ನ್ಯೂಸ್

ಶಾಲಾ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಇಬ್ಬರು ಯುವತಿಯರು ಸೇರಿ ಐವರ ಬಂಧನ

ಪರಸ್ಸಾಲ: ಇನ್​​ಸ್ಟಾಗ್ರಾಂನಲ್ಲಿ ಪರಿಚಯವಾದ ಶಾಲಾ ಬಾಲಕಿಯ ಮೇಲೆ ಮದುವೆಯ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಇಬ್ಬರು ಯುವತಿಯರು ಸೇರಿದಂತೆ ಐವರು ಆರೋಪಿಗಳನ್ನು ಪರಸ್ಸಾಲ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಎರ್ನಾಕುಲಂ ಕಾಲಡಿ ನಿವಾಸಿಗಳಾದ ಅಜಿನ್​​ ಸ್ಯಾಮ್​, ಅಖಿಲೇಶ್​ ಸಾಬು, ಜಿತಿನ್​ ವರ್ಘೀಶ್​, ಪೂರ್ಣಿಮಾ ದಿನೇಶ್​ ಮತ್ತು ಶ್ರುತಿ ಸಿದ್ಧಾರ್ಥ್​ ಎಂದು ಗುರುತಿಸಲಾಗಿದೆ.

ಇನ್​ಸ್ಟಾಗ್ರಾಂನಲ್ಲಿ ಪರಿಚಯವಾದ ಶಾಲಾ ಬಾಲಕಿಯ ಪ್ರಿಯಕರ ಮತ್ತು ಆತನ ಗ್ಯಾಂಗ್​ ಏಪ್ರಿಲ್ 17 ರಂದು ರಾತ್ರಿ ಕಲಿಯಕ್ಕವಿಲೈ ತಲುಪಿ ಸಂತ್ರಸ್ತೆಯನ್ನು ನೆಯ್ಯಂಟಿನ್‌ಕರದಲ್ಲಿರುವ ಹೋಟೆಲ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದೆ. ಗ್ಯಾಂಗ್​ನಲ್ಲಿ ಇಬ್ಬರು ಯುವತಿಯರು ಇದ್ದಾರೆ. ಮರುದಿನ ಆಕೆಯನ್ನು ಕಲಿಯಕ್ಕವಿಲೈಗೆ ಮರಳಿ ತಂದು ಬಿಟ್ಟಿದ್ದಾರೆ. ಬಳಿಕ ಹುಡುಗಿ ಪಾಲಕರಿಗೆ ಮಾಹಿತಿ ತಿಳಿಸಿದ್ದಾರೆ. ನಂತರ ಪಾಲಕರು ನೀಡಿದ ದೂರಿನ ಆಧಾರದ ಮೇಲೆ ಪ್ರಿಯಕರ ಮತ್ತು ಆತನ ನಾಲ್ವರು ಸ್ನೇಹಿತರನ್ನು ಕಾಲಡಿಯಲ್ಲಿ ಬಂಧಿಸಲಾಗಿದೆ.

ಪರಸ್ಸಾಲ ಠಾಣೆಯ ಇನ್ಸ್‌ಪೆಕ್ಟರ್ ಆಜಾದ್ ಅಬ್ದುಲ್ ಕಲಾಂ ನೇತೃತ್ವದಲ್ಲಿ ಎಸ್‌ಐ ಸಜಿ, ಸಿಎಸ್‌ಎಸ್, ಎಎಸ್‌ಐ ಮಿನಿ, ಎಸ್‌ಸಿಪಿಒ ಸಾಬು, ಸಿಪಿಒ ಸುನೀಲ್ ಕುಮಾರ್, ಸಾಜನ್ ತಂಡ ಆರೋಪಿಗಳನ್ನು ಬಂಧಿಸಿದೆ. ಎಲ್ಲ ಆರೋಪಿಗಳನ್ನು ನೆಯ್ಯಟ್ಟಿಂಕರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. (ಏಜೆನ್ಸೀಸ್​)