ನ್ಯೂಸ್

ರಾಯಚೂರಿಗೆ ಹೋಗಿ ಸಿಕ್ಕಿಬಿದ್ದ ಮಹಾರಾಯ; ಸ್ಯಾಂಟ್ರೋ ರವಿ ಸುಳಿವು ಸಿಕ್ಕಿದ್ದೇ ಸ್ನೇಹಿತನಿಂದ!

ರಾಯಚೂರು: ಗುಜರಾತ್​ನಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಟ್ರೋ ರವಿ ಅಲಿಯಾಸ್ ಕೆ.ಎಸ್. ಮಂಜುನಾಥ್ ರಾಯಚೂರಿಗೆ ಹೋಗಿ ಸ್ನೇಹಿತನ ಭೇಟಿಯಾಗಿ ಸಿಕ್ಕಿಬಿದ್ದಂತಾಗಿದೆ. ಈತ ರಾಯಚೂರಿಗೆ ಬಂದು ಹೋಗಿದ್ದಕ್ಕೆ ಸಿಕ್ಕ ಚೂರು ಸುಳಿವೇ ಬಂಧನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ರಾಯಚೂರು ಎಸ್​ಪಿ ಬಿ. ನಿಖಿಲ್​ ನಿನ್ನೆ ಸ್ಯಾಂಟ್ರೋ ರವಿ ಆಪ್ತ ಚೇತನ್​ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಹಿನ್ನೆಲೆಯಲ್ಲಿ ರವಿ ಕುರಿತ ಸುಳಿವು ಸಿಕ್ಕಿದೆ. ನಿನ್ನೆ ಮಂತ್ರಾಲಯದಲ್ಲಿ ಚೇತನ್​ನನ್ನು ವಶಕ್ಕೆ ಪಡೆದ ಎಸ್​ಪಿ, ರವಿ ಮಾಹಿತಿ ಕಲೆ ಹಾಕಿದ್ದರು ಎಂಬ ಸಂಗತಿ ಬೆಳಕಿಗೆ ಬಂದಿದೆ. ಅದೇ ಮಾಹಿತಿಯ ಆಧಾರದ ಮೇಲೆ ಇಂದು ಕರ್ನಾಟಕ ಪೊಲೀಸರು ಗುಜರಾತ್​ನಲ್ಲಿ ಸ್ಯಾಂಟ್ರೋ ರವಿಯ ಹೆಡೆಮುರಿ ಕಟ್ಟಿ ಬಂಧಿಸಿದ್ದಾರೆ.

ಮಂತ್ರಾಲಯಕ್ಕೆ ಸ್ಯಾಂಟ್ರೋ ರವಿ ಹಾಗೂ ಆಪ್ತ ಚೇತನ್​ ಬಂದು ಹೋಗಿದ್ದ ಮಾಹಿತಿಯನ್ನು ಎಸ್​ಪಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದ್ದರು. ಸ್ಯಾಂಟ್ರೋ ರವಿ ಬಂಧನದಲ್ಲಿ ಪ್ರಮುಖ ಪಾತ್ರ ವಹಿಸಿದ ಎಸ್​ಪಿ ನಿಖಿಲ್ ಬಗ್ಗೆ ಎಡಿಜಿಪಿ ಅಲೋಕ್​ಕುಮಾರ್ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಕಣ್ತಪ್ಪಿಸಿ ಮಂತ್ರಾಲಯಕ್ಕೆ ಬಂದು ಹೋಗಿರೋ ಸ್ಯಾಂಟ್ರೋ ರವಿ, ಮೊಬೈಲ್​ಫೋನ್​ ಸ್ವಿಚ್ಡ್​ ಆಫ್​ ಮಾಡಿಕೊಂಡು ಗೌಪ್ಯವಾಗಿ ರಾಯರ ದರ್ಶನ ಪಡೆದು, ರಾತ್ರಿ ಮಂತ್ರಾಲಯದಲ್ಲೇ ವಾಸ್ತವ್ಯ ಮಾಡಿದ್ದ ಎನ್ನಲಾಗುತ್ತಿದೆ. ಪೊಲೀಸರ ಶೋಧ ತೀವ್ರವಾಗಿರುವುದನ್ನು ಅರಿತು ಮಂತ್ರಾಲಯದಿಂದ ಕಾಲ್ಕಿತ್ತಿದ್ದ ಸ್ಯಾಂಟ್ರೋ ರವಿ, ಗುಜರಾತ್​ನಲ್ಲಿ ಸಿಕ್ಕಿಹಾಕಿಕೊಂಡಿದ್ದ.