ನ್ಯೂಸ್

ಮಾಟ ಮಂತ್ರ, ಕುತಂತ್ರ! ಪುತ್ರಿಯ ಮಾತು ತಿಳಿಲಿಲ್ಲ; ಪಾಪಿಗಳನ್ನು ಗಲ್ಲಿಗೇರಿಸಲು ಸೌರಭ್​ ತಾಯಿ ಪಟ್ಟು | Murder Case

Murder Case: ಪ್ರಿಯಕರನ ಜತೆ ಪ್ರೇಮ ಸಲ್ಲಾಪ ನಡೆಸಲು ಅಡ್ಡಿಯಾಗಿದ್ದ ಪತಿಯನ್ನು ಭೀಕರವಾಗಿ ಹತ್ಯೆಗೈದ ಪಾಪಿ ಪತ್ನಿ ಮತ್ತು ಆಕೆಯ ಪ್ರಿಯಕರ, ಸೌರಭ್​ ರಜಪುತ್​ನನ್ನು 15 ತುಂಡುಗಳಾಗಿ ಕತ್ತರಿಸಿ, ದೇಹದ ಭಾಗಗಳನ್ನು ಡ್ರಮ್​ನಲ್ಲಿರಿಸಿ, ಅದರ ಮೇಲೆ ಸಿಮೆಂಟ್​ನಿಂದ ಮುಚ್ಚಿಟ್ಟ ಘಟನೆ ಕಡೆಗೂ ಬೆಳಕಿಗೆ ಬಂದಿದೆ.

ಉತ್ತರಪ್ರದೇಶ​ ಮೀರತ್‌ನ ಸೌರಭ್ ರಜಪೂತ್ ದೇಹ ಡ್ರಮ್​ನಲ್ಲಿದೆ ಎಂಬುದನ್ನು ಪತ್ತೆಹಚ್ಚಿದ್ದೇ ಅವರ ಆರು ವರ್ಷದ ಮಗಳು. ತಾಯಿ ಮುಸ್ಕಾನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಕೊಲೆಗೈದು ತಂದೆಯನ್ನು ಡ್ರಮ್​ನಲ್ಲಿ ಸಿಮೆಂಟ್​ನಿಂದ ಮುಚ್ಚಿರುವುದನ್ನು ಸೌರಭ್ ಪುತ್ರಿ ಕಣ್ಣಾರೆ ನೋಡಿದ್ದಳು. ಮನೆಯಲ್ಲಿ ಸೌರಭ್ ಕಾಣುತ್ತಿಲ್ಲ ಎಂದು ಅವರ ತಾಯಿ ಗೋಳಾಡಿದ್ದಾರೆ. ಮಗ ನಾಪತ್ತೆಯಾಗಿದ್ದಾನೆ ಆತನನ್ನು ಹುಡುಕಿಕೊಡಿ ಎಂದು ತಾಯಿ ಪೊಲೀಸರ ಮುಂದೆ ಕಣ್ಣೀರಿಟ್ಟಿದ್ದೇ ತಡ ಮೃತ ಸೌರಭ್ ಪುತ್ರಿ, ಅಪ್ಪ ಡ್ರಮ್​ನಲ್ಲಿ ಇದ್ದಾರೆ ಎಂದು ಸುಳಿವು ನೀಡಿದ್ದಳು. ಆದರೆ, ಆ ಕ್ಷಣಕ್ಕೆ ಇದು ಉಪಯೋಗವಾಗಲಿಲ್ಲ. ಕಾರಣ, ಬಾಲಕಿ ತಮಾಷೆ ಮಾಡುತ್ತಿದ್ದಾಳೆ ಎಂದು ಮನೆಯವರು ಅಂದುಕೊಂಡಿದ್ದರು.

