ಕಥೆ ಪುಟ್ಟದಾದರೂ ನೀಡುವ ಸಂದೇಶ ಮಾತ್ರ ಬಹಳ ದೊಡ್ಡದು. ‘ಈಶಾವಾಸ್ಯಮಿದಂ ಸರ್ವಂ ಯತ್ ಕಿಂಚ ಜಗತ್ಯಾಂ ಜಗತ್’ ಎಂದು ಈಶಾವಾಸ್ಯೋಪನಿಷತ್ತು ಹೇಳುವಂತೆ ನಮ್ಮಲ್ಲಿರುವ ಎಲ್ಲವೂ ಆ ಭಗವಂತ ಕೊಟ್ಟದ್ದೇ. ನಮ್ಮ ಅಥವಾ ನಮ್ಮ ಹಿರಿಯರ ಪುಣ್ಯದಿಂದ ವಿದ್ಯೆ, ಕೆಲಸ, ಹೆಂಡತಿ-ಮಕ್ಕಳು, ಆರೋಗ್ಯ, ಲೋಕದಲ್ಲಿ ಒಂದು ಸ್ಥಾನ, ಮಾನ, ಶ್ರೀಮಂತಿಕೆ ಎಲ್ಲವನ್ನೂ ಕೊಟ್ಟಿದ್ದಾನೆ ಭಗವಂತ. ದೇವರು ಕೊಟ್ಟಾಗ, ದೇವರು ಕೊಟ್ಟಿದ್ದನ್ನು ದೇವರಿಗೆ ಅರ್ಪಿಸಬೇಕಾದದ್ದು ನಮ್ಮ ಕರ್ತವ್ಯ.
ಯತ್ಕರೋಷಿ ಯದಶ್ನಾಸಿ ಯಜ್ಜುಹೋಸಿ ದದಾಸಿ ಯತ್ |
ಯತ್ತಪಸ್ಯಸಿ ಕೌಂತೇಯ ತತ್ ಕುರುಷ್ವ ಮದರ್ಪಣಮ್ ||
ಎಂಬುದಾಗಿ ಭಗವಂತನೇ ಮಾಡಿದ ಆದೇಶ.
ನಾವೂ ತ್ರಿವಕ್ರರೇ. ದೇಹದಲ್ಲಿ, ಮನಸ್ಸಿನಲ್ಲಿ, ಮಾತಿನಲ್ಲಿ ವಕ್ರತೆ ಇದೆ. ‘ನಾನು ದೊಡ್ಡವ, ನನಗೆ ಸಮಾನರು ಯಾರು? ಎಲ್ಲವೂ ನನ್ನ ಅಧೀನ’ ಇತ್ಯಾದಿ ಅಹಂಕಾರ-ಭ್ರಮೆಗಳು ನಮ್ಮ ಮನಸ್ಸಿನ ವಕ್ರತೆಯಲ್ಲದೆ ಮತ್ತೇನು? ಇನ್ನೊಬ್ಬರಿಗೆ ಮಾಡುವ ಪೀಡೆ-ಮೋಸ ಇವು ದೇಹದ ವಕ್ರತೆ. ಮತ್ತೊಬ್ಬರ ಮನಸ್ಸಿಗೆ
ದುಃಖವಾಗುವಂತೆ ಆಡುವ ಮಾತುಗಳು ಮಾತಿನ ವಕ್ರತೆ. ಹೀಗೆ ನಾವೂ ತ್ರಿವಕ್ರರೇ. ಎಷ್ಟೇ ದುಷ್ಟತನ ಇದ್ದರೂ ಮನಸ್ಸಿನಲ್ಲಿ ಒಂದು ಆಸ್ತಿಕತೆ, ದೇವರಲ್ಲಿ ಭಕ್ತಿ ಅಲ್ಪವಾದರೂ ಇದ್ದೇ ಇರುತ್ತದೆ. ವಿದ್ಯೆ, ಶ್ರೀಮಂತಿಕೆ, ಸ್ಥಾನ-ಮಾನಗಳು ಎಲ್ಲವೂ ದೇವರೇ ಕೊಟ್ಟದ್ದೆಂದು ತಿಳಿದು, ಶ್ರದ್ಧೆಯಿಂದ ನಾವೂ ಎಲ್ಲವನ್ನು ದೇವರಿಗೆ ಸಮರ್ಪಿಸಿದರೆ ಕೃಪಾಳುವಾದ ಭಗವಂತ ತ್ರಿವಕ್ರೆಯನ್ನು ಉದ್ಧರಿಸಿದಂತೆ ನಮ್ಮ ತ್ರಿವಕ್ರತೆಯನ್ನೂ ಕ್ಷಮಿಸಿ ನಮ್ಮನ್ನೂ ಉದ್ಧರಿಸುವುದರಲ್ಲಿ ಸಂದೇಹವೇ ಇಲ್ಲ.
ಭಗವಂತನಲ್ಲಿ ಕರುಣೆ ಇದೆ. ದೇವರಿಗೆ ಸಮರ್ಪಿಸುವ ಸದ್ಭುದ್ಧಿ ನಮಗಿರಬೇಕು ಅಷ್ಟೇ! ಸಮರ್ಪಣೆಯ ಮಾರ್ಗವೇ ನಮ್ಮನ್ನು ಉದ್ಧಾರದತ್ತ ಕೊಂಡೊಯ್ಯಬಲ್ಲದು. ಅಂತರಂಗವನ್ನು ಶುದ್ಧಗೊಳಿಸಬಲ್ಲದು.
(ಲೇಖಕರು ಸಂಸ್ಕೃತ ವಿದ್ವಾಂಸರು)