ನ್ಯೂಸ್

ಸದ್ದಿಲ್ಲದೇ ಒಟಿಟಿಗೆ ಲಗ್ಗೆಯಿಟ್ಟ ರಕ್ಷಿತ್​ ಸಿನಿಮಾ! ಈ ಪ್ಲಾಟ್​ಫಾರ್ಮ್​ನಲ್ಲಿ ನೋಡಿ ಮನು-ಪ್ರಿಯಾ ಪ್ರೇಮಕಥೆ

ಬೆಂಗಳೂರು: ಸ್ಯಾಂಡಲ್​ವುಡ್​​ನ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಮತ್ತು ನಟಿ ರುಕ್ಮಿಣಿ ವಸಂತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಇದೀಗ ಸದ್ದಿಲ್ಲದೇ ಒಟಿಟಿ ಪ್ಲಾಟ್​ಫಾರ್ಮ್​ಗೆ ಎಂಟ್ರಿ ಕೊಟ್ಟಿದೆ. ರಕ್ಷಿತ್​-ರುಕ್ಮಿಣಿ ಪ್ರೇಮಕಥೆಯನ್ನು ಚಿತ್ರಮಂದಿರಗಳಲ್ಲಿ ಕಣ್ತುಂಬಿಕೊಳ್ಳಲಾಗದ ಪ್ರೇಕ್ಷಕರು ಈಗ ಮನೆಯಲ್ಲಿ ಕುಳಿತು ಚಿತ್ರವನ್ನು ವೀಕ್ಷಿಸಬಹುದಾಗಿದೆ.

ಕಳೆದ ಹಲವು ದಿನಗಳಿಂದ ಚಿತ್ರ ಒಟಿಟಿ ಪ್ರವೇಶಿಸಲಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡುತ್ತಿತ್ತು. ಆದ್ರೆ, ಖಚಿತ ಮಾಹಿತಿ ಘೋಷಣೆಯಾಗಿರಲಿಲ್ಲ. ಇದೀಗ ಹಿಂದಿ ಹೊರತುಪಡಿಸಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಸ್ಟ್ರೀಮಿಂಗ್ ಆಗುತ್ತಿದೆ.

ಸೈಡ್​ ಎ ಭಾಗದಲ್ಲಿ ಮನು ಪಾತ್ರದಲ್ಲಿ ರಕ್ಷಿತ್ ಹಾಗೂ ಪ್ರಿಯಾ ಪಾತ್ರದಲ್ಲಿ ರುಕ್ಮಿಣಿ ನೋಡುಗರನ್ನು ತಮ್ಮ ಸಂಭಾಷಣೆಗಿಂತಲೂ ಅಭಿನಯದಿಂದಲೇ ಸೆಳೆದಿದ್ದರು. ಚಿತ್ರದಲ್ಲಿ ಚೈತ್ರಾ ಜೆ. ಆಚಾರ್, ಅವಿನಾಶ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ರಮೇಶ್ ಇಂದಿರಾ, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರ ತಾರಾಗಣವಿದೆ.

ಹೇಮಂತ್ ಎಂ. ರಾವ್ ನಿರ್ದೇಶನದ ಮತ್ತು ಪರಂವಾ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರಕ್ಕೆ ಚರಣ್ ರಾಜ್ ಅವರ ಸಂಗೀತವಿದೆ,(ಏಜೆನ್ಸೀಸ್).