ನ್ಯೂಸ್

ಸಿಎಂ ರಾಜೀನಾಮೆ ಏಕೆ ಕೊಡಬೇಕು? ಸಚಿವ ಸಂತೋಷ್​ ಲಾಡ್​ ಪ್ರತಿಕ್ರಿಯೆ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದ ಮುಡಾ ನಿವೇಶನದ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ರಾಜಕೀಯದಲ್ಲಿ ದೊಡ್ಡ ಕೋಲಾಹಲವೇ ಸೃಷ್ಟಿಯಾಗಿದ್ದು, ಮುಡಾ ಸೈಟು ಹಂಚಿಕೆ ಪ್ರಕರಣದಲ್ಲಿ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡುತ್ತಿದ್ದಂತೆ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವಅರ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಪ್ರಾಸಿಕ್ಯೂಷನ್​ಗೆ ಅನುಮತಿ ಸಿಕ್ಕಿದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಗಳ ಕುರ್ಚಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಸದ್ಯ ಇದೆಲ್ಲಾ ಬಿಜೆಪಿ ಪಿತೂರಿ ಎಂದು ಆರೋಪಿಸಿ, ರಾಜ್ಯದ ನಾನಾ ಜಿಲ್ಲೆಗಳಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಕೈ ಕಾರ್ಯಕರ್ತರು, 'ಷಡ್ಯಂತ್ರಕ್ಕೆ ಸವಾಲ್' ಎಂಬ ಹೆಸರಿನಲ್ಲಿ ಧರಣಿ ನಡೆಸುತ್ತಿದ್ದಾರೆ.

ಇನ್ನು ಸಿಎಂ ರಾಜೀನಾಮೆ ಏಕೆ ಎಂದು ಪ್ರಶ್ನಿಸಿ ಮಾತನಾಡಿದ ಸಚಿವ ಸಂತೋಷ್ ಲಾಡ್​, "ಈ ಪ್ರತಿಭಟನೆ ಮಾಡವಂತದ್ದು ಯಾಕೆ ಅಂತ? ಈ ದೇಶದಲ್ಲಿ ಒಬ್ಬ ಹಿಂದುಳಿದ ಅಹಿಂದ ನಾಯಕನನ್ನು ತುಳಿಯುವ ಬಿಜೆಪಿಯವರ ಕುತಂತ್ರವೇನಿದೆಯೋ, ಇದು ರಾಜಕೀಯ ಪ್ರೇರಿತ. ನಾವು ಕೂಡ ಇದನ್ನು ರಾಜಕೀಯವಾಗಿಯೇ ಮಾಡಬೇಕಾಗುತ್ತದೆ" ಎಂದರು.

"ತಮ್ಮೆಲ್ಲರಿಗೂ ಗೊತ್ತಿರುವಂತೆ ಇದು ಯಾವ ಆಧಾರದ ಮೇಲೆ ಅವರು ಪ್ರಾಸಿಕ್ಯೂಷನ್​ಗೆ ಅನುಮತಿ ನೀಡಿದ್ದಾರೆ ಎಂಬುದು ಇದೀಗ ಜಗಜಾಹಿರಾಗಿದೆ. ಹೀಗಾಗಿ ನಾವು ರಾಜಕೀಯವಾಗಿ ಪ್ರತಿಭಟನೆ ಮಾಡಬೇಕು, ಮಾಡ್ತಿದ್ದೀವಿ ಅಷ್ಟೇ. ಒಬ್ಬ ಗವರ್ನರ್​ರನ್ನು ರಾಜಕೀಯವಾಗಿ ಹೇಗೆಲ್ಲಾ ಉಪಯೋಗಿಸಿಕೊಂಡು, ಸಿದ್ದರಾಮಯ್ಯರ ಹೆಸರನ್ನು ಹಾಳು ಮಾಡಲು ಮುಂದಾಗಿದ್ದಾರೆ ಎಂಬುದನ್ನು ಇಡೀ ಕರ್ನಾಟಕ ಜನತೆ ಗಮನಿಸಬೇಕು" ಎಂದು ಹೇಳಿದರು.