ನ್ಯೂಸ್

ಸ್ಟೀವನ್ ಸ್ಮಿತ್ ಆಕಳಿಕೆ ಚಿತ್ರ ಟ್ವೀಟಿಸಿ ತಿರುಗೇಟು ಕೊಟ್ಟ ಸರ್ಫ್ರಾಜ್​ ಪತ್ನಿ!

ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಸರ್ಫ್ರಾಜ್​ ಅಹ್ಮದ್ ಇತ್ತೀಚೆಗೆ ಇಂಗ್ಲೆಂಡ್ ಪ್ರವಾಸದ ಟಿ20 ಪಂದ್ಯದ ವೇಳೆ ಆಕಳಿಸುವ ಮೂಲಕ ಟ್ರೋಲ್‌ಗೆ ಒಳಗಾಗಿದ್ದರು. ಈ ಮುನ್ನ ಟೆಸ್ಟ್ ಮತ್ತು ಏಕದಿನ ಪಂದ್ಯದ ವೇಳೆಯೂ ಆಕಳಿಸಿದ್ದ ಅವರು, ಮೂರೂ ಕ್ರಿಕೆಟ್ ಪ್ರಕಾರದ ಪಂದ್ಯದ ವೇಳೆ ಆಕಳಿಸಿದ ಮೊದಲ ಕ್ರಿಕೆಟಿಗ ಎಂದೂ ನೆಟ್ಟಿಗರು ಕಾಲೆಳೆದಿದ್ದರು. ಇದೀಗ ಸರ್ಫ್ರಾಜ್​ ಅಹ್ಮದ್ ಅವರ ಪತ್ನಿ ಖುಷ್‌ಬಕ್ತ್ ರ್ಸ್ರಾಜ್, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಆಕಳಿಸುತ್ತಿರುವ ಚಿತ್ರದೊಂದಿಗೆ ಪತಿಯ ಟೀಕಾಕಾರರಿಗೆ ದಿಟ್ಟ ಉತ್ತರ ನೀಡಿದ್ದಾರೆ.

ಸೌಥಾಂಪ್ಟನ್‌ನಲ್ಲಿ ಶುಕ್ರವಾರ ನಡೆದ ಮೊದಲ ಟಿ20 ಪಂದ್ಯದ ವೇಳೆ ಸ್ಟೀವನ್ ಸ್ಮಿತ್ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತು ಆಕಳಿಸುತ್ತಿರುವುದು ಟಿವಿಯಲ್ಲಿ ನೇರಪ್ರಸಾರವನ್ನೂ ಕಂಡಿತ್ತು. ಇದರ ಚಿತ್ರವನ್ನು ಟ್ವೀಟಿಸಿರುವ ಸರ್ಫ್ರಾಜ್​ ಅಹ್ಮದ್ ಪತ್ನಿ ಖುಷ್‌ಬಕ್ತ್, ‘ಲೆಜೆಂಡ್‌ಗಳು ಹೀಗಿರುತ್ತಾರೆ’ ಎಂದು ಅಡಿಬರಹ ನೀಡಿದ್ದಾರೆ.

ಸರ್ಫ್ರಾಜ್​ ಅಹ್ಮದ್ ಈ ಮುನ್ನ 2019ರ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದೆದುರಿನ ಮಹತ್ವದ ಪಂದ್ಯದ ವೇಳೆ ಆಕಳಿಸುವ ಮೂಲಕ ಭಾರಿ ಟೀಕೆಗಳಿಗೆ ಗುರಿಯಾಗಿದ್ದರು. ಆಗ ಸರ್ಫ್ರಾಜ್​, ಆಕಳಿಸುವುದು ಪಾಪವಲ್ಲ ಎಂದು ಸಮರ್ಥಿಸಿಕೊಂಡಿದ್ದರು.