ನವದೆಹಲಿ: ಇತ್ತೀಚಿನ ದಿನಗಳಲ್ಲಿ ಯುವಜನತೆ ಸ್ಮಾರ್ಟ್ಫೋನ್ಗಳಿಗೆ ಹೆಚ್ಚು ಆಕರ್ಷಿತರಾಗಿದ್ದು, ಮೊಬೈಲ್ ಇಲ್ಲವೆಂದರೆ ಓದು, ಕೆಲಸ ಯಾವುದೂ ಬೇಡ ಎನ್ನುವ ಮಟ್ಟಕ್ಕೆ ಹೋಗಿದ್ದಾರೆ. ತೊಡಲು ಒಳ್ಳೆಯ ಬಟ್ಟೆ, ಹೊಟ್ಟೆಗೆ ಊಟವಿಲ್ಲದಿದ್ದರೂ ಸಹ ಅಂಗೈ ತುಂಬ ಎಲ್ಲರ ಗಮನಸೆಳೆಯುವಂತ 6 ಇಂಚಿನ ಫೋನ್ ಇದ್ದರೆ ಸಾಕಾಗಿದೆ. ಅದರಲ್ಲೂ ಹೊಚ್ಚ ಹೊಸ ಆಧುನಿಕ ಫೀಚರ್ಸ್ಗಳನ್ನು ಒಳಗೊಂಡ ಫೋನ್ಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಶಾಲಾ ವಿದ್ಯಾರ್ಥಿಗಳು ಸಹ ತಮ್ಮ ಬಳಿಯೂ ಇಂತಹದ್ದೇ ಒಂದು ಫೋನ್ ಇದ್ದರೆ ಎಷ್ಟು ಚೆಂದ ಎಂಬ ಬಯಕೆ ವ್ಯಕ್ತಪಡಿಸುತ, ಹೆತ್ತವರಿಂದ ಮೊಬೈಲ್ ಖರೀದಿಗೆ ಮುಂದಾಗಿದ್ದಾರೆ. ಸದ್ಯ ಇದೇ ರೀತಿ ಇಲ್ಲೊಬ್ಬ ಅಪ್ರಾಪ್ತ ಶಾಲಾ ಬಾಲಕ ಬಹಳ ಆಸೆಯಿಂದ ಖರೀದಿಸಿದ ಹೊಸ ಫೋನ್ನ ತನ್ನ ಸ್ನೇಹಿತರಿಗೆ ತೋರಿಸಿದ್ದೇ ಇಂದು ಆತನ ದುರಂತ ಅಂತ್ಯಕ್ಕೆ ಕಾರಣವಾಗಿದೆ.
ಹೊಸ ಫೋನ್ ಖರೀದಿಸಿದ್ದಕ್ಕೆ ಟ್ರೀಟ್ ನೀಡಲು ನಿರಾಕರಿಸಿದ 16 ವರ್ಷದ ಬಾಲಕನನ್ನು ಆತನ ಮೂವರು ಸ್ನೇಹಿತರು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಪೂರ್ವ ದೆಹಲಿಯ ಶಕರ್‌ಪುರದಲ್ಲಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ (ಪೂರ್ವ) ಅಪೂರ್ವ ಗುಪ್ತಾ ನೀಡಿರುವ ಮಾಹಿತಿ ಪ್ರಕಾರ, ಸೋಮವಾರ (ಸೆ.24) ಸಂಜೆ 7:15ರ ಸುಮಾರಿಗೆ ಶಕರ್‌ಪುರದ ರಾಮ್‌ಜಿ ಸಮೋಸಾ ಅಂಗಡಿಯ ಬಳಿ ಮೃತ ಬಾಲಕ ಸಚಿನ್ನನ್ನು ಆತನ ಸ್ನೇಹಿತರು ಅಡ್ಡಗಟ್ಟಿ ಪಾರ್ಟಿ ಕೇಳಿದ್ದಾರೆ. ಹೊಸ ಫೋನ್ ಖರೀದಿಸಿದ ಕಾರಣ ನಮಗೆ ಪಾರ್ಟಿ ಕೊಡಿಸು ಎಂದು ಒತ್ತಾಯಿಸಿದ್ದಾರೆ. ಈ ವೇಳೆ ಆಗುವುದಿಲ್ಲ ಎಂದು ಸಚಿನ್ ತಿರಸ್ಕರಿಸಿದ್ದಕ್ಕೆ ಚಾಕು ಇರಿದ ಆತನ ಸ್ನೇಹಿತರು, ಅಲ್ಲಿಂದ ಓಡಿಹೋಗಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಮದುವೆಯಾಗುವುದಾಗಿ ಯಾರಿಗೂ ವಂಚಿಸಿಲ್ಲ
"ನಮ್ಮ ಗಸ್ತು ತಿರುಗುವ ಪೊಲೀಸರ ತಂಡವೊಂದು ಸ್ಥಳೀಯರು ನೀಡಿದ ದೂರಿನ ಮೇರೆಗೆ ಘಟನೆ ನಡೆದ ಜಾಗದ ಪರಿಶೀಲನೆ ನಡೆಸಿ, ಮೂವರು ಬಾಲಕರನ್ನು ಬಂಧಿಸಿದ್ದಾರೆ. ಹೊಸ ಕಾನೂನು ಬಿಎನ್ಎಸ್ ಸೆಕ್ಷನ್ 103(1) ಮತ್ತು 3(5) ಅಡಿಯಲ್ಲಿ ಶಕರ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಪೊಲೀಸರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).