ಹುಬ್ಬಳ್ಳಿ: ರಾಜ್ಯ ಕಾಂಗ್ರೆಸ್ನಲ್ಲಿ ಇತ್ತೀಚಿನ ದಿನದಲ್ಲಿ ಬದಲಾವಣೆಯ ಕೂಗು ವ್ಯಾಪಕವಾಗಿ ಕೇಳಿ ಬರುತ್ತಿದ್ದು, ಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಪ್ರಮುಖವಾಗಿ ಆಗ್ರಹ ಕೇಳಿ ಬರುತ್ತಿದೆ. ಇದೀಗ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಮಾತನಾಡಿದ್ದು, ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುವುದರ ಸುಳಿವನ್ನು ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ (Satish Jarkiholi), ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ. ಯಾವಾಗ ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ. ಕೆಪಿಸಿಸಿ ಅಧ್ಯಕ್ಷರನ್ನ ನೇಮಿಸುವ ಅಧಿಕಾರ ನಮಗಿಲ್ಲ, ಅದನ್ನ ಹೈಕಮಾಂಡ್ ನೋಡುತ್ತೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರೇ ಹೇಳಿದ್ದಾರೆ.
ಈಗಾಗಲೇ ದೇಶದ ನಾನಾ ರಾಜ್ಯಗಳ ಪಿಸಿಸಿ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ತಕ್ಷಣ ಮಾಡಲು ಆಗದೆ ಇರಬಹುದು, ಆದ್ರೆ ಆಗೇ ಆಗುತ್ತೆ. ಅವರು ಯಾವಾಗ ಮಾಡ್ತಾರೆ ಎಂಬುದು ಗೊತ್ತಿಲ್ಲ ಕಾದು ನೋಡೋಣ. ನಾನಂತೂ ಯಾವುದೇ ರೀತಿಯ ಆಕಾಂಕ್ಷಿ ಅಲ್ಲಾ, ಸಂಧರ್ಭ ಬಂದಾಗ ನೋಡೋಣ. ನಾನು ಅಧ್ಯಕ್ಷ ಆಗಬೇಕು ಅಂತ ನನ್ನ ಹಿಂಬಾಲಕರು, ಪ್ರಮುಖರು ಇಂಗಿತ ವ್ಯಕ್ತಪಡಿಸಿದ್ದಾರೆ, ಇದು ಸಹಜ ಕೂಡ.
ಬಜೆಟ್ ನಂತರ ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಇದು ನನ್ನ ವ್ಯಾಪ್ತಿಗೆ ಬರಲ್ಲ ಅಂತ ನಾನು ಹೇಳಿದ್ದೇನೆ. ನಾನು ಒಬ್ಬ ಮಂತ್ರಿ ಅಷ್ಟೇ. ಆ ಬಗ್ಗೆ ಚರ್ಚೆ ಮಾಡುವ ಅಧಿಕಾರ ನಮಗಿಲ್ಲ. ಏನೇ ಇದ್ದರು ವರಿಷ್ಟರೆ ಚರ್ಚೆ ಮಾಡಬೇಕು. ಈಗಾಗಲೇ ಸಚಿವರ ಕಾರ್ಯ ವೈಖರಿ ಬಗ್ಗೆ ವರದಿ ತೆಗೆದುಕೊಂಡಿದ್ದಾರೆ. ಯಾವ ಸಚಿವರನ್ನ ತೆಗೆದುಕೊಳ್ಳಬೇಕು, ಕೈ ಬಿಡಬೇಕು ಹಿರಿಯ ನಾಯಕರೇ ನಿರ್ಧಾರ ತಗೋತಾರೆ ಪ್ರೋಗ್ರೆಸ್ ರಿಪೋರ್ಟ್ಅನ್ನ ವರಿಷ್ಟರೇ ನೋಡಿ ತೀರ್ಮಾನ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಹೇಳಿದ್ದಾರೆ.