ತೈಲ ನಿಕ್ಷೇಪದಿಂದಲೇ ಶ್ರೀಮಂತವಾದ ಕೊಲ್ಲಿ ರಾಷ್ಟ್ರಗಳಲ್ಲಿ ಕರೊನಾ ಕಂಟಕಪ್ರಾಯವಾಗಿ ಪರಿಣಮಿಸಿದ್ದು, ಅಲ್ಲಿನ ಶ್ರೀಮಂತಿಕೆಯ ಗತ್ತು ಇಳಿಯುತ್ತಿದೆ. ನಿರುದ್ಯೋಗದ ಸಮಸ್ಯೆಯೂ ಹೆಚ್ಚಳವಾಗಿರುವುದು ಸೌದಿ ದೊರೆಗಳಿಗೆ ತಲೆನೋವಾಗಿ ಪರಿಣಮಿಸಿದೆ. ಕರೊನಾದಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಇರುವ ಕಾರಣ ವಾಹನಗಳ ಸಂಚಾರ ಗಣನೀಯವಾಗಿ ತಗ್ಗಿದೆ. ಇದರಿಂದ ತೈಲ ಬೇಡಿಕೆ ಇಳಿಕೆಯಾಗಿದೆ. ಬೇಡಿಕೆಯೇ ಇಲ್ಲದೆ ದರ ಕುಸಿಯುವ ಜತೆಗೆ, ವ್ಯಾಪಾರವೂ ಕುಸಿದಿದೆ. ಇವೆಲ್ಲ ಕಾರಣದಿಂದ ಸೌದಿ ಅರೇಬಿಯಾ ಶ್ರೀಮಂತಿಕೆ ಕರಗುವ ಜತೆಗೆ ಸರ್ಕಾರಕ್ಕೆ ವರಮಾನ ಇಲ್ಲದಂತಾಗಿದೆ. ಕೆಲಸ ಕಳೆದುಕೊಂಡಿರುವ ವಿದೇಶಿ ನೌಕರರು ಕೊಲ್ಲಿ ದೇಶಗಳಿಗೆ ಹೊರೆಯಾಗಿದ್ದು, ಅವರನ್ನು ಆದಷ್ಟು ಬೇಗ ಸ್ವದೇಶಕ್ಕೆ ಕಳಿಸುವ ಕಾರ್ಯ ಚುರುಕಾಗಿ ನಡೆಯುತ್ತಿದೆ.
ಆದಾಯ ಹೆಚ್ಚಿಸಿಕೊಳ್ಳಲು ಸೌದಿ ಅರೇಬಿಯಾ ವ್ಯಾಟ್ನ್ನು ತ್ರಿಗುಣಗೊಳಿಸಿದ್ದು, ಇದು ಜುಲೈನಿಂದ ಜಾರಿಗೆ ಬರಲಿದೆ ಎಂದು ರಾಜಾಡಳಿತ ಘೋಷಿಸಿದೆ. ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ ಮಾಸಿಕ ಭತ್ಯೆಯನ್ನು ಜೂನ್ನಿಂದ ನಿಲ್ಲಿಸಲಾಗಿದೆ. ವ್ಯಾಟ್ ಹೆಚ್ಚಳದಿಂದ ಜನರ ನಿತ್ಯದ ಜೀವನ ಕಷ್ಟಕ್ಕೆ ಸಿಲುಕಿಕೊಳ್ಳಲಿದೆ. ಆಹಾರ, ನೀರು, ವಿದ್ಯುತ್ ದುಬಾರಿಯಾಗಲಿದೆ. ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಉದಾರವಾಗಿ ಸಹಾಯ ಮಾಡುತ್ತಿದ್ದ ಯುವ ರಾಜ ಮೊಹಮ್ಮದ್ ಬಿನ್ ಸಲ್ಮಾನ್, ಸಬ್ಸಿಡಿಗಳನ್ನು ತಡೆಹಿಡಿದಿದ್ದಾರೆ. ಬಡ್ಡಿ ರಹಿತವಾಗಿ ನೀಡಲಾಗುತ್ತಿದ್ದ ಗೃಹ ಸಾಲ ಇಲ್ಲವಾಗಿದೆ. ತೈಲ ಬಾವಿಗಳ ಒಡೆಯರಾದ ಶೇಖ್ಗಳ ಶ್ರೀಮಂತಿಕೆಯನ್ನು ಕರೊನಾ ಅಲ್ಲಾಡಿಸಿದೆ. ತೈಲ ಮಾರಾಟದಿಂದ ಒಂದೆರಡು ದಶಕದಲ್ಲಿ ಮಾಡಿಕೊಂಡಿದ್ದ ಇಡಿಗಂಟು ಈಗ ಕರಗುತ್ತಿದೆ. ಸೌದಿಯ ಅತಿದೊಡ್ಡ ತೈಲ ಅರಾಮ್ಕೊ ಕಂಪನಿ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೖೆಮಾಸಿಕದಲ್ಲಿ ಶೇ. 25 ನಷ್ಟ ಅನುಭವಿಸಿದೆ.
ಇದನ್ನೂ ಓದಿ: ಪಾಕ್ ನಾಯಕನಿಗೆ ಇಂಗ್ಲಿಷ್ ಕಲಿಯುವಂತೆ ಸಲಹೆ
2003ರಿಂದ 2014ರ ಹತ್ತು ವರ್ಷ ಸೌದಿ ಅರೇಬಿಯಾದ ಇತಿಹಾಸದಲ್ಲೇ ಸುವರ್ಣ ಯುಗ. ತೈಲ ಮಾರಾಟದಿಂದ ಸೌದಿ ಅರೇಬಿಯಾ ಹಿಂದೆಂದೂ ಗಳಿಸದಷ್ಟು ಸಂಪತ್ತು ಸಂಪಾದಿಸಿತು ಎಂದು ತೈಲೋದ್ಯಮದ ತಜ್ಞರು ಹೇಳಿದ್ದಾರೆ.
ದರ ಸಮರ ತಂದ ಕುತ್ತು
2015ರಿಂದ 2020ರ ಆರಂಭದವರೆಗೂ ಕಚ್ಚಾತೈಲ ಬೆಲೆಯ ಸರಾಸರಿ ದರ ಪ್ರತಿ ಬ್ಯಾರೆಲ್ಗೆ 50 ಡಾಲರ್ನ ಆಸುಪಾಸಿನಲ್ಲಿತ್ತು. ಆದರೆ ಕರೊನಾ ಹೊಡೆತಕ್ಕೆ ಸಿಕ್ಕು ಬೆಲೆ ದಾಖಲೆಯ ಶೂನ್ಯ ಮಟ್ಟಕ್ಕೂ ಕುಸಿದು ಈಗ ಪ್ರತಿ ಬ್ಯಾರೆಲ್ಗೆ ಸುಮಾರು 29 ಡಾಲರ್ಗೆ ಬಂದು ನಿಂತಿದೆ. ಅಮೆರಿಕದ ತೈಲ ಮಾರುಕಟ್ಟೆಯಲ್ಲಿ ಕಳೆದ ಏಪ್ರಿಲ್ನ ಫ್ಯೂಚರ್ ವಹಿವಾಟಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ ದರ ಶೂನ್ಯಕ್ಕಿಂತ ಕೆಳಗೆ ಇಳಿದಿತ್ತು. ಅಮೆರಿಕದ ತೈಲ ಮಾರುಕಟ್ಟೆಯ ಮಾನದಂಡ ದರವಾದ ವೆಸ್ಟ್ ಟೆಕ್ಸಾಸ್ ಇಂಟರ್ವಿುೕಡಿಯೆಟ್ನ (ಡಬ್ಲ್ಯೂಟಿಇ) ಏಷ್ಯಾದ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಬೆಲೆ ಮೈನಸ್ 37.63 ಡಾಲರ್ಗೆ ತಗ್ಗಿ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಆತಂಕ ಸೃಷ್ಟಿಸಿತ್ತು.
ಇದನ್ನೂ ಓದಿ: ವಲಸೆ ಕಾರ್ಮಿಕರ ಸುಗಮ ಸಂಚಾರಕ್ಕೆ ಕೇಂದ್ರದ ಹೊಸ ಪೋರ್ಟಲ್
ಕುವೈತ್, ಯುಎಇ, ಬಹ್ರೇನ್ ಇನ್ನಿತರ ದೇಶಗಳಲ್ಲೂ ಸೌದಿ ರೀತಿಯ ಪರಿಸ್ಥಿತಿಯೇ ಇದೆ. ಕಠಿಣ ಕ್ರಮಕ್ಕೆ ಈ ದೇಶಗಳೂ ಮುಂದಾಗಿವೆ. ಸ್ಥಳೀಯರಿಗೆ ಉದ್ಯೋಗದಲ್ಲಿ ಆದ್ಯತೆ ಎಂದು ಕುವೈತ್ ಘೋಷಿಸಿದೆ. ವಿದೇಶಿಗರನ್ನು ಬೇಗ ಕರೆಯಿಸಿಕೊಳ್ಳುವಂತೆ ಅದು ವಿವಿಧ ರಾಷ್ಟ್ರಗಳ ರಾಯಭಾರ ಕಚೇರಿಗೆ ಮನವಿ ಮಾಡಿದೆ. ಯುಎಇಯಲ್ಲೂ ಇದೇ ರೀತಿಯ ನಿರ್ಧಾರವನ್ನು ಆಡಳಿತ ಕೈಗೊಂಡಿದೆ.