ನ್ಯೂಸ್

ಬಡ್ಡಿದರ ಶೇ.0.25 ಇಳಿಸಿದ ಎಸ್​ಬಿಐ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್​ನ (ಆರ್​ಬಿಐ) ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆಯು ಕಳೆದ ವಾರವಷ್ಟೇ ರೆಪೊ ದರವನ್ನು ಶೇಕಡ 0.25ರಷ್ಟು ಕಡಿತಗೊಳಿಸಿದೆ. ಇದರ ಬೆನ್ನಲ್ಲೇ ಬ್ಯಾಂಕುಗಳು ಈ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮುಂದಾಗಿವೆ.

ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್​ಬಿಐ) ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ರೆಪೊ ದರ ಆಧರಿತ ಎಕ್ಸ್​ಟರ್ನಲ್ ಬೆಂಚ್​ವಾರ್ಕ್ ಲೆಂಡಿಂಗ್ ರೇಟ್ (ಇಬಿಎಲ್​ಆರ್) ಅನ್ನು ಶೇ.9.15ರಿಂದ ಶೇ.8.90ಕ್ಕೆ ಇಳಿಸಿದೆ. ರೆಪೊ ಆಧರಿತ ಸಾಲದ ಬಡ್ಡಿದರವನ್ನು (ಆರ್​ಎಲ್​ಎಲ್​ಆರ್) ಶೇ.8.75ರಿಂದ ಶೇ.8.50ಗೆ ತಗ್ಗಿಸಲಾಗಿದೆ.

ಶನಿವಾರದಿಂದಲೇ ಈ ಬಡ್ಡಿದರ ಕಡಿತದ ಆದೇಶ ಜಾರಿಗೆ ಬಂದಿದೆ ಎಂದು ಎಸ್​ಬಿಐ ವೆಬ್​ಸೈಟ್​ನಲ್ಲಿ ತಿಳಿಸಲಾಗಿದೆ. ಎಸ್​ಬಿಐನ ಗೃಹ ಸಾಲ ಸೇರಿದಂತೆ ರೆಪೊ ಆಧರಿತ ಇತರ ಸಾಲ ಪಡೆದವರಿಗೆ ಬಡ್ಡಿದರ ಕಡಿತದ ಈ ಪ್ರಯೋಜನ ಸಿಗಲಿದೆ. ಆದರೆ, ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಆಧರಿತ ಸಾಲ (ಎಂಸಿಎಲ್​ಆರ್) ಮತ್ತು ಬೆಂಚ್​ವಾರ್ಕ್ ಪ್ರೖೆಮ್ ಲೆಂಡಿಂಗ್ ರೇಟ್ (ಬಿಪಿಎಲ್​ಆರ್) ಆಧರಿತ ಸಾಲದ ಮೇಲಿನ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಆದರೆ, ಬಹುತೇಕ ಗೃಹ ಸಾಲಗಾರರು ರೆಪೊ ಆಧರಿತ ಸಾಲ ಪಡೆಯಲು ಹೆಚ್ಚಿನ ಆದ್ಯತೆ ನೀಡುತ್ತಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.