ಬೆಂಗಳೂರು: ನಾಡಿನಾದ್ಯಂತ ಸುಗ್ಗಿಯ ಹಬ್ಬ ಸಂಕ್ರಾಂತಿ ಸಡಗರ ಮನೆ ಮಾಡಿದೆ. ಇದು ಅಪ್ಪಟ ಗ್ರಾಮೀಣ ಅದರಲ್ಲೂ ರೈತರ ಸಂಗಾತಿಗಳಾದ ದನಕರುಗಳಿಗೆ ಸಂಬಂಧಿಸಿದ್ದು. ಹಳ್ಳಿ, ಪಟ್ಟಣವೆನ್ನದೆ ಎಲ್ಲ ಮನೆಗಳಲ್ಲಿ ಪೊಂಗಲ್(ಸಿಹಿ ಅನ್ನ), ಎಳ್ಳು-ಬೆಲ್ಲ ಕೊಟ್ಟು ಒಳ್ಳೇಯ ಮಾತನಾಡಿ ಎನ್ನುವುದು ಸೇರಿದಂತೆ ಹಬ್ಬದ ಸಂಭ್ರಮ ಮನೆ ಮಾಡಿರುತ್ತದೆ. ಇನ್ನು ಹಳ್ಳಿಗಾಡಿನಲ್ಲಿ ರಾಸುಗಳಿಗೆ ಕಿಚ್ಚು ಹಾಯಿಸುವ ಸಂಪ್ರದಾಯ ತಲತಲಾಂತರದಿಂದ ನಡೆದು ಬಂದಿದ್ದು ವಿವರ ಇಲ್ಲಿದೆ.
ವರ್ಷವಿಡೀ ತಮ್ಮೊಂದಿಗೆ ದುಡಿಯುವ ರಾಸುಗಳಿಗೆ ಬಿಡುವಿನ ದಿನವೇ ಸಂಕ್ರಾಂತಿ. ಮನೆಯವರ ಜತೆಯಲ್ಲಿ ರಾಸುಗಳಿಗೂ ಭರ್ಜರಿ ಸ್ನಾನ. ಕೊಂಬುಗಳಿಗೆ ಬಲೂನು, ಜಡೆಗೆ ಕಟ್ಟುವ ಅಲಂಕಾರಿಕ ವಸ್ತುಗಳನ್ನು ಕಟ್ಟಿ ಮೆರಗು ನೀಡುತ್ತಾರೆ. ಕೆಲವರು ಮೈಮೇಲೆ ಹೊದಿಕೆ ಹೊದಿಸಿ ಹೂವಿನ ಹಾರ ಹಾಕುತ್ತಾರೆ. ನಾಲ್ಕೈದು ತಾಸು ನಿಂತು ಅಣಿಗೊಳಿಸುವ ಆ ರಾಸುಗಳ ಮಿಂಚುವ ಕ್ಷಣಗಳನ್ನು ಕಣ್ತುಂಬಿಕೊಳ್ಳುವುದೇ ಚಂದ. ಕರುಗಳಿಗೂ ಅಲಂಕಾರ ಮಾಡಿ ಸಂತಸ ಪಟ್ಟರೆ, ಕೆಲವರು ಕುರಿ, ಮೇಕೆಗಳಿಗೂ ಹೀಗೆಯೇ ಅಲಂಕಾರ ಮಾಡುವುದೂ ಇದೆ.
ಹಳೇ ಮೈಸೂರು ಭಾಗದಲ್ಲಿ ಮೈಸೂರು, ಮಂಡ್ಯ, ರಾಮನಗರ, ಹಾಸನ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು, ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ಕಿಚ್ಚು ಹಾಯಿಸುವ ಸಂಪ್ರದಾಯ ಸ್ವಲ್ಪ ಹೆಚ್ಚು. ಹಸು, ಹೋರಿ, ಎತ್ತುಗಳಿರುವ ಮನೆಯಲ್ಲಿ ಸಂಕ್ರಾಂತಿ ಸಂಭ್ರಮ ಇನ್ನೂ ಜೋರು. ಮಧ್ಯಾಹ್ನ ಹಬ್ಬದೂಟ ನಂತರ ಅಲಂಕೃತ ಜಾನುವಾರುಗಳನ್ನು ಊರಿನ ದೇವಾಲಯ ಮುಂಭಾಗ ಸೇರಿಸಿ ಕುಂಭ ಪೂಜೆ ನೆರವೇರಿಸುತ್ತಾರೆ. ಬಳಿಕ ಮೆರವಣಿಗೆಯಲ್ಲಿ ಕಾಟಪ್ಪರಾಯನ ಗುಡಿಗೆ ಕರೆದುಕೊಂಡು ಹೋಗಿ, ಮುಸ್ಸಂಜೆಯ ವೇಳೆ ಹುಲ್ಲು, ಸೌದೆಹಾಕಿ ಬೆಂಕಿ ಹಚ್ಚಿ ಅದರ ಮೇಲೆ ಜಾನುವಾರುಗಳನ್ನು ಹಾರುವಂತೆ ಮಾಡಲಾಗುತ್ತದೆ. ಚಳಿಗಾಲದಲ್ಲಿ ತಗುಲಿರಬಹುದಾದ ಚಿಗಟ ಮತ್ತಿತರ ಕ್ರಿಮಿಕೀಟಗಳನ್ನು ದೂರವಾಗಿಸುವ ಉದ್ದೇಶ ಇದರ ಹಿಂದೆ ಇದೆ.
ಕಿಚ್ಚು ಹಾದು ಮನೆಗೆ ಮರಳುವ ರಾಸುಗಳಿಗೆ ಆರತಿ ಬೆಳಗುವ ನಾರಿಯರು, ಪೂಜೆ ಮಾಡಿ ಪ್ರಸಾದ ಕೊಡುತ್ತಾರೆ. ನಂತರ ಮನೆ ಮನೆಗೆ ತೆರಳುವ ಹೆಂಗೆಳೆಯರು ಪರಸ್ಪರ ಎಳ್ಳು–ಬೆಲ್ಲ ವಿನಿಮಯ ಮಾಡಿಕೊಂಡು ಶುಭಾಶಯ ಕೋರುವ ಸಂಪ್ರದಾಯ ಈಗಲೂ ಇದೆ.
ಯಾಂತ್ರೀಕರಣದ ಯುಗದಲ್ಲಿ ರಾಸುಗಳಿಂದ ಕೃಷಿ ಮಾಡುವುದು ದೂರವಾಗುತ್ತಿದ್ದಂತೆ ಹಳ್ಳಿಗಳಲ್ಲಿ ಹಾಲು ಕೊಡುವ ಮಿಶ್ರತಳಿ ರಾಸುಗಳು ಬಂದವು. ಆದರೂ ದೇಸೀ ಜಾನುವಾರು ಪೋಷಿಸುವ ಸಂಸ್ಕೃತಿ ಗಟ್ಟಿಯಾಗಿದೆ. ರಾಸುಗಳೇ ಬಹುತೇಕರಿಗೆ ಸಂಗಾತಿ. ಮನೆ ಮಕ್ಕಳಂತೆ ಅವುಗಳನ್ನು ನೋಡಿಕೊಳ್ಳುವ ಕುಟುಂಬಗಳಿಗೆ ಕಡಿಮೆಯೇನೂ ಇಲ್ಲ.
ಇನ್ನು ಮಕರ ಸಂಕ್ರಾಂತಿ ರಾಜ್ಯದಲ್ಲಷ್ಟೇ ಅಲ್ಲ, ಭಾರತದಾದ್ಯಂತ ಆಚರಿಸಲಾಗುವ ಸುಗ್ಗಿಯ ಹಬ್ಬ. ಕರ್ನಾಟಕ, ಆಂಧ್ರ, ತೆಲಂಗಾಣದಲ್ಲಿ ಸಂಕ್ರಾಂತಿ, ತಮಿಳುನಾಡಿನಲ್ಲಿ ಪೊಂಗಲ್, ಇತರೆ ರಾಜ್ಯಗಳಲ್ಲಿ ವಿಭಿನ್ನ ಹೆಸರುಗಳಿಂದ ಕರೆಯಲಾಗುತ್ತದೆ. ಮೂಲಭೂತವಾಗಿ, ಹಬ್ಬವು ರೈತರು ಸೂರ್ಯ ದೇವರಿಗೆ ಗೌರವವನ್ನು ತೋರಿಸುವುದಾಗಿದೆ.
ಸಂಕ್ರಾಂತಿಯು ಚಳಿಗಾಲದ ಅಂತ್ಯ ಮತ್ತು ಬೇಸಿಗೆಯ ದಿನಗಳ ಆರಂಭವನ್ನು ಸೂಚಿಸುವ ದಿನವಾಗಿದೆ. ಸೂರ್ಯ ಪಥ ಬದಲಾವಣೆಯೊಂದಿಗೆ ತಳುಕು ಹಾಕಿಕೊಂಡಿರುವುದು ಮಕರ ಸಂಕ್ರಾಂತಿಯಾಗಿದೆ. ದಕ್ಷಿಣ ಪಥದಿಂದ ಉತ್ತರಾಯಣಕ್ಕೆ ಸಂಚರಿಸುವ ಪುಣ್ಯಕಾಲವೂ ಇದಾಗಿದೆ. ಮಾಗಿ ಚಳಿ ತಗ್ಗಲಾರಂಭಿಸುವ ಸಮಯವೂ ಇದೇ. ನದಿಗಳಲ್ಲಿ ಉತ್ತರಾಯಣ ಪುಣ್ಯಕಾಲದ ಸ್ನಾನ ಮಾಡುವ ಸಂಪ್ರದಾಯವೂ ಹೌದು.ಫಸಲು ರಾಶಿಯಾಗಿ ಮನೆ ಸೇರುವ ಹೊತ್ತಲ್ಲಿ ರೈತರು ಸಂಭ್ರಮದಿಂದ ಆಚರಿಸುವ ಹಬ್ಬವಿದು.