ಮಾಟ ಮಂತ್ರ, ವಶೀಕರಣ ಸೇರಿದಂತೆ ಇತರೆ ಕೆಲಸಗಳನ್ನು ಮಾಡುತ್ತಿದ್ದ ಪ್ರಿಯಕರ ಸಾಹಿಲ್ ಜತೆಗಿನ ಅನೈತಿಕ ಸಂಬಂಧವನ್ನು ಮುಂದುವರಿಸಲು ಮುಸ್ಕಾನ್​, ಆತನ ಜತೆಗೂಡಿ ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದ ಪತಿ ಸೌರಭ್ ರಜಪೂತ್​ನನ್ನು ಮಾರ್ಚ್ 4ರಂದು ಕೊಲೆಗೈದು, 15 ತುಂಡು ಮಾಡಿ, ಡ್ರಮ್​ನಲ್ಲಿ ಸಿಮೆಂಟ್ ಹಾಕಿ ಮುಚ್ಚಿಟ್ಟಿದ್ದಳು. ತನಿಖೆ ಮೂಲಕ ಪ್ರಕರಣವನ್ನು ಬೆಳಕಿಗೆ ತಂದ ಪೊಲೀಸರು, ಸಾಹಿಲ್ ಮತ್ತು ಮುಸ್ಕಾನ್​ಳನ್ನು ಬಂಧಿಸಿ, ಪ್ರಸ್ತುತ ವಿಚಾರಣೆಗೆ ಒಳಪಡಿಸಿದ್ದಾರೆ.

"ಪತಿಯನ್ನು ಕೊಲೆಗೈದು ಪ್ರಿಯಕರನ ಜತೆಗೆ ಮುಸ್ಕಾನ್ ಪ್ರವಾಸ ಹೋಗಿದ್ದಳು. ಮನೆಗೆ ಹಿಂತಿರುಗಿದಾಗ ಮನೆ ಮಾಲೀಕರು ಮಗ ಮತ್ತು ಸೊಸೆಯಿದ್ದ ಕೊಠಡಿಯನ್ನು ತೆರವುಗೊಳಿಸಲು ಹೇಳಿದ್ದರು. ಅಂತೆಯೇ ನಾವು ಅಲ್ಲೇ ಇದ್ದ ಡ್ರಮ್​ ತೆರೆವುಗೊಳಿಸಲು ಕಾರ್ಮಿಕರಿಗೆ ಹೇಳಿದೆವು. ಅವರು ಎಷ್ಟೇ ಪ್ರಯತ್ನಿಸಿದರೂ ಡ್ರಮ್​ ಎತ್ತಲು ಆಗಲಿಲ್ಲ. ಕಾರಣ ಅದು ತುಂಬ ಭಾರವಾಗಿತ್ತು. ಇದರಲ್ಲೇನಿದೆ ಎಂದು ಮುಸ್ಕಾನ್​ಗೆ ಕೇಳಿದ್ರೆ, ಕಸ ಇದೆ ಅಷ್ಟೇ ಎಂದಳು. ನಂತರ ಅದನ್ನು ಒಡೆದು ನೋಡಿದಾಗ ಅದರಲ್ಲಿ ಪುತ್ರನ ದೇಹದ ಭಾಗಗಳು ಸಿಮೆಂಟ್​ನಲ್ಲಿ ಮುಚ್ಚಿಹೋಗಿತ್ತು" ಎಂದು ರೇಣು ದೇವಿ ಹೇಳಿದ್ದಾರೆ.

ಮಗನನ್ನು ಕಳೆದುಕೊಂಡ ತಾಯಿ ರೇಣು ದೇವಿ, "ಸೌರಭ್​ ಕೊಲೆ ಬಗ್ಗೆ ಮುಸ್ಕಾನ್ ಪೋಷಕರಿಗೆ ಮೊದಲೇ ಗೊತ್ತಿತ್ತು. ಆದರೂ, ಏನೂ ಮಾತನಾಡಿಲ್ಲ. ಅಪರಾಧವನ್ನು ಮುಚ್ಚಿಹಾಕುವ ಮತ್ತು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಮುಸ್ಕಾನ್, ಆಕೆಯ ಕುಟುಂಬಸ್ಥರು ಮತ್ತು ಪ್ರಿಯಕರನಿಗೆ ಅತ್ಯಂತ ಕಠಿಣ ಶಿಕ್ಷೆ ವಿಧಿಸಿ. ಅವರನ್ನೆಲ್ಲ ಗಲ್ಲಿಗೇರಿಸಿ" ಎಂದು ಗೋಳಾಡಿದರು,(ಏಜೆನ್ಸೀಸ್).