ನ್ಯೂಸ್

ಎಸ್ಸಿ ಒಳಮೀಸಲಾತಿ ತೀರ್ಪು ಮರುಪರಿಶೀಲನೆ

Webdesk - Mallikarjun K R

ವಿಜಯವಾಣಿ ಸುದ್ದಿಜಾಲ ನವದೆಹಲಿ

ದೇಶದಲ್ಲಿ ಮೀಸಲಾತಿ ಪ್ರಯೋಜನಗಳನ್ನು ಅರ್ಹರಿಗೆ ವಿಸ್ತರಿಸುವ ಉದ್ದೇಶದಿಂದ ಪರಿಶಿಷ್ಟ ಜಾತಿಗಳೊಳಗೆ ಉಪವರ್ಗೀಕರಣಗಳನ್ನು ಮಾಡಲು ರಾಜ್ಯಗಳಿಗೆ ಸಂವಿಧಾನಾತ್ಮಕವಾಗಿ ಅಧಿಕಾರವಿದೆ ಎಂದು ನೀಡಿದ್ದ ತೀರ್ಪಿನ ಮರುಪರಿಶೀಲನೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಮರುಪರಿಶೀಲನೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ನ್ಯಾಯಮೂರ್ತಿಗಳ ಕೊಠಡಿಯಲ್ಲಿ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದ್ದು, ಏಳು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹೆಚ್ಚು ಹಿಂದು ಳಿದಿರುವ ಜಾತಿಗಳ ಉನ್ನತಿಗಾಗಿ ಮೀಸಲಾತಿ ನೀಡಲು, ಪರಿಶಿಷ್ಟ ಜಾತಿ ಗಳಲ್ಲಿ ಉಪವರ್ಗ ಮಾಡಲು ರಾಜ್ಯಗಳು ಮುಂದಾಗಬಹುದೆಂದು ಆಗಸ್ಟ್ 1ರಂದು ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.

ದೇಶದಲ್ಲಿ ಮೀಸಲಾತಿ ಪ್ರಯೋಜನಗಳನ್ನು ಅರ್ಹರಿಗೆ ವಿಸ್ತರಿಸಲು ಪರಿಶಿಷ್ಟ ಜಾತಿ/ಪಂಗಡಗಳನ್ನು ಅವುಗಳ ಹಿಂದುಳಿದಿರುವಿಕೆಯ ಆಧಾರದ ಮೇಲೆ ವಿವಿಧ ಗುಂಪುಗಳಾಗಿ ಉಪ-ವರ್ಗೀಕರಿಸುವ ರಾಜ್ಯ ಸರ್ಕಾರಗಳ ಅಧಿಕಾರವನ್ನು ಕೋರ್ಟ್ ಎತ್ತಿಹಿಡಿದಿತ್ತು.

ಎಸ್​ಸಿ/ಎಸ್​ಟಿ ಸಮುದಾಯ ಎದುರಿಸುತ್ತಿರುವ ವ್ಯವಸ್ಥಿತ ತಾರತಮ್ಯದಿಂದಾಗಿ ಉನ್ನತಿ ಸಾಧಿಸಲು ಸಾಧ್ಯವಾಗುತ್ತಿಲ್ಲ. ಸಂವಿಧಾನದ 14ನೇ ವಿಧಿ ಜಾತಿಯ ಉಪ-ವರ್ಗೀಕರಣವನ್ನು ಅನುಮತಿಸುತ್ತದೆ. ಒಂದು ವರ್ಗ ಏಕರೂಪದ್ದಾಗಿದೆಯೇ ಅಥವಾ ಮತ್ತಷ್ಟು ವರ್ಗೀಕರಿಸುವ ಅಗತ್ಯವಿದೆಯೇ ಎಂಬುದನ್ನು ನ್ಯಾಯಾಲಯಗಳು ಪರಿಶೀಲಿಸಬೇಕು ಎಂದು ಬಹುಮತದ ತೀರ್ಪಿನಲ್ಲಿ ಅಭಿಪ್ರಾಯಪಡಲಾಗಿತ್ತು. ಐತಿಹಾಸಿಕ ಪುರಾವೆಗಳು ಮತ್ತು ಸಾಮಾಜಿಕ ನಿಯತಾಂಕಗಳು ಎಸ್​ಸಿ/ಎಸ್​ಟಿಗಳು ಏಕರೂಪದ ವರ್ಗವನ್ನು ರೂಪಿಸುವುದಿಲ್ಲ ಎಂದು ಸ್ಪಷ್ಟವಾಗಿ ನಿರೂಪಿಸಿವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತ್ತು.

7 ಜಡ್ಜ್​ಗಳ ಪೀಠ

ಮುಖ್ಯ ನ್ಯಾಯ ಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಬಿ. ಆರ್. ಗವಾಯಿ, ವಿಕ್ರಮ್ ನಾಥ್, ಬೇಲಾ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ

ಸುಪ್ರೀಂ ತೀರ್ಪು ಏನಿತ್ತು?

* ಮೀಸಲಿನಿಂದ ಹಲವರು ಮೇಲಕ್ಕೆ ಬಂದಿದ್ದಾರೆ

* ಅಂಥವರ ನಂತರದ ಪೀಳಿಗೆಗೆ ಮೀಸಲು ಬೇಡ

* ಮೀಸಲು ಅನುಕೂಲ ಸಿಗದವರಿಗೆ ಸೌಲಭ್ಯ ದಕ್ಕಲಿ

* ಸೌಲಭ್ಯ ಪಡೆದ ಜಾತಿ ಪತ್ತೆ ಸರ್ಕಾರಗಳ ಕರ್ತವ್ಯ

* ಜಾತಿ ಕೆನೆಪದರ ಪತ್ತೆಯನ್ನು ಕೇಂದ್ರ ಮಾಡಬೇಕು

* ಈ ಕುರಿತು ಸ್ಪಷ್ಟ ಮಾನದಂಡ ರೂಪಿಸಲೇಬೇಕು