ನ್ಯೂಸ್

ಹಾಥರಸ್​ ಕಾಲ್ತುಳಿತ ಪ್ರಕರಣ; 6 ಮಂದಿ ಆಯೋಜಕರು ಅರೆಸ್ಟ್​, ಪ್ರಮುಖ ಆರೋಪಿ ಪತ್ತೆಗೆ ಭರ್ಜರಿ ಗಿಫ್ಟ್​ ಘೋಷಿಸಿದ ಪೊಲೀಸರು

ಹಾಥರಸ್​: ಜುಲೈ 02ರಂದು ಉತ್ತರಪ್ರದೇಶದ ಹಾಥರಸ್​ನಲ್ಲಿ ಸಂಭವಿಸಿದ ಭಿಕರ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ವಶಕ್ಕೆ ಪಡೆದಿದ್ದು, ಪ್ರಕರಣದ ಪ್ರಮುಖ ಆರೋಪಿಯನ್ನು ಹುಡುಕಿಕೊಟ್ಟವರಿಗೆ 1 ಲಕ್ಷ ರೂ. ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಐಜಿ ಶಲಭ್​ ಮಾಥುರ್, ಘಟನೆಗೆ ಸಂಬಂಧಿಸಿದಂತೆ ಆರು ಮಂದಿ ಸ್ವಯಂ ಸೇವಕರನ್ನು ವಶಕ್ಕೆ ಪಡೆಯಲಾಗಿದ್ದು, ಪ್ರಮುಖ ಆರೋಪಿ ಪ್ರಕಾಶ್ ಮಧುಕರ್ ಬಂಧನಕ್ಕೆ ₹1 ಲಕ್ಷ ಬಹುಮಾನ ಘೋಷಿಸಲಾಗಿದೆ. ಶೀಘ್ರದಲ್ಲೇ ಆತನ ವಿರುದ್ಧ ಬಂಧನ ರಹಿತ ವಾರೆಂಟ್​ಅನ್ನು ಜಾರಿಗೊಳಿಸಲಾಗುವುದು.

ನಾವು ಆರೋಪಿಗಳ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದೇವೆ. ಸತ್ಸಂಗದ ಸ್ವಯಂಸೇವಕರು ಸತ್ಸಂಗ ಮುಗಿದ ನಂತರ ಜನಸಂದಣಿಯನ್ನು ನಿಭಾಯಿಸುವಾಗ ನಿರ್ಲಕ್ಷ್ಯ ತೋರಿದ್ದಾರೆ. ವಿಷಯಗಳು ಕೈ ಮೀರುತ್ತಿದ್ದಂತೆ, ಅವರು ಪರಾರಿಯಾಗಿದ್ದಾರೆ. ಘಟನೆಯ ಹಿಂದೆ ಪಿತೂರಿ ಇದೆಯೇ ಎಂಬುದರ ಕುರಿತು ತನಿಖೆ ಮಾಡಲಾಗುತ್ತಿದೆ. ಆಯೋಜಕರು ಭದ್ರತೆಗಾಗಿ ಬೌನ್ಸರ್​ಗಳನ್ನು ನೇಮಿಸಿದ್ದರು. ಪೊಲೀಸರನ್ನು ಒಳಬಿಡಲಿಲ್ಲ ಎಂಬ ಬಗ್ಗೆ ಆರೋಪಗಳು ಕೇಳಿ ಬಂದಿದೆ. ಈ ವಿಚಾರವಾಗಿಯೂ ತನಿಖೆ ನಡೆಯುತ್ತಿದೆ.

ಎಫ್‌ಐಆರ್‌ನಲ್ಲಿ ಭೋಲೆ ಬಾಬಾ ಅವರ ಹೆಸರನ್ನು ಉಲ್ಲೇಖಿಸಲಾಗಿಲ್ಲ ಏಕೆಂದರೆ ಅವರ ಹೆಸರಿನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಅನುಮತಿ ಕೇಳಿರಲಿಲ್ಲ. ಅಗತ್ಯವಿದ್ದಲ್ಲಿ ಭೋಲೆ ಬಾಬಾನನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ತನಿಖೆಯಲ್ಲಿ ಸಿಗುವ ಅಂಶಗಳನ್ನು ಆಧರಿಸಿ ವಿಚಾರಣೆ ನಡೆಸಲಾಗುವುದು ಎಂದು ಐಜಿ ಶಲಭ್​ ಮಾಥುರ್ ತಿಳಿಸಿದ್ದಾರೆ.