ನ್ಯೂಸ್

VIDEO| ಸಂಜನಾಗೆ ನಾಯಿ ಕೊಟ್ಟಿದ್ದ ವ್ಯಕ್ತಿಗೂ ಈಗ ಶುರುವಾಯಿತು ಕಂಟಕ!

ಬೆಂಗಳೂರು: ಸ್ಯಾಂಡಲ್‌ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿ ಅವರೊಂದಿಗಿನ ನಂಟು ಬಹಳಷ್ಟು ಜನರನ್ನು ತೊಂದರೆಗೆ ಸಿಲುಕಿಸುತ್ತಿದೆ. ಡ್ರಗ್ಸ್‌ಗೆ ಸಂಬಂಧಿಸಿದಂತೆ ಮಾತ್ರವಲ್ಲದೆ, ಅವರ ಜತೆ ಪಾರ್ಟಿಯಲ್ಲಿ ಪಾಲ್ಗೊಂಡವರು, ಹಣಕಾಸು ವ್ಯವಹಾರ ಹೊಂದಿದ್ದವರು ಕೂಡ ಈಗಾಗಲೇ ಸಿಸಿಬಿ ಪೊಲೀಸರ ವಿಚಾರಣೆ ಎದುರಿಸುವಂತಾಗಿದೆ.

ಈ ನಡುವೆ ಇನ್ನೊಂದು ವಿಚಿತ್ರ ಸುದ್ದಿ ಹೊರಬಿದ್ದಿದೆ. ನಟಿ ಸಂಜನಾ ಜತೆ ಅವರ ಮನೆಯಲ್ಲಿ ನಡೆದ ಪಾರ್ಟಿಗಳಲ್ಲಿ ಸತೀಶ್ ಎಂಬುವವರು ಆಗಾಗ ಪಾಲ್ಗೊಳ್ಳುತ್ತಿದ್ದರು. ಅವರನ್ನು ಪಾರ್ಟಿಗೆ ಸ್ವತಃ ಸಂಜನಾ ಅವರೇ ಆಹ್ವಾನಿಸುತ್ತಿದ್ದರು. ಸಹಜವಾಗಿಯೇ ಪಾರ್ಟಿ ವೇಳೆ ಅಕ್ಕಪಕ್ಕ ನಿಂತು ಫೋಟೋ ತೆಗೆಸಿಕೊಳ್ಳುವುದು ಇದ್ದೇ ಇರುತ್ತದೆಯಲ್ಲವೇ? ಸತೀಶ್ ಕೂಡ ಹಾಗೇ ಮಾಡಿದ್ದರು. ಅದೇ ಫೋಟೊಗಳು ಈಗ ಅವರನ್ನು ಪೊಲೀಸರ ವಿಚಾರಣೆ ಎದುರಿಸುವಂತೆ ಮಾಡಿವೆ!

ವಿಚಾರಣೆ ಎದುರಿಸಿದ ಸತೀಶ್, ತಮಗೂ ಸಂಜನಾಗೂ ಯಾವ ರೀತಿಯ ನಂಟು ಎಂಬುದರ ವಿವರಗಳನ್ನು ಹೊರಹಾಕಿದ್ದಾರೆ. ‘‘ನಟಿ ಸಂಜನಾ ಜತೆಗಿರುವ ನನ್ನ ಫೋಟೋ ನೋಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನನಗೆ ನೋಟಿಸ್ ನೀಡಿದ್ದರು. ಹೀಗಾಗಿ ವಿಚಾರಣೆಗೆ ಹಾಜರಾಗಿದ್ದೆ. ಸಂಜನಾಗೂ ನಿಮಗೂ ಹೇಗೆ ಪರಿಚಯ, ಎಲ್ಲೆಲ್ಲಿ ಪಾರ್ಟಿ ಮಾಡಿದ್ದೀರಿ, ಎಲ್ಲೆಲ್ಲಿ ಸುತ್ತಾಡಿದ್ದೀರಿ ಅಂತ ಪ್ರಶ್ನಿಸಿದರು. ಆಕೆ ಡ್ರಗ್ಸ್ ತೆಗೆದುಕೊಳ್ಳುವುದಿರಲಿ, ನನ್ನ ಜತೆ ಒಂದು ಸಿಗರೇಟ್ ಸಹ ಸೇದಿಲ್ಲ ಅಂತ ಉತ್ತರಿಸಿದ್ದೇನೆ’’ ಎಂದು ವಿವರಿಸಿದರು.

‘‘ಹಾಗಾದರೆ ಸಂಜನಾಗೂ ನಿಮಗೂ ಹೇಗೆ ಅಷ್ಟೊಂದು ಸ್ನೇಹ ಬೆಳೆಯಿತು ಅಂತ ಪೊಲೀಸರು ಕೇಳಿದರು. ನಾನು ಡಾಗ್ ಬ್ರೀಡ್ ಮಾಡುತ್ತೇನೆ. ಹಿಂದೊಮ್ಮೆನನ್ನ ಬಳಿ ಇದ್ದ ಸುಲ್ತಾನ್ ನಾಯಿಯನ್ನು ಸಂಜನಾಗೆ ಕೊಟ್ಟಿದ್ದೆ. ಆಕೆಗೆ ನಾಯಿಗಳೆಂದರೆ ತುಂಬಾ ಪ್ರೀತಿ. ಅದರಿಂದ ನನಗೂ ಆಕೆಗೂ ಪರಿಚಯವಾಯಿತು. ಅದಾದ ಬಳಿಕ ನಾನು ಚೆನ್ನಾಗಿ ನಾನ್‌ವೆಜ್ ಅಡುಗೆ ಮಾಡುತ್ತೇನೆಂಬುದು ಆಕೆಗೆ ಗೊತ್ತಾಗಿ ಅವರ ಮನೆಯಲ್ಲಿ ನಡೆಯುವ ಪಾರ್ಟಿಗಳಿಗೆ ಕರೆಯತೊಡಗಿದರು. ನಾನು ಹೋಗುತ್ತಿದ್ದೆ. ಅದು ಡ್ರಗ್ಸ್ ಪಾರ್ಟಿ ಅಲ್ಲ. ನಾನ್‌ವೆಜ್ ಪಾರ್ಟಿ ಅಷ್ಟೆ, ನನಗೂ ಡ್ರಗ್ಸ್‌ಗೂ ಬಹಳ ದೂರ. ಬೇಕಿದ್ದರೆ ನನ್ನ ಕಾಲ್ ರೆಕಾರ್ಡ್ಸ್ ಚೆಕ್ ಮಾಡಿ ಅಂತ ಪೊಲೀಸರಿಗೆ ಹೇಳಿಬಂದಿದ್ದೇನೆ’’ ಎಂದು ಸತೀಶ್ ಮಾಹಿತಿ ನೀಡಿದರು.