ನ್ಯೂಸ್

2017ರಿಂದಲೇ ನಾನು ಗರ್ಭಿಣಿ!; ಶಾಕಿಂಗ್​ ಹೇಳಿಕೆ ಕೊಟ್ಟ ಸಮಂತಾ

ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಸೌತ್​ ಸಿನಿಮಾ ಇಂಡಸ್ಟ್ರಿಯ ಟಾಪ್​ ನಟಿಯರ ಸಾಲಿನಲ್ಲಿದ್ದಾರೆ. ಮದುವೆ ಆದ ಬಳಿಕ ಸಿನಿಮಾ ಅವಕಾಶ ಕಡಿಮೆ ಎಂಬ ಮಾತಿಗೆ ಅಪವಾದ ಎಂಬಂತೆ ಸಾಲು ಸಾಲು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಸಿನಿಮಾ ವಿಚಾರವಾಗಿ ಸುದ್ದಿ ಒಂದೆಡೆಯಾದರೆ, ಮಗು ಪಡೆಯುವಿಕೆ ಬಗ್ಗೆಯೂ ಸಮಂತಾ ಆಗಾಗ ಸುದ್ದಿಯಲ್ಲಿರುತ್ತಾರೆ. ಇದೀಗ ಮತ್ತೆ ಅಂಥದ್ದೇ ಪ್ರಶ್ನೆಯೊಂದಕ್ಕೆ ಸಮಂತಾ ಉತ್ತರಿಸಿದ್ದಾರೆ.

ಮದುವೆ ಆಯಿತು, ಮಗು ಯಾವಾಗ? ಇಂಥ ಪ್ರಶ್ನೆಗಳು ಸಮಂತಾ ಅವರಿಗೆ ಮದುವೆಆದ ಬಳಿಕ ಎದುರಾಗುತ್ತಲೇ ಇದೆ. ಇತ್ತೀಚೆಗೆ ಸೋಷಿಯಲ್​ ಮೀಡಿಯಾದಲ್ಲಿ ನಿಮ್ಮ ಪ್ರಶ್ನೆಗಳಿಗೆ ನಾನು ಉತ್ತರಿಸಲಿದ್ದೇನೆ. ಪ್ರಶ್ನೆ ಕೇಳಬಹುದು ಎಂದಿದ್ದರು. ಹೀಗಿರುವಾಗಲೇ ಅಭಿಮಾನಿಯೊಬ್ಬ ನೀವು ಗರ್ಭಿಣಿಯಾಗಿದ್ದೀರಂತೆ ಹೌದಾ? ಎಂಬ ಪ್ರಶ್ನೆ ಕೇಳಿದ್ದ. ಅದಕ್ಕೆ ಅಷ್ಟೇ ನಯವಾಗಿ ಸಮಂತಾ ಉತ್ತರ ನೀಡಿದ್ದಾರೆ.

‘ನಾನು 2017ರಿಂದಲೇ ಗರ್ಭಿಣಿಯಾಗಿದ್ದೇನೆ. ನನಗನಿಸಿದ ಮಟ್ಟಿಗೆ ಹೊಟ್ಟೆಯಲ್ಲಿರುವ ಮಗುವಿಗೆ ಹೊರಬರಲು ಇಷ್ಟವಿಲ್ಲ ಎಂಬಂತೆ ಕಾಣುತ್ತದೆ’ ಎಂದು ಹಾಸ್ಯಭರಿತ ಉತ್ತರ ನೀಡಿದ್ದಾರೆ. ಅಂದರೆ 2017ರ ಅಕ್ಟೋಬರ್​ನಲ್ಲಿಯೇ ಸಮಂತಾ ಮತ್ತು ನಾಗಚೈತನ್ಯ ಅವರ ಮದುವೆಯಾಗಿತ್ತು. ಡಿಸೆಂಬರ್​ ವೇಳೆಗೆ ಸೋಷಿಯಲ್ ಮೀಡಿಯಾದಲ್ಲಿ ಸಮಂತಾ ಗರ್ಭಿಣಿ ಎಂಬ ಸುದ್ದಿ ಹರಿದಾಡಿತ್ತು. ಇದೀಗ ಆವತ್ತಿನ ಸುದ್ದಿಯನ್ನೇ ಹೇಳಿಕೊಂಡು, 2017ರಿಂದಲೇ ನಾನು ಗರ್ಭಿಣಿ ಎಂದಿದ್ದಾರೆ.

ಸಮಂತಾ ಗರ್ಭಿಣಿಯಾಗಿದ್ದಾರೆಂಬ ವಿಚಾರ ಈಗಾಗಲೇ ಸಾಕಷ್ಟು ಬಾರಿ ಹರಿದಾಡಿದೆ. ಹಾಗೆ ಸುದ್ದಿಯಾದಾಗಲೆಲ್ಲ ಸಮಂತಾ ನಗುತ್ತಲೇ ಉತ್ತರಿಸಿದ್ದಾರೆ. ‘ನಮಗೆ ಮಗು ಯಾವಾಗ ಬೇಕು ಎಂಬುದನ್ನು ನಾವು ನಿರ್ಧರಿಸಿದ್ದೇವೆ. ಆ ದಿನವನ್ನೂ ನಾವು ಈಗಾಗಲೇ ಫಿಕ್ಸ್ ಮಾಡಿದ್ದೇವೆ’ ಎಂದಿದ್ದರು. (ಏಜೆನ್ಸೀಸ್​)