ನ್ಯೂಸ್

ಒಂದಲ್ಲ.. ಎರಡಲ್ಲ.. ಬರೋಬ್ಬರಿ 542 ಕೆ.ಜಿ ತೂಕ ಇಳಿಸಿಕೊಂಡ ವ್ಯಕ್ತಿ..! ಅನ್​ಬಿಲಿವಬಲ್​​ ಇಂಟ್ರೆಸ್ಟಿಂಗ್ ಕಹಾನಿ

ನವದೆಹಲಿ: ವಿಶ್ವದಲ್ಲಿ ಜೀವಂತವಿರುವ ಅತಿ ಹೆಚ್ಚು ತೂಕದ ವ್ಯಕ್ತಿ ಎಂದೇ ಖ್ಯಾತರಾಗಿದ್ದ ಖಾಲಿದ್ ಬಿನ್ ಮೊಹೆನ್ಸ್ ಶಾರಿ ಬರೋಬ್ಬರಿ 542 ಕೆಜಿ ತೂಕವನ್ನ ಇಳಿಸಿಕೊಳ್ಳುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ವಿಪರೀತ ತೂಕದಿಂದ ಮೇಲೆಳಲು ಆಗದ ಸ್ಥಿತಿಯಲ್ಲಿದ್ದ ಖಾಲಿದ್ ಕಳೆದ ಕೆಲ ವರ್ಷಗಳಿಂದ ಹಾಸಿಗೆ ಹಿಡಿದಿದ್ದ. ಇದೀಗ ಸೌದಿ ಅರೇಬಿಯಾದ ದೊರೆ ಅಬ್ದುಲ್ಲಾ ಅವರ ನೆರವಿನಿಂದ ಖಾಲಿದ್ ಎಲ್ಲರಂತೆ ಓಡಾಡುವ ಸ್ಥಿತಿಗೆ ಬಂದಿದ್ದಾನೆ.

2013ರಲ್ಲಿ ಜೀವಕ್ಕೆ ಮಾರಕವಾಗುವಂತೆ 610 ಕೆಜಿ ತೂಕ ಹೊಂದಿದ್ದ ಖಾಲಿದ್ ಇದೀಗ 63.5 ಕೆ.ಜಿಗೆ ತೂಕ ಇಳಿಸಿಕೊಂಡಿದ್ದಾನೆ. 3 ವರ್ಷಗಳ ಕಾಲ ಹಾಸಿಗೆ ಬಿಟ್ಟು ಮೇಲೆ ಏಳಲಾಗದ ಸ್ಥಿತಿಯಲ್ಲಿದ್ದ ಖಾಲಿದ್ ತನ್ನ ದೈನಂದಿನ ಚಟುವಟಿಕೆಗಳಿಗೆ ಕುಟುಂಬಸ್ಥರು ಹಾಗೂ ಸ್ನೇಹಿತರನ್ನೇ ಅವಲಂಭಿಸಿದ್ದ. ಅಲ್ಲದೆ ದಿನೇ ದಿನೇ ಖಾಲಿದ್ ಆರೋಗ್ಯ ಸ್ಥಿತಿಯೂ ಹದಗೆಡತೊಡಗಿತ್ತು. ಈ ಸಂದರ್ಭದಲ್ಲಿ ಖಾಲಿದ್ ಕುಟುಂಬಸ್ಥರು ಸೌದಿ ದೊರೆ ಅಬ್ದುಲ್ಲಾ ಅವರ ಮೊರೆ ಹೋಗಿದ್ದಾರೆ.

ಖಾಲಿದ್​​ನ ಸ್ಥಿತಿಯನ್ನು ನೋಡಿ ಮರುಗಿದ ಸೌದಿ ದೊರೆ ಯಾವುದೇ ವೆಚ್ಚವಿಲ್ಲದೆ ಉನ್ನತ ಮಟ್ಟದ ವೈದ್ಯಕೀಯ ವ್ಯವಸ್ಥೆಯನ್ನು ಕಲ್ಪಿಸಿದರು. ಖಾಲಿದ್​​ನನ್ನು ಫೋರ್ಕ್ ಲಿಫ್ಟ್​ ಮೂಲಕ ಜಝಾನ್​​ನಲ್ಲಿರುವ ಮನೆಯಿಂದ ಖಾಲಿದ್​ ನನ್ನು ರಿಯಾದ್​ನ ಕಿಂಗ್ ಫಹಾದ್ ಮೆಡಿಕಲ್​ ಸಿಟಿಗೆ ಸ್ಥಳಾಂತರಿಸಲಾಗಿತ್ತು. ಅಲ್ಲದೆ ಆತನಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹಾಸಿಗೆಯನ್ನೂ ಸಹ ಸಿದ್ಧಪಡಿಸಲಾಗಿತ್ತು. 30 ವೃತ್ತಿಪರ ವೈದ್ಯಕೀಯ ಸಿಬ್ಬಂದಿ ಕಠಿಣ ಚಿಕಿತ್ಸೆ ಮತ್ತು ಆಹಾರ ಪಥ್ಯಕ್ರಮ ಸಿದ್ಧಪಡಿಸಿ ಖಾಲಿದ್​ಗೆ ಚಿಕಿತ್ಸೆ ಕೊಡಲು ಆರಂಭಿಸಿದರು.

ಪ್ರಪಂಚದ ಜೀವಂತವಿರುವ ಎರಡನೇಯ ಅತಿ ತೂಕದ ವ್ಯಕ್ತಿ ಎಂಬ ಕುಖ್ಯಾತಿಗೆ ಪಾತ್ರನಾಗಿದ್ದ ಖಾಲಿದ್ ಬಿನ್ ಮೊಹೆನ್ಸ್ ಶಾರಿ ಇದೀಗ ಗಮನಾರ್ಹ ಪರಿವರ್ತನೆಯನ್ನು ಕಂಡಿದ್ದಾನೆ. ಇಂದು ‘ಸ್ಮೈಲಿಂಗ್ ಮ್ಯಾನ್’’ ಎಂದು ಪ್ರಖ್ಯಾತನಾಗಿರುವ ಖಾಲಿದ್​​ ಒಂದೇ ಒಂದು ವರ್ಷದಲ್ಲಿ ಬರೋಬ್ಬರಿ 542 ಕೆ.ಜಿ ಇಳಿಸಿಕೊಳ್ಳುವ ಮೂಲಕ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಸಾಬೀತುಪಡಿಸಿದ್ದಾನೆ. ಖಾಲಿದ್​ಗೆ ವೈದ್ಯರು ಹೆಚ್ಚುವರಿ ಚರ್ಮವನ್ನು ತೆಗೆಯುವ ಹಲವಾರು ಸರ್ಜರಿಗಳನ್ನು ನಡೆಸಿದ್ದರು. ಇದೀಗ ಆತನ ದೇಹದ ತೂಕ ಈಗ ಆರೋಗ್ಯಕರ 63.5 ಕೆ.ಜಿಗೆ ಇಳಿದಿದೆ.

ಖಾಲಿದ್ 542 ಕೆ.ಜಿ ತೂಕ ಇಳಿಸಿದ್ದು ಹೇಗೆ..?

ಗ್ಯಾಸ್ಟ್ರಿಕ್​ ಬೈಪಾಸ್ ಸರ್ಜರಿ, ನಿರ್ದಿಷ್ಟವಾಗಿ ರೂಪಿಸಿದ ಆಹಾರ ಪಥ್ಯಕ್ರಮ ಹಾಗೂ ವ್ಯಾಯಾಮಗಳನ್ನು ಖಾಲಿದ್​​ಗಾಗಿ ಪ್ಲ್ಯಾನ್​ ಮಾಡಲಾಗಿತ್ತು. ಫಿಸಿಯೋಥೆರಪಿ ಸೆಷನ್​ ಮೂಲಕ ಖಾಲಿದ್ ತನ್ನ ಚಲನಶೀಲತೆಯನ್ನು ಮರಳಿ ಪಡೆಯಲು ನೆರವಾಗುವಂತೆ ಯೋಜನೆ ರೂಪಿಸಲಾಯಿತು. ಮಧ್ಯಪ್ರಾಚ್ಯದ ವಿಜ್ಞಾನಿಗಳ ಸಹಾಯದೊಂದಿಗೆ 610 ಕೆ.ಜಿಯಷ್ಟು ತೂಕವಿದ್ದ ಖಾಲಿದ್ ಇದೀಗ 63.5 ಕೆ.ಜಿಗೆ ಅಂದರೆ ಬರೋಬ್ಬರಿ 542 ಕೆ.ಜಿ ತೂಕ ಇಳಿಸಿಕೊಂಡಿದ್ದಾನೆ.(ಏಜೆನ್ಸೀಸ್​​)