ನ್ಯೂಸ್

ಪೊಲೀಸರ ಸಮ್ಮುಖದಲ್ಲೇ ಬಿಜೆಪಿ ನಾಯಕಿ ಪತಿ ಮೇಲೆ ಹಲ್ಲೆ

ಅಮೇಥಿ: ಪೊಲೀಸರ ಮುಂದೆಯೇ ಸಮಾಜವಾದಿ ಪಕ್ಷದ ಶಾಸಕರೊಬ್ಬರು ಬಿಜೆಪಿ ನಾಯಕಿಯ ಪತಿಗೆ ಥಳಿಸಿರುವ ಘಟನೆ ಉತ್ತರಪ್ರದೇಶದ ಅಮೇಥಿಯಲ್ಲಿ ನಡೆದಿದೆ. ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಶಾಸಕರ ವರ್ತನೆಗೆ ವ್ಯಾಪಕ ಟೀಕೆ ಎದುರಾಗಿದೆ.

ಎಸ್‌ಪಿ ಶಾಸಕ ರಾಕೇಶ್ ಪ್ರತಾಪ್ ಸಿಂಗ್, ಬಿಜೆಪಿ ಮುನ್ಸಿಪಲ್ ಚುನಾವಣಾ ಅಭ್ಯರ್ಥಿ ರಶ್ಮಿ ಸಿಂಗ್ ಅವರ ಪತಿ ದೀಪಕ್ ಸಿಂಗ್ ಅವರನ್ನು ಥಳಿಸಿದ ವಿಡಿಯೋ ಆನ್‌ಲೈನ್​ನಲ್ಲಿ ಹರಿದಾಡುತ್ತಿದೆ. ಮೊದಲೂ ರಾಕೇಶ್ ಸಿಂಗ್​ ದೀಪಕ್​ ಮೇಲೆ ಹಲ್ಲೆ ನಡೆಸಿದ್ದು, ರಾಕೇಶನನ್ನು ಪೊಲೀಸರು ತಡೆಯುವಷ್ಟರಲ್ಲಿ ಆತನ ಬೆಂಬಲಿಗರು ದೀಪಕ್​ ಮೇಲೆ ಮತ್ತೆ ಹಲ್ಲೆ ಮಾಡಿದ್ದಾರೆ.

ಪೊಲೀಸ್​ ಅಧಿಕಾರಿಗಳ ಸಮ್ಮುಖದಲ್ಲೇ ಗೌರಿಗಂಜ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಈ ಘಟನೆ ನಡೆದಿದ್ದು, ಪರಿಸ್ಥಿತಿಯನ್ನು ಶಾಂತಗೊಳಿಸಿದ್ದಾರೆ. ಅಲ್ಲದೇ, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)