ಬೆಂಗಳೂರು: ಡ್ರಗ್ಸ್ ಪೆಡ್ಲರ್ ರಾಹುಲ್ ಜತೆ ಸ್ಯಾಡಂಲ್ವುಡ್ನ ಬಹುತೇಕ ಸ್ಟಾರ್ಸ್ ಲಿಂಕ್ ಇರೋದು ಗೊತ್ತಾಗುತ್ತಿದೆ. ನಟ-ನಟಿಯರು ರಾಹುಲ್ ಜತೆ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಡ್ರಗ್ಸ್ ಪೆಡ್ಲರ್ ಆಯೋಜಿಸಿದ್ದ ಡಿನ್ನರ್ ಪಾರ್ಟಿಯಲ್ಲಿ ಸಂಗೀತ ನಿರ್ದೇಶಕ ಗುರುಕಿರಣ್, ನಿರ್ಮಾಪಕ ಕೆ.ಮಂಜು ಕೂಡ ಪಾಲ್ಗೊಂಡಿದ್ದರು. ಆ ಫೋಟೋ ಇದೀಗ ವೈರಲ್ ಆಗಿದ್ದು ರಾಹುಲ್ಗೂ ಇವರಿಗೂ ಏನು ಸಂಬಂಧ ಎಂಬ ಪ್ರಶ್ನೆ ಎದ್ದಿದೆ.
ಡ್ರಗ್ಸ್ ಮಾಫಿಯಾದಲ್ಲಿ ಸ್ಯಾಂಡಲ್ವುಡ್ ನಂಟಿನ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಪಟ್ಟಿರುವ ಡ್ರಗ್ಸ್ ಪೆಡ್ಲರ್ ರಾಹುಲ್ ಜತೆ ನಿರ್ಮಾಪಕ ಕೆ. ಮಂಜು ಅವರ ಸಂಪರ್ಕ ಇರುವ ಬಗ್ಗೆ ಪ್ರಸ್ತಾಪವಾಗುತ್ತಿದೆ. ಈ ಬಗ್ಗೆ ದಿಗ್ವಿಜಯ ನ್ಯೂಸ್ ಜತೆ ಮಾತನಾಡಿದ ನಿರ್ಮಾಪಕ ಮಂಜು, ನನಗೆ ರಾಹುಲ್ 15 ವರ್ಷಗಳಿಂದ ಗೊತ್ತು ಎಂದಿದ್ದಾರೆ.
ಪುಟಾಣಿ ಏಜೆಂಟ್ ಸಿನಿಮಾದಿಂದಲೂ ರಾಹುಲ್ ಗೊತ್ತು. ಚಿತ್ರನಟ ರಾಮಕೃಷ್ಣ ಹೆಗಡೆ ಅವರಿಂದ ರಾಹುಲ್ನ ಪರಿಚಯ ಆಗಿತ್ತು. ಕಳೆದ ವರ್ಷ ದಾರಿಯಲ್ಲಿ ಸಿಕ್ಕಿದ್ದ.
ನನ್ನ ಚಿತ್ರರಂಗ ಮತ್ತು ನಿರ್ಮಾಪಕರು ಕ್ಲೀನ್ ಆಗಿದ್ದಾರೆ. ತಪ್ಪಿತಸ್ಥರಿಗೆ ಶಿಕ್ಷೆ ಕೊಡಲು ಕಾನೂನು, ಕೋರ್ಟ್ ಇದೆ. ರಾಹುಲ್ ನಟಿ ಸಂಜನಾರ ರಾಖಿ ಬ್ರದರ್. ಆತನ ಬರ್ತ್ ಡೇ ಪಾರ್ಟಿಯಲ್ಲಿ ಅನ್ಸುತ್ತೆ ನಾವು ಡಿನ್ನರ್ಗೆ ಹೋಗಿದ್ದು. ಆಗ ರಾಹುಲ್ಗೆ ತುತ್ತು ತಿನ್ನಿಸಿದೆ. ರಾಹುಲ್ ಒಳ್ಳೆಯ ಸ್ನೇಹಿತ. ಆದ್ರೆ ಆತನ ವ್ಯವಹಾರ ನನಗೆ ಗೊತ್ತಿಲ್ಲ ಎಂದ ಕೆ. ಮಂಜು, ನೀರವ್ ಮೋದಿ ಮತ್ತು ನರೇಂದ್ರ ಮೋದಿ ಅವರ ಜೊತೆ ಫೋಟೋ ಇದೆ. ಹಾಗಂತ ನರೇಂದ್ರ ಮೋದಿ ಅವರ ತಪ್ಪಾ? ಎಂದು ಮರು ಪ್ರಶ್ನಿಸಿದರು.