವಲಯ ವರ್ಗಾವಣೆ ಸೂಕ್ತವಲ್ಲವೆಂದು ನಿರ್ಧರಿಸಲಾಗಿದೆ. ನಿರ್ದಿಷ್ಟ ಪಡಿಸಿರುವ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರ ತಾತ್ಕಾಲಿಕ ಕರಡು ಪಟ್ಟಿಯನ್ನು ಜೂ.18ರಂದು ಪ್ರಕಟಿಸಲಾಗುತ್ತದೆ. ಇದಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಜೂ.21ರವರೆಗೆ ಆಕ್ಷೇಪಣೆ ಸಲ್ಲಿಸ ಬಹುದು. ಜೂ.24ರಂದು ಅಂತಿಮ ಆದ್ಯತಾ ಕರಡು ಪಟ್ಟಿ ಪ್ರಕಟಣೆ ಮಾಡಲಾಗುತ್ತದೆ. ವಿಭಾಗೀಯ ಹಂತದ ವರ್ಗಾವಣೆ ಆ.1ರಿಂದ ಆ.14ರವರೆಗೆ ನಡೆಯಲಿದೆ. ಅಂತರ್ ವಿಭಾಗೀಯ ಹಂತದ ವರ್ಗಾವಣೆ ಆ.14ರಿಂದ 27ರವರೆಗೆ ನಡೆಯಲಿದೆ. ತಾಂತ್ರಿಕ ಕಾರಣಗಳಿಂದ ಅಡಚಣೆಯಾದಲ್ಲಿ ವೇಳಾಪಟ್ಟಿ ಬದಲಾಗಲಿದೆ.