ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಪರಿಶಿಷ್ಟ ಜಾತಿಯವರ ಅಭಿವೃದ್ಧಿಗಾಗಿ ವಿಶೇಷ ಘಟಕ ಯೋಜನೆ (ಎಸ್ಸಿಪಿ), ಪರಿಶಿಷ್ಟ ಪಂಗಡದ ಜನರ ಅಭಿವೃದ್ಧಿಗಾಗಿ ವಿಶೇಷ ಗಮನಹರಿಸಲು ಟ್ರೖೆಬಲ್ ಸಬ್ ಪ್ಲಾನ್ (ಟಿಎಸ್ಪಿ) ಅನುದಾನ ಬಳಕೆ ಈ ಹೊತ್ತಿನಲ್ಲಿ ರಾಜಕೀಯ ಮೇಲಾಟದ ವಿಷಯವಸ್ತುವಾಗಿದೆ.
ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಂಗೀಕುಸ್ತಿಯೇ ನಡೆದಿದ್ದು, ದಲಿತರ ಹಣ ನಿರ್ದಿಷ್ಟ ಉದ್ದೇಶಕ್ಕೆ ಬಳಸಿಲ್ಲ ಎಂಬ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ 2025-26ನೇ ಬಜೆಟ್ ತಯಾರಿ ಅಂತಿಮ ಹಂತದಲ್ಲಿದ್ದು, ಹಿಂದಿನ ಬಜೆಟ್ನಲ್ಲಿನ ಅನುದಾನ ಹಂಚಿಕೆ ಹಾಗೂ ಬಳಕೆಯ ಮಾಹಿತಿಯನ್ನು ಅವಲೋಕಿಸಿದರೆ ಅನೇಕ ಅಚ್ಚರಿಯ ಅಂಶಗಳು ಕಾಣಸಿಗುತ್ತವೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಸಂಖ್ಯೆ ಆಧಾರದಲ್ಲಿ ಆಯವ್ಯಯವನ್ನು ಹಂಚಿಕೆ ಮಾಡಲು ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪ ಹಂಚಿಕೆ (ಯೋಜನೆ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) ಅಧಿನಿಯಮವನ್ನು ಜಾರಿಗೆ ತರಲಾಯಿತು. ಅಂದಹಾಗೆ ಮೂಲ ಉದ್ದೇಶ ದಲಿತ, ಆದಿವಾಸಿಗಳ ಸಬಲೀಕರಣ, ದಲಿತ ಕೇರಿ, ಕಾಲನಿ, ಹಾಡಿಗಳಿಗೆ ಮೂಲಸೌಲಭ್ಯ, ಶಿಕ್ಷಣ ಆರೋಗ್ಯ, ಕುಡಿಯುವ ನೀರು, ವಸತಿ, ಸ್ವಾವಲಂಬನೆಗೆ ಒತ್ತುಕೊಡಬೇಕು. ಇದಕ್ಕಾಗಿ 2014-15ರಿಂದ ಈವರೆಗೆ 2.42 ಲಕ್ಷ ಕೋಟಿ ರೂ. ಬಳಕೆ ಮಾಡಲಾಗಿದೆ ಎಂದು ಸರ್ಕಾರದ ಅಂಕಿ-ಅಂಶ ಹೇಳುತ್ತದೆ.
ಸರ್ಕಾರ ನಿರ್ದಿಷ್ಟ ಉದ್ದೇಶದ ಬಳಕೆಗಾಗಿ ಗಂಗಾ ಕಲ್ಯಾಣ, ಐರಾವತ ವಾಹನ ಯೋಜನೆ, ಭೂ ಒಡೆತನ, ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವವರಿಗೆ ನೆರವು, ವಸತಿ ಶಾಲೆ ಹಾಗೂ ಹಾಸ್ಟೆಲ್ ಕಟ್ಟಡ ನಿರ್ವಣದಂತಹ ಕೆಲಸ ಕೈಗೆತ್ತಿಕೊಂಡಿದೆ. ಈ ಎಲ್ಲ ಕೆಲಸಕ್ಕೆ 2 ಲಕ್ಷ ಕೋಟಿ ರೂ.ಗಿಂತ ಹೆಚ್ಚಿಗೆ ಬಳಕೆಯಾಯಿತೇ ಎಂದರೆ ಇಲ್ಲ. ಕಾನೂನಿನಲ್ಲಿರುವ ಅವಕಾಶ ಪಡೆದುಕೊಂಡು ಅನ್ಯ ಉದ್ದೇಶಕ್ಕೆ ಬಳಸಿಕೊಂಡಿರುವುದು ಕಾಣಿಸುತ್ತಿದೆ. ಸರ್ಕಾರಗಳು ಬದಲಾದರೂ ಅಧಿಕಾರಿಗಳ ಸಲಹೆಯಂತೆ ಮೀಸಲು ಅನುದಾನವನ್ನು ಅನ್ಯ ಉದ್ದೇಶಕ್ಕೆ ಯಥೇಚ್ಛವಾಗಿ ಬಳಸಲಾಗಿದೆ.
2023ರಲ್ಲಿ ಪುನಃ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ, ಈ ಅನ್ಯ ಉದ್ದೇಶ ಬಳಕೆ ತಡೆಯುವ ಒಂದು ಪ್ರಯತ್ನವಾಗಿ ಸೆಕ್ಷನ್ 7ಡಿಯನ್ನು ತೆಗೆದು ಹಾಕಿ ಅನುದಾನ ಅನ್ಯ ಬಳಕೆಗೆ ಅವಕಾಶ ತಪ್ಪಿಸಿದರು. ಆದರೆ ಎರಡೇ ವರ್ಷದಲ್ಲಿ ದಲಿತರ ಮೀಸಲು ನಿಧಿ 25 ಸಾವಿರ ಕೋಟಿ ರೂ. ಗ್ಯಾರಂಟಿ ಯೋಜನೆಗೆ ಬಳಕೆ ಮಾಡಲಾಗಿದೆ. ಈವರೆಗೆ ಅನುದಾನ ದುರ್ಬಳಕೆಯಾಗಿಲ್ಲ ಎಂಬುದು ಸರ್ಕಾರದ ವಾದವಾಗಿದೆ. ಈ ಕಾನೂನಿನ ಸೆಕ್ಷನ್ 7ಎ, 7ಬಿ ಮತ್ತು 7ಸಿ ಅಡಿ ಅನುದಾನ ನೀಡಲಾಗುತ್ತಿದೆ. ಹೀಗೆ ಅನುದಾನ ಕೊಡಲು ಅವಕಾಶವಿದೆ.
ಇಲ್ಲೊಂದು ಪ್ರಶ್ನೆಯೂ ಎದುರಾಗುತ್ತದೆ, ಉದಾಹರಣೆಗೆ ಉಚಿತ ಬಸ್ ಪ್ರಯಾಣದ ‘ಶಕ್ತಿ’ ಯೋಜನೆಯಲ್ಲಿ ಈ ಸಮುದಾಯದವರನ್ನು ಹೇಗೆ ಗುರುತಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಎಲ್ಲರೂ ಬಳಸುವ ಯೋಜನೆಗೆ ಮೀಸಲು ಹಣ ಬಳಸಿದರೆ ಕಾನೂನು ಮಾಡಿ ಪ್ರಯೋಜನವೇನು? ಇದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. 2025-26ನೇ ಸಾಲಿನಲ್ಲೂ 15 ಸಾವಿರ ಕೋಟಿ ರೂ.ವರೆಗೆ ಗ್ಯಾರಂಟಿ ಯೋಜನೆಗೆ ಬಳಸುವ ತಯಾರಿ ನಡೆದಿದೆ.
ಇನ್ನು ಸರ್ಕಾರದ ಪ್ರಗತಿ ಪರಿಶೀಲನಾ ಸಭೆಯ ದಾಖಲೆ ಪ್ರಕಾರ ಕಳೆದ 10 ತಿಂಗಳಲ್ಲಿ ಶೇ.40ರಷ್ಟು ಪ್ರಗತಿ ತೋರಿಸಿರಲಿಲ್ಲ. ಯುವ ಸಬಲೀಕರಣ ಕ್ರೀಡಾ ಇಲಾಖೆ, ಸಣ್ಣ ಕೈಗಾರಿಕೆ, ಕೌಶಲ್ಯ ಅಭಿವೃದ್ಧಿ, ಆಹಾರ ನಾಗರಿಕ ಪೂರೈಕೆ, ಐಟಿಬಿ, ಕೃಷಿ, ಪ್ರವಾಸೋದ್ಯಮ ಇಲಾಖೆಗಳು ಈ ಪಟ್ಟಿಯಲ್ಲಿದ್ದವು. ಹಾಗೆಯೇ ಫೆಬ್ರವರಿ ಮಧ್ಯಭಾಗದ ಅಂಕಿ-ಅಂಶದಂತೆ ಕೊನೆಯ ಒಂದೂವರೆ ತಿಂಗಳಲ್ಲಿ ಸರ್ಕಾರ ಖರ್ಚು ಮಾಡಬೇಕಿರುವುದು ಬರೋಬ್ಬರಿ 19 ಸಾವಿರ ಕೋಟಿ ರೂ. ಆಗಿತ್ತು.
ನಡೆಯದ ಮೌಲ್ಯಮಾಪನ: ಕರ್ನಾಟಕ ಅನುಸೂಚಿತ ಜಾತಿಗಳ ಉಪ ಹಂಚಿಕೆ ಮತ್ತು ಬುಡಕಟ್ಟುಗಳ ಉಪ ಹಂಚಿಕೆ ಕಾನೂನಿನಡಿ 2014ರಿಂದ 11 ವರ್ಷಗಳಲ್ಲಿ ಎಡೂವರೆ ಲಕ್ಷ ಕೋಟಿ ರೂ. ಅನುದಾನ ಬಳಸಲಾಗಿದೆ. ಇಷ್ಟೊಂದು ಹಣ ವೆಚ್ಚ ಮಾಡಿದ್ದರಿಂದ ಆಗಿರುವ ಬದಲಾವಣೆಗಳೇನು? ಮುಂದೆ ಕಾಲಕ್ಕೆ ತಕ್ಕಂತೆ ಯೋಜನೆಗಳ ಸ್ವರೂಪ ಬದಲಿಸಬೇಕೆ? ಎಂಬುದರ ಕುರಿತು ಸ್ಪಷ್ಟವಾದ ಮೌಲ್ಯಮಾಪನ ಆಗಿಲ್ಲ. ಮೌಲ್ಯಮಾಪನ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಹೇಳಿ ಆರು ತಿಂಗಳಾಯಿತು. ದುರ್ಬಳಕೆ ಚರ್ಚೆಯಾದ ಸಂದರ್ಭದಲ್ಲಿಯೇ ಅಧಿವೇಶನದಲ್ಲಿ ಭರವಸೆ ನೀಡಿದ್ದರು. ಆದರೆ, ಈವರೆಗೆ ಸರ್ಕಾರದಿಂದ ವರದಿ ಬಂದಿಲ್ಲ.
ಕೇಂದ್ರದಲ್ಲಿ ಹೇಗಿದೆ ವ್ಯವಸ್ಥೆ?: ಕೇಂದ್ರದಲ್ಲಿ ಮೀಸಲು ನಿಗದಿ ಮಾಡುವ ವ್ಯವಸ್ಥೆ 7ನೇ ಪಂಚವಾರ್ಷಿಕ ಯೋಜನೆಯಿಂದ ಜಾರಿಗೆ ಬಂದಿದೆ. ಪ್ರಸ್ತುತ ಬಜೆಟ್ ಹಂಚಿಕೆಯಲ್ಲಿ 25 ಇಲಾಖೆಗಳಲ್ಲಿ ಎಸ್ಸಿಎಸ್ಪಿಗೆ ಶೇ.11.59 ಹಾಗೂ ಟಿಎಸ್ಪಿಗೆ ಶೇ.18.84 ಅನುದಾನ ಹಂಚಿಕೆ ಮಾಡಲಾಗಿದೆ